ಮಂಗಳೂರು: "ಈ ಶತಮಾನದ ಚಾರಿತ್ರಿಕ ಕಾರ್ಯಕ್ರಮದಲ್ಲಿ ಎಂಟನೆಯ ಸಂಮಾನ ಎಂಟರ ನಂಟಿನ ಕೇಶವನಿಗೆ ಆದದ್ದು ಯೋಗಾಯೋಗ" ಎಂದು ಮಂಗಳೂರಿನ ಮಹಾಮಾಯಾ ದೇವಸ್ಥಾನದ ಶ್ರೀ ವಾಗೀಶ್ವರೀ ಶತಮಾನೋತ್ಸವ ಸಂಮಾನ- 8ನ್ನು ಸ್ವೀಕರಿಸಿದ ಹಿರಿಯ ಕಲಾವಿದ ಕೇಶವ ಶಕ್ತಿನಗರ ಕೃತಜ್ಞತೆಯ ನುಡಿಯನ್ನಾಡಿದರು.
ವೇಷಧಾರಿಯಾಗಿ, ಯಕ್ಷಗಾನ ಪ್ರಸಾಧನಾ ಕಲಾವಿದನಾಗಿ, ಯಕ್ಷಗಾನ ಕಿರೀಟ ತಯಾರಕನಾಗಿ, ಸಂಘಟಕನಾಗಿ ನಾಲ್ಕೂವರೆ ದಶಕಗಳಿಂದ ಮಂಗಳೂರು ಪರಿಸರದಲ್ಲಿ ಕಲಾಸಾಧಕನಾಗಿ ಗುರುತಿಸಲ್ಪಟ್ಟ ಕೇಶವ ಶಕ್ತಿನಗರ ಅವರನ್ನು ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು.
ಸಿ.ಬಿ.ಎನ್. ದಾಮೋದರ ಆಚಾರ್ಯ ಸಂಸ್ಮರಣೆ:
ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಹಿರಿಯ ಅರ್ಥಧಾರಿಗಳಾಗಿ ಪರಿಸರದ ಹಲವು ಸಂಘಗಳಲ್ಲಿ ಸುಮಾರು ಏಳು ದಶಕಗಳ ಕಾಲ ಅರ್ಥಧಾರಿಯಾಗಿ, ವೇಷಧಾರಿಯಾಗಿ "ಪುರಾಣ ಆಚಾರ್ಯ" ಎಂಬ ಖ್ಯಾತಿ ಪಡೆದಿದ್ದ ಸಿ.ಬಿ.ಯನ್. ದಾಮೋದರ ಆಚಾರ್ಯ ಅವರ ಸಂಸ್ಮರಣೆಯನ್ನು ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿಯವರು ಮಾಡಿ ಆಚಾರ್ಯರ ಅದ್ಭುತ ಪುರಾಣ ಜ್ಞಾನಸಂಪತ್ತು ಹಾಗೂ ಪ್ರಸಂಗ ಸಾಹಿತ್ಯ ಕಂಠಪಾಠದ ಅಪೂರ್ವ ಜ್ಞಾಪಕ ಶಕ್ತಿಯನ್ನು ನೆನಪಿಸಿದರು.
ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ 50 ಭಾನುವಾರ ನಿರಂತರ "ಸಂಮಾನ, ಸಂಸ್ಮರಣೆ, ತಾಳಮದ್ದಳೆ"ಯು ಮಹಾಮಾಯಾ ದೇವಸ್ಥಾನದ ಅಂಗಣದಲ್ಲಿ ನಡೆಯುತ್ತಿದೆ.
ಉದ್ಯಮಿ ರಾಜೇಶ್ ಪೈ ಕೈಕಂಬ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದ, ಸಂಘಟಕ ಸುರತ್ಕಲ್ ವಾಸುದೇವ ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಿ.ಟಿ. ಕುಲಾಲ್ ಅಭಿನಂದನಾ ಪತ್ರ ವಾಚಿಸಿದರು.
ಶತಮಾನೋತ್ಸವ ಸಮಿತಿಯ ನಾಗೇಶ ಪ್ರಭು, ಶಿವಪ್ರಸಾದ್ ಪ್ರಭು, ಅಶೋಕ್ ಬೋಳೂರು, ಪ್ರಪುಲ್ಲಾ ನಾಯಕ್ ಉಪಸ್ಥಿತರಿದ್ದರು. ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಅವರಿಂದ ಶ್ರೀರಾಮ ಚರಿತಾಮೃತ ಸರಣಿಯ "ಪಂಚವಟಿ" ತಾಳಮದ್ದಳೆ ನಡೆಯಿತು.
ಸಂಘದ ಉಪಾಧ್ಯಕ್ಷೆ ಶೋಭಾ ಐತಾಳ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق