ಮಂಗಳೂರು: ಕನ್ನಡವನ್ನು ಉಳಿಸಿ ಬೆಳೆಸಬೇಕಾದದ್ದು ಭಾಷಣಗಳ ಮೂಲಕ ಅಲ್ಲ. ಕನ್ನಡ ಶಾಲೆಗಳಿಗೆ ಸರಕಾರ ಶಿಕ್ಷಕರನ್ನು ನೀಡುವ ಮೂಲಕ ಎಂದು ಅರ್ಕುಳ ಶ್ರೀರಾಮ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಎ.ಕೆ ಜಯರಾಮ್ ಶೇಖ ಅಭಿಪ್ರಾಯಪಟ್ಟರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ಅರ್ಕುಳ ಶ್ರೀರಾಮ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಸಾಹಿತ್ಯ ರಚನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಭಾಷೆಯನ್ನು ಸಾಹಿತ್ಯದ ಮೂಲಕ ಉಳಿಸಿ ಬೆಳೆಸುವಂತೆ ಭಾಷೆಯನ್ನು ಸಮರ್ಥವಾಗಿ ಕಲಿಯ ಬೇಕಾದರೆ ಶಿಕ್ಷಕರ ಅನಿವಾರ್ಯತೆಯಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್ ರೇವಣಕರ್- ಸಾಹಿತ್ಯ ನಮ್ಮ ಮನಸ್ಸನ್ನು ಅರಳಿಸುತ್ತದೆ. ಸಾಹಿತ್ಯದ ಮೂಲಕ ಸದ್ವಿಚಾರಗಳನ್ನು ತಿಳಿದುಕೊಂಡು ಬದುಕನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಇಂದಿನ ವಿದ್ಯಾರ್ಥಿಗಳ ದಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಸಂಸ್ಥೆಗಳ ಸಂಚಾಲಕರಾದ ಎ.ಗೋವಿಂದ ಶೆಣೈ, ಶ್ರೀರಾಮ ವಿದ್ಯಾ ಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕರಾದ ಕೆ. ಆರ್. ದೇವದಾಸ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ, ಮಂಗಳೂರು ತಾಲ್ಲೂಕು ಕ.ಸಾ.ಪ ಕಾರ್ಯಕಾರಿ ಸಮಿತಿಯ ಸದಸ್ಯ ಬಿ. ಕೃಷ್ಣಪ್ಪ ನಾಯ್ಕ್, ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಉಪಸ್ಥಿತರಿದ್ದರು.
ಸಾಹಿತ್ಯ ರಚನಾ ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ಕಥೆಗಳ ಕುರಿತು ಡಾ. ಮೀನಾಕ್ಷಿ ರಾಮಚಂದ್ರ, ಕವನಗಳ ಬಗೆಗೆ ರಘು ಇಡ್ಕಿದು, ಚುಟುಕು ಸಾಹಿತ್ಯದ ಬಗ್ಗೆ ಎನ್. ಸುಬ್ರಾಯ ಭಟ್ ಭಾಗವಹಿಸಿದ್ದರು. ಕನ್ನಡ ಗೀತೆಗಳ ಗಾಯನವನ್ನು ಶ್ರೀಮತಿ ರತ್ನಾವತಿ ಜೆ.ಬೈಕಾಡಿ ನಡೆಸಿಕೊಟ್ಟರು
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ನಿರೂಪಿಸಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಕೆ ಆರ್. ದೇವದಾಸ್ ಸ್ವಾಗತಿಸಿದರು. ರಘು ಇಡ್ಕಿದು ವಂದಿಸಿದರು.
إرسال تعليق