ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುತ್ತೂರಿನ ಸೌಮ್ಯಾ ಭಟ್‌ ಹತ್ಯೆ ಘಟನೆಗೆ 22 ವರ್ಷ, ಕುಟುಂಬಕ್ಕೆ ಇನ್ನೂ ದಕ್ಕದ ನ್ಯಾಯ

ಪುತ್ತೂರಿನ ಸೌಮ್ಯಾ ಭಟ್‌ ಹತ್ಯೆ ಘಟನೆಗೆ 22 ವರ್ಷ, ಕುಟುಂಬಕ್ಕೆ ಇನ್ನೂ ದಕ್ಕದ ನ್ಯಾಯ



ಪುತ್ತೂರು: ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಪುತ್ತೂರಿನ ವಿದ್ಯಾರ್ಥಿನಿ ಸೌಮ್ಯಾ ಭಟ್‌ ಕೊಲೆ ಪ್ರಕರಣಕ್ಕೆ ಇಂದಿಗೆ 22 ವರ್ಷ. ವಿವೇಕಾನಂದ ಕಾಲೇಜಿನ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯನ್ನು ಹೊಂಚು ಹಾಕಿ ಬೇಟೆಯಾಡಿ ಅತ್ಯಾಚಾರಕ್ಕೆ ಹವಣಿಸಿ ಅದು ಸಾಧ್ಯವಾಗದಿದ್ದಾಗ ಕೊಲೆ ಮಾಡಿದ್ದ ಪಾತಕಿ ಅಶ್ರಫ್‌. ಭಾರತೀಯ ಸೇನೆಯಲ್ಲಿ ಮರಾಠ ಪದಾತಿ ದಳದ ಸೈನಿಕನಾಗಿದ್ದ ಅವನು 'ಮಿಲಿಟ್ರಿ' ಅಶ್ರಫ್ ಎಂದೇ ಕರೆಸಿಕೊಳ್ಳುತ್ತಿದ್ದ.


ಅಂದು ಪಾತಕ ನಡೆಸಿ ಪರಾರಿಯಾದವನು ಇಂದಿಗೂ ಪೊಲೀಸರ ಕೈಗೆ ಸಿಕ್ಕದೆ ತಲೆಮರೆಸಿಕೊಂಡಿದ್ದಾನೆ. ಸೌಮ್ಯಾ ಭಟ್ ಕುಟುಂಬಕ್ಕೆ ನ್ಯಾಯ ಇನ್ನೂ ಸಿಕ್ಕಿಲ್ಲ.


ಹಿನ್ನೋಟ:

ಅದು 1997ನೇ ಇಸವಿ, ಆಗಸ್ಟ್‌ 7ನೇ ದಿನಾಂಕ.  ಸಂಜೆ 5 ಗಂಟೆಯ ಸಮಯ. ಕಾಲೇಜು ಮುಗಿಸಿ ಬಸ್ಸಿನಿಂದ ಕಬಕದಲ್ಲಿ ಇಳಿದ ಸೌಮ್ಯಾ ಕಬಕದಿಂದ ಕೆದಿಲಕ್ಕೆ ಹೋಗುವ ಒಳ ರಸ್ತೆಯಲ್ಲಿ ರೈಲ್ವೆ ಹಳಿಯನ್ನು ದಾಟಿ ತನ್ನಷ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಅದೊಂದು ನಿರ್ಜನ ಪ್ರದೇಶ. ರಸ್ತೆಯ ಎರಡೂ ಬದಿಗಳಲ್ಲಿ ಮನೆಗಳಿಲ್ಲ. ಮೋಡ ಮುಸುಕಿತ್ತು. ಕತ್ತಲಾವರಿಸಿತ್ತು. ನಿಜಕ್ಕೂ ಭಯ ಹುಟ್ಟಿಸುವ ವಾತಾವರಣ. ಆದರೆ ಸೌಮ್ಯಳಲ್ಲಿ ಅಳುಕಿರಲಿಲ್ಲ. ಯಾಕೆಂದರೆ ಅದು ಅವಳು ದಿನ ನಿತ್ಯ ಉಪಯೋಗಿಸುವ ರಸ್ತೆ. ಹಾಗಾಗಿ ನಿರ್ಭೀತಳಾಗಿ ಅವಳು ನಡೆಯುತ್ತಿದಳು.


ಆದರೆ ಅವಳಿಗೆ ಗೊತ್ತಿರಲಿಲ್ಲ, ಕಬಕಕ್ಕೆ  ಆ ಪಾತಕಿ ಬಂದಿದ್ದ…! ಮಿಲಿಟರಿಯಿಂದ ತಪ್ಪಿಸಿಯೋ, ರಜೆ ಪಡೆದೋ ಒಂದು ತಿಂಗಳ ಹಿಂದೆ ಬಂದಿದ್ದ. ಬಂದವನೇ ಈ ಘಟನೆ ನಡೆಯುವ ಎರಡು ದಿನದ ಹಿಂದೆ ಸೌಮ್ಯಳ ತಂದೆ ಗಣಪತಿ ಭಟ್ಟರನ್ನು  ಭೇಟಿಯಾಗಿ ಸೌಮ್ಯಳ ಬಗ್ಗೆ ವಿಚಾರಿಸಿದ್ದ.  'ಅವನು' ಸೌಮ್ಯಳ ಕ್ಲಾಸ್ ಮೇಟ್ ಆಗಿರಬಹುದು ಎಂದು ಊಹಿಸಿದ ಗಣಪತಿ ಭಟ್ಟರು ಹೆಚ್ಚು ಆಲೋಚಿಸದೆ ಸೌಮ್ಯ ಕಾಲೇಜಿಗೆ ಹೋಗುವ ವಿಷಯ ತಿಳಿಸಿದ್ದರು.  ಆ ಪಾತಕಿಯೇ ಕುದಂಬ್ಲಾಜೆಯ ಇಬ್ರಾಹಿಂನ ಮಗ  ಅಶ್ರಫ್ ಯಾನೆ ಮಿಲಿಟರಿ ಅಶ್ರಫ್. ಅವನ ವಯಸ್ಸು 22


ಆತ  ಒಬ್ಬ ವಿಕೃತ ಕಾಮಿ. ಈ ಪ್ರಕರಣಕ್ಕೆ  ಒಂದು ವಾರದ ಹಿಂದೆ ಮನೆಯೊಂದಕ್ಕೆ ನುಗ್ಗಿದ್ದ ಈತ ಅಲ್ಲಿನ ಮಹಿಳೆಯ ನೈಟಿಯನ್ನು ಹಾಕಿಕೊಂಡು ನಿಂತಿದ್ದ…! ಅದೃಷ್ಟಕ್ಕೆ  ಮನೆಯವರಿಗೆ ಇದು ಗೊತ್ತಾಗಿ ಅವನನ್ನು ಮನೆಯಿಂದ ಓದ್ದೋಡಿಸಿದ್ದರು.


ಸೌಮ್ಯ ಭಟ್ ಕೊಲೆ ನಡೆಯುವ ಎರಡು ದಿನ ಮೊದಲು ಹತ್ತಿರದಲ್ಲೇ ಮನೆಯೊಂದಕ್ಕೆ ನುಗ್ಗಿ ಹುಡುಗಿಯ ಮೇಲೆ ಕೈ ಮಾಡಿದ್ದ. ಆದರೆ ಅ ವಿಷಯ ಬಹಿರಂಗವಾಗಿರಲಿಲ್ಲ. ಸೌಮ್ಯಳ ದುರದೃಷ್ಟವೋ ಏನೋ, ಈ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದದ್ದು, ಆಕೆಯ ಸಾವಿನ ಬಳಿಕವೇ.


ಅಂದು ಏನಾಗಿತ್ತು?

ಮೋಡ ಮುಸುಕಿದ ಕತ್ತಲಾವರಿಸಿದ ಇಳಿ ಸಂಜೆಯ ವೇಳೆ ಪುಸ್ತಕವನ್ನು ಎದೆಗವಚಿಕೊಂಡು ಆ ನಿರ್ಜನ ರಸ್ತೆಯಲ್ಲಿ ಎಂದಿನಂತೆ ತಲೆ ತಗ್ಗಿಸಿಕೊಂಡು ಮನೆಯತ್ತ ನಡೆಯುತ್ತಿದ್ದ ಸೌಮ್ಯಳ ಎದುರು ಹಠಾತ್ತನೆ ಅ ನರರೂಪಿ ರಾಕ್ಷಸ ನಿಂತಿದ್ದ. ಕಬಕ ಬಸ್ ಸ್ಟ್ಯಾಂಡ್ ನಿಂದಲೇ ಆಕೆಯನ್ನು ಕದ್ದು ಹಿಂಬಾಲಿಸುತ್ತಿದ್ದ.  ಮೊದಲೇ  ನಿಗದಿಪಡಿಸಿದ್ದ ನಿರ್ಜನ ಪ್ರದೇಶಕ್ಕೆ  ಸೌಮ್ಯ ತಲುಪುವ ವರೆಗೆ ಕಾದಿದ್ದ ಅವನು, ತನ್ನ ಕಾಮ ತೃಷೆಯನ್ನು ಪೂರೈಸಲು, ಆಕೆಯ ಮೇಲೆ ಮುಗಿಬಿದ್ದಿದ್ದ. ಆದರೂ ಅವಳು ಕೊಸರಾಡಿ ಹಿಡಿತದಿಂದ ತಪ್ಪಿಸಿಕೊಂಡು ಓಟಕಿತ್ತಳು. ಮಾನವನ್ನು ಉಳಿಸಿಕೊಂಡಳು.


ಅವಳು ಓಡಿ ತಪ್ಪಿಸಿಕೊಳ್ಳುವುದನ್ನು ನೋಡಿದ ಅಶ್ರಫ್ ವ್ಯಗ್ರನಾಗಿದ್ದ. ಜೇಬಿನಿಂದ ಚಾಕು ಹೊರ ತೆಗೆದು ಅವಳನ್ನು ಬೆನ್ನಟ್ಟಿ ಇರಿದ. ಒಂದಲ್ಲ, ಎರಡಲ್ಲ 32 ಬಾರಿ ಸಿಕ್ಕಸಿಕ್ಕಲ್ಲಿ ಇರಿದು ಕೊಂದು ಹಾಕಿದ ಧೂರ್ತ.  ಸೌಮ್ಯಳ ಕುತ್ತಿಗೆಯೊಳಗೆ ಚೂರಿ ಇರಿದು, ಚೂರಿಯನ್ನು ಒಂದು ಸುತ್ತು ತಿರುಗಿಸಿದ್ದ. ಅಷ್ಟು ಪೈಶಾಚಿಕವಾಗಿ ಹಲ್ಲೆ ಮಾಡಿದ್ದ. ಆಕೆ ಮತ್ತೆ ಕೊಸರಾಡುವ ಪ್ರಶ್ನೆಯೇ ಇರಲಿಲ್ಲ. ಅಲ್ಲೇ ಆಕೆ ಹೆಣವಾಗಿ ಹೋಗಿದ್ದಳು. ರಕ್ತ ಸಿಕ್ತ ದೇಹ, ದೂರದಲ್ಲಿ ಬಿದ್ದಿದ್ದ ಪುಸ್ತಕಗಳು, ಅವರಿಬ್ಬರ ಸಂಘರ್ಷ ಕೊಸರಾಟಗಳಿಗೆ ಸಾಕ್ಷಿಯಾದ ರಸ್ತೆಯಲ್ಲಿನ ಗುರುತುಗಳು ನಡೆದ ಬೀಭತ್ಸ ಘಟನೆಯನ್ನು ವಿವರಿಸುತ್ತಿತ್ತು. ಕೊಲೆ ಮಾಡಿ ಆಕೆಯ ಮೇಲಿದ್ದ ಬಟ್ಟೆಯನ್ನು ಅಸ್ತವ್ಯಸ್ತ ಮಾಡಿ ಖದೀಮ ಅಶ್ರಫ್ ಅಲ್ಲಿಂದ ಓಟಕಿತ್ತಿದ್ದ.  


ಈ ಪ್ರಕರಣದ ಬಳಿಕ ಸೌಮ್ಯವಾಗಿದ್ದ ಪುತ್ತೂರು ಕೆಂಡವಾಗಿತ್ತು. ಹಿಂಸಾಚಾರ ಭುಗಿಲೆದ್ದಿತ್ತು.


ಸಂಜೆ ಸುಮಾರು 5 ಗಂಟೆಯ ವೇಳೆಗೆ ಈ ಘಟನೆ ನಡೆದಿತ್ತು. ಸ್ವಲ್ಪ ಸಮಯದ ನಂತರ ಕೂಲಿ ಕಾರ್ಮಿಕರು ರಸ್ತೆ ಬದಿಯಲ್ಲಿ ಬಿದ್ದಿದ್ದ ಸೌಮ್ಯಳ ಮೃತ ದೇಹವನ್ನು ಕಂಡು ಸ್ಥಳೀಯರಾದ ಶ್ಯಾಮ್ ಭಟ್ ಎಂಬವರಿಗೆ ತಿಳಿಸಿದರು. ಅಲ್ಲಿಂದ ಪುತ್ತೂರು ನಗರ ಸ್ಟೇಷನಿಗೆ ದೂರು ನೀಡಲಾಯಿತು. ತಕ್ಷಣ ಸ್ಥಳಕ್ಕೆ ಪುತ್ತೂರು ನಗರ ಠಾಣೆ ಇನ್‌ಸ್ಪೆಕ್ಟರ್ ಜೆ ಪಾಪಯ್ಯ, ಎಸ್ಐ. ರವೀಶ್ ಮತ್ತಿತರರು ಭೇಟಿ ನೀಡಿದರು. ಡಿವೈಎಸ್ಪಿ ಗಣಪತಿ ಸ್ಥಳಕ್ಕೆ ಹಾಜರಾದರು.


ಸೌಮ್ಯಳ ಮೃತ ದೇಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸ್ಪಷ್ಟಗೊಂಡ ಅಂಶವೆಂದರೆ ಹತ್ಯೆಗೆ ಮೊದಲು ಆಕೆಯ ಮೇಲೆ ಆಕ್ರಮಣ ನಡೆದಿದೆ. ಬಟ್ಟೆಗಳು ಯಥಾ ಸ್ಥಿತಿಯಲ್ಲಿದ್ದುದರಿಂದ ಆಕೆಯ ಮೇಲೆ ಅತ್ಯಾಚಾರ ನಡೆದಿರಲಿಲ್ಲ. ಆದರೆ ಪ್ರಯತ್ನ ನಡೆದಿದೆ. ವಿಫಲಗೊಂಡಿದರಿಂದ ಕ್ರೋಧಗೊಂಡು ಈ ಕೃತ್ಯ ನಡೆಸಲಾಗಿದೆ ಎಂಬುದು ಪೊಲೀಸರಿಗೆ ಮನವರಿಕೆಯಾಗಿತ್ತು.


ರಜೆ ಪಡೆದು ಬಂದ ಒಂದು ತಿಂಗಳ ಹಿಂದಿನಿಂದಲೂ ಅವನು ಸೌಮ್ಯಳನ್ನು ಗಮನಿಸುತ್ತಿದ್ದ ಎಂಬ ವಿಷಯ, ಸೌಮ್ಯಳ ಕೊಲೆ ವಿಚಾರ ಪ್ರಕಟವಾಗುತ್ತಲೇ  ಬಹಿರಂಗವಾಯಿತು. ಪೊಲೀಸರ ಚಾಕಚಕ್ಯತೆಯಿಂದಾಗಿ ಕೊಲೆ ನಡೆದು ಮೂರು ಗಂಟೆಯೊಳಗಡೆ ಕಾಮುಕ ಪಾತಕಿ ಅಶ್ರಫ್‌ ಪುತ್ತೂರು ಠಾಣೆಯೊಳಗೆ ನಿಂತಿದ್ದ. ಆದರೆ ಸಿಕ್ಕಿಬಿದ್ದ  ಆರೋಪಿಯನ್ನು ರಕ್ಷಿಸಲು ಕೆಲವು ಪಟ್ಟಭದ್ರರು ಅವನ ಬೆಂಬಲಕ್ಕೆ ನಿಂತಿದ್ದರು. ಈ ಘಟನೆ ಹಿಂದುಗಳನ್ನು ರೊಚ್ಚಿಗೆಬ್ಬಿಸಿತ್ತು.

 

ದುಷ್ಟ ಅಶ್ರಫ್‌ನ ರಕ್ಷಣೆಗೆ ಯತ್ನ:

ಅಂದು ನಾಗರ ಪಂಚಮಿಯ ಹಿಂದಿನ ದಿನ ಈ ಕೊಲೆ ನಡೆದಿತ್ತು. ಆಗ ರಾಜ್ಯದಲ್ಲಿ ಜೆ.ಹೆಚ್ ಪಟೇಲ್ ನೇತ್ರತ್ವದ ಸಂಯುಕ್ತ ಜನತಾ ದಳ  ಸರಕಾರ ಅಸ್ತಿತ್ವದಲ್ಲಿತ್ತು. ಉಸ್ತುವಾರಿ ಸಚಿವರಾಗಿದ್ದವರು  ಮೊಯಿದೀನ್.  ಅಶ್ರಫ್ ಅನ್ನು ಬಂಧಿಸಿದ್ದ ರಾತ್ರಿಯೇ ಅವನನ್ನು ಮಾನಸಿಕ ಅಸ್ವಸ್ಥ, ಹುಚ್ಚಾ, ಸೈಕೋ ಎಂದು ಬಿಂಬಿಸುವ ಪ್ರಯತ್ನಗಳು ಶುರುವಾದವು. ಆ ಮೂಲಕ ಅವನನ್ನು ಕಾನೂನಿನ ಕುಣಿಕೆಯಿಂದ ರಕ್ಷಿಸುವ ದುಷ್ಟ ಸಂಚಿಗೆ ಕೆಲವರು ಮುಂದಾಗುತ್ತಾರೆ. ಮಾನಸಿಕ ಅಸ್ವಸ್ಥ ಎಂದು ಬಿಂಬಿಸುವ ಮೂಲಕ ಕೂಡಲೇ ಜಾಮೀನು ದೊರಕುವಂತೆ ಮಾಡಬಹುದು ಹಾಗೂ ಜನರ ನಡುವೆ ಅ ರಕ್ಕಸನಿಗೊಂದು ಅನುಕಂಪ ಸೃಷ್ಟಿಸಬಹುದು ಎಂಬ ದುರಾಲೋಚನೆ ಇವರದು.


ಇನ್ನು ಕೆಲವರು ಅವನು 'ನಮ್ಮವ' ತುಂಬಾ ಒಳ್ಳೆಯವ, ಅವನು ಹಾಗೆಲ್ಲಾ ಮಾಡುವವನಲ್ಲ ಎಂದು ವಾದಿಸಲಾರಂಭಿಸಿದರು.  ಸಚಿವ ಮೊಯಿದ್ದೀನ್ ಕೂಡ ಇಂತಹವರ ಪರವಾಗಿಯೇ ವಾಲುವ ಸೂಚನೆ ದೊರೆತಾಗ  ಜನ ವ್ಯಗ್ರರಾದರು. ಆಗ ಪುತ್ತೂರಿನ ಬಹುಸಂಖ್ಯಾತ ಜನತೆಗೆ ಸರಕಾರವೇ ಆರೋಪಿಯನ್ನು ರಕ್ಷಿಸಲು ತೊಡಗುತ್ತಿದೆ ಎಂಬ ಅನುಮಾನ ಬರತೊಡಗಿತ್ತು. ಪುತ್ತೂರು ನಿಗಿನಿಗಿ ಕೆಂಡವಾಯ್ತು. ಸೌಮ್ಯಾಳ ಕೊಲೆಯಾದ ಮರುದಿನ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದರು.


ನ್ಯಾಯ ವಂಚಿತ ಸೌಮ್ಯಾ ಕುಟುಂಬ:

ಕೊಲೆಯಾದ ಮೂರೇ ಗಂಟೆಯಲ್ಲಿ ಆರೋಪಿಯ ಬಂಧನವಾಗುತ್ತದೆ.  ಅದಾದ ಎರಡು ತಿಂಗಳಲ್ಲಿ ಆರೋಪಿ ಮಂಗಳೂರಿನಿಂದ ತಪ್ಪಿಸಿಕೊಳ್ಳುತ್ತಾನೆ. ಮತ್ತೆ ಕೆಲವೇ ದಿನದಲ್ಲಿ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿ ಅವನನ್ನು ಬಂಧಿಸಲಾಗುತ್ತದೆ. ಅನಂತರ ಎರಡೇ ವರ್ಷದಲ್ಲಿ ಮತ್ತೆ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾನೆ ಅಶ್ರಫ್. ಹೀಗೆ ತಪ್ಪಿಸಿಕೊಂಡ ಅಶ್ರಫ್ ಮತ್ತೆ ಸೆರೆಯಾಗುವುದೇ ಇಲ್ಲ. ಅವನೇ ತಪ್ಪಿಸಿಕೊಂಡನೇ ಅಥವಾ ಪೊಲೀಸರೇ ಬಿಟ್ಟರೋ ಎಂಬ ಅನುಮಾನಕ್ಕೆ ಇನ್ನೂ ಉತ್ತರ ದೊರೆತಿಲ್ಲ.  ಅವನನ್ನು ಮತ್ತೆ ಬಂಧಿಸುವ ಗಂಭೀರ  ಪ್ರಯತ್ನ ಪೊಲೀಸರೂ ನಡೆಸಿಲ್ಲ. ಜನರಿಗೂ ಸೌಮ್ಯಾಳ ಘಟನೆ ಈಗ ಮರೆತೇ ಹೋಗಿದೆ. ಸೌಮ್ಯಾಳ ಸ್ಮಾರಕವಾಗಿ ಕಬಕದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷ ಆಕೆಯನ್ನು ನೆನಪಿಸಿಕೊಳ್ಳಲು ಈಗ ಇರುವುದು ಇದೊಂದೇ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post