ಹಿಂದೂ ಧರ್ಮದ ಪ್ರಕಾರ ಭಾರತೀಯರು ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸುವ ಪವಿತ್ರ ಹಬ್ಬವೇ ರಕ್ಷಾಬಂಧನ. ಸಮಾಜದಲ್ಲಿನ ಸಹೋದರತ್ವ ಭಾವವನ್ನು ಗಟ್ಟಿಗೊಳಿಸುವ ಈ ರಕ್ಷಾ ಬಂಧನ ಸಂಬಂಧಗಳ ನಡುವೆ ನಂಬಿಕೆ, ಭರವಸೆಗಳನ್ನು ಬೆಸೆಯುವ, ನಮ್ಮವರನ್ನು ಪ್ರಾಥ೯ನೆ ಮತ್ತು ಹಾರೈಕೆಗಳೊಳಗೆ ಕ್ಷೇಮವಾಗಿ ಬಂಧಿಸುತ್ತದೆ. ಪ್ರತೀವರ್ಷ ಎಲ್ಲಾ ಸೋದರಿಯರು ಉತ್ಸುಕದಿಂದ ಆಚರಿಸುವ ಈ ಹಬ್ಬವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.
ಅಣ್ಣ ತಂಗಿ, ಅಕ್ಕ ತಮ್ಮ ಅನ್ನೋ ಸಂಬಂಧ ಬೆಳೆಯುತ್ತಾ ಪರಸ್ಪರ ಒಬ್ಬರಿಗೊಬ್ಬರು ರಕ್ಷಕರಾಗಿ ನಿಲ್ಲುತ್ತಾರೆ. ಇವರ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಇರುವ ಹಬ್ಬವೇ ರಾಖಿ ಹಬ್ಬ ಅಥವಾ ರಕ್ಷಾಬಂಧನ. ಈ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈ ಮಣಿಕಟ್ಟಿಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆಗಾಗಿ ಅಣ್ಣ, ಅಣ್ಣನ ಆರೋಗ್ಯ, ಆಯಸ್ಸು ವೃದ್ಧಿಗೆ ತಂಗಿ ದೇವರಲ್ಲಿ ಬೇಡಿ ರಾಖಿ ಕಟ್ಟಿ ಒಬ್ಬರಿಗೊಬ್ಬರು ಮಾತು ಕೊಡುವ ಮೂಲಕ ಈ ಹಬ್ಬವನ್ನು ಅಥ೯ಪೂಣ೯ವಾಗಿ ಆಚರಿಸುತ್ತಾರೆ.
ರಕ್ತಸಂಬಂಧದೊಳಗೆ ಮಾತ್ರ ಅಣ್ಣ ತಂಗಿ ಸಂಬಂಧ ಇರುವುದಿಲ್ಲ. ಅಣ್ಣ ತಂಗಿ ಸಂಬಂಧದ ಅಥ೯ ತಿಳಿದು, ತೋರಿಸುವ ಪ್ರೀತಿಯಲ್ಲೂ ಸಹೋದರತ್ವ ಭಾವ ಇರುವುದು. ಪ್ರೀತಿ, ಮಮತೆ, ಗೌರವದ ಸಂಕೇತವಾಗಿರುವ ಈ ಪವಿತ್ರ ರಕ್ಷಾಬಂಧನ ದಿನದಂದು ಕಟ್ಟುವ ರಕ್ಷಾ ದಾರವೊಂದು ಅಕ್ಕ ತಮ್ಮ, ಅಣ್ಣ ತಂಗಿಯರ ನಡುವಿನ ಪ್ರೀತಿಗೆ ಸೇತುವೆಯಾಗುತ್ತದೆ. ಐಕ್ಯತೆ ಮತ್ತು ಬದ್ಧತೆಯನ್ನು ತರುವ ಮೂಲಕ ಸಮಾಜದಲ್ಲಿರುವ ಪ್ರತಿಯೊಬ್ಬರನ್ನೂ ಪರಸ್ಪರ ರಕ್ಷಿಸಿಕೊಳ್ಳುವಂತೆ ಮತ್ತು ಸಹಬಾಳ್ವೆಗೆ ಈ ಹಬ್ಬವು ಅಡಿಪಾಯವಾಗಿದೆ.
ನಾಲ್ಕೆಳೆಯ ದಾರವೊಂದು ಪೂರ್ತಿ ಬದುಕಿಗಾಗುವಷ್ಟು ಮಮತೆಯನ್ನು ತುಂಬುತ್ತದೆ; ಈ ಹಬ್ಬ, ಸೋದರಸ್ನೇಹದ ಮಜಲನ್ನು ವಿಸ್ತರಿಸುತ್ತದೆ. ಆ ಮೂಲಕ ಬದುಕಿನೆಡೆಗೊಂದು ಭರವಸೆಯನ್ನೂ ಮೂಡಿಸುತ್ತದೆ. ನನ್ನ ಎಲ್ಲಾ ಅಣ್ಣ ತಮ್ಮಂದಿರಿಗೆ ರಕ್ಷಾ ಬಂಧನ ದಿನದ ಹಾರ್ದಿಕ ಶುಭಾಶಯಗಳು.
-ಸರೋಜ ಪಿ ಜೆ ದೋಳ್ಪಾಡಿ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಪದವಿ ಕಾಲೇಜು ಪುತ್ತೂರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment