ಕಾಡ ಮನೆಯನು ತೊರೆದು ಬಂದಿದೆ
ನಾಡಿನಾಸರೆ ಬಯಸಿದೆ..
ನವಿಲು,ಗರಿಗಳ ಬಿಡಿಸಿ ಕುಣಿದಿದೆ
ಅದರ ಕೇಂಕಣ ಕೇಳಿದೆ..
ನವಿಲು ನಾಟ್ಯವನಾಡೆ ಬಯಲಲಿ
ನೋಡಿ ಮನಸನು ತುಂಬಿದೆ..
ದೇವ ಸೃಷ್ಟಿಯ ಚೆಲುವು ಕಣ್ಣಲಿ
ಕಂಡು ತಲೆಯನು ತೂಗಿದೆ..
ಮೋಡ ಬಾನಲಿ ಕವಿದು ತುಂಬಲು
ಮಳೆಯು ಹನಿಯಲು ತೊಡಗಲು
ರೆಕ್ಕೆ ಹರಡಿಸಿ ಕುಣಿವ ಸಂಭ್ರಮ..
ನಿನ್ನ ನರ್ತನ ಡಿಂಡಿಮ ...
ಹೆಚ್ಚುಯೆತ್ತರ ಹಾರಲಾರದ
ಸ್ಕಂದ ವಾಹನವಂದದ
ರೂಪ ಹೊಂದಿದೆ ಹಕ್ಕಿ ಕುಲದಲಿ
ಹೆಸರು ಮಾಡಿದೆ ಚೆಲುವಲಿ..
ಬಾಲಕೃಷ್ಣನ ಶಿರಕೆ ಶೋಭೆಯ
ತಂದೆ ಚೆಂದದ ಗರಿಯೇ
ದೇವನೊಲುಮೆಯ ಪಡೆದ ಜೀವಿಯೆ
ಧನ್ಯ ಮಯೂರ ಸಿರಿಯೇ....
ನಲಿದು ಹರ್ಷದಿ ಬಾರೆ ನವಿಲೇ
ಬೆಡಗ ನೋಟದಿ ಮಿಗಿಲೇ ..
ಸುತ್ತ ಹಬ್ಬಿ ತಬ್ಬಿದ ಮುಗಿಲೇ
ಚೆನ್ನ ನರ್ತನ ನೋಡಲೆ ..
ನಿನ್ನ ಸಂತತಿವಳಿದು ಹೋಗುವ
ಭಯವು ಮೂಡಿದೆ ಮನದಲಿ..
ನವಿಲುಯಿಲ್ಲದ ಲೋಕ ಶೂನ್ಯವ
ತಂದೆ ತರುವುದು ಎದೆಯಲಿ ...
-ಗುಣಾಜೆ ರಾಮಚಂದ್ರ ಭಟ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment