ವೇಣೂರು: ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ ಸಮಾರೋಪ ಸಮಾರಂಭ
ಹೇಮಾವತಿ ವೀ. ಹೆಗ್ಗಡೆಯವರನ್ನು ಗೌರವಿಸಲಾಯಿತು.
ಉಜಿರೆ: ಮನೆಯೆ ಮಕ್ಕಳ ಮೊದಲ ಪಾಠಶಾಲೆ ಎಂಬಂತೆ ಸದಾಚಾರ ಮತ್ತು ಸದ್ವಿಚಾರಗಳೊಂದಿಗೆ ಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳು ಹೆಚ್ಚಾಗಿ ಹಿರಿಯರು ಮಾಡುವುದನ್ನು ನೋಡಿ ಕಲಿಯುತ್ತಾರೆ, ಅನುಕರಿಸುತ್ತಾರೆ. ಧರ್ಮದ ತಳಹದಿಯ ಭದ್ರ ಬುನಾದಿಯೊಂದಿಗೆ ಹಿರಿಯರು ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಬೇಕು ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.
ಅವರು ಭಾನುವಾರ ವೇಣೂರಿನಲ್ಲಿ ಬಾಹುಬಲಿ ಸಭಾಭವನದಲ್ಲಿ ಧಾರ್ಮಿಕ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೈನಧರ್ಮದ ರಸಪಾಕದಲ್ಲಿ ನಮ್ಮನ್ನು ನಾವು ಗಟ್ಟಿ ಮಾಡಿಕೊಳ್ಳಬೇಕು. ದೃಢ ಸಂಕಲ್ಪದೊಂದಿಗೆ ಜೈನರು ಮದ್ಯ, ಮಾಂಸ ಮತ್ತು ಮಧು ತ್ಯಾಗ ಮಾಡಬೇಕು. ಜೀವನದಲ್ಲಿ ಸಣ್ಣ ವಿಕಲ್ಪ ಕೂಡಾ ನಮ್ಮನ್ನು ದೊಡ್ಡ ಪ್ರಪಾತಕ್ಕೆ ತಳ್ಳುತ್ತದೆ. ದೇಹದ ಬಗ್ಯೆ ಹೆಚ್ಚು ಕಾಳಜಿ ವಹಿಸುವ ನಾವು ಆತ್ಮಕಲ್ಯಾಣದ ಬಗ್ಯೆಯೂ ಚಿಂತನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಆದುದರಿಂದ ಮೊದಲು ನಮ್ಮನ್ನು ನಾವು ತಿದ್ದಿಕೊಂಡು ಆದರ್ಶ ಜೀವನ ನಡೆಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಜೈನಧರ್ಮದ ಮೂಲ ಸಿದ್ದಾಂತಗಳನ್ನು, ತತ್ವಗಳನ್ನು ಸರಳವಾಗಿ ವಿವರಿಸುವ ವಿದ್ವಾಂಸರ ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಕಾರ್ಕಳದ ಕುಮಾರಿ ಪ್ರಾಂಜಲಿ ಮತ್ತು ಮೂಡಬಿದ್ರೆಯ ಪ್ರತಾಪ್ ಜೈನ್ ಶ್ರೇಷ್ಠ ಶಿಬಿರಾರ್ಥಿಗಳಾಗಿ ಆಯ್ಕೆಯಾದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೂಡಬಿದ್ರೆಯ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ, ಶಿಬಿರದಲ್ಲಿ ಪಡೆದ ಅನುಭವವನ್ನು ಮಕ್ಕಳು ನಿತ್ಯವೂ ಪಾಲನೆಮಾಡಬೇಕು ಎಂದು ಹೇಳಿದರು.
ಮಂಗಳೂರಿನ ಉದ್ಯಮಿ ಜೈನ್ ಟ್ರಾವೆಲ್ಸ್‍ನ ಮಾಲಕ ರತ್ನಾಕರ ಜೈನ್ ಶುಭಾಶಂಸನೆ ಮಾಡಿ, ಇಂದಿನ ಯಾಂತ್ರಿಕ ಬದುಕು ಮತ್ತು ಒತ್ತಡದ ಜೀವನದಲ್ಲಿ ಧಾರ್ಮಿಕ ಶಿಬಿರಗಳು ಧರ್ಮಜಾಗೃತಿ ಮತ್ತು ಧರ್ಮಪ್ರಭಾವನೆಯನ್ನು ಉಂಟು ಮಾಡುತ್ತವೆ. ಜೈನಧರ್ಮದ ಅಹಿಂಸೆ ಮತ್ತು ಪಂಚಾಣು ವ್ರತಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ ಎಂದರು.
ನಿಕ್ಷಿತ್ ಪುತ್ತಿಲ ಮತ್ತು ಕುಮಾರಿ ಶಮಾ ಪೆರಿಂಜೆ ಶಿಬಿರದ ಅನುಭವವನ್ನು ಹೇಳಿದರು. ಆರಂಭದಲ್ಲಿ ಸುಧೀರ್ ಕುಮಾರ್ ಸ್ವಾಗತಿಸಿದರು. ಪ್ರೊ. ಪ್ರಮೋದ್ ಕುಮಾರ್ ಧನ್ಯವಾದವಿತ್ತರು. ಮಹಾವೀರ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರ್ವಹಿಸಿದರು. ಧರ್ಮಸ್ಥಳದ ಹೇಮಾವತಿ ಹೆಗ್ಗಡೆ ಅವರನ್ನು ಗೌರವಿಸಲಾಯಿತು. 122 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق