ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ: ಹಿರಿಯ ಸಸ್ಯವಿಜ್ಞಾನಿ ಡಾ ಕೆ ಜಿ ಭಟ್ ನಿಧನ

ಉಡುಪಿ: ಹಿರಿಯ ಸಸ್ಯವಿಜ್ಞಾನಿ ಡಾ ಕೆ ಜಿ ಭಟ್ ನಿಧನ


ಉಡುಪಿ: ಸಸ್ಯ ವರ್ಗೀಕರಣ ಶಾಸ್ತ್ರವನ್ನು ತಪಸ್ಸಿನಂತೆ ಆಚರಿಸಿ ಉಡುಪಿ ಮಂಗಳೂರಿಗೆ ಶತಮಾನಗಳ ಕಾಲ ಅನುಪಮ ಎನಿಸಬಹುದಾದ ಅದ್ಭುತ ಕೊಡುಗೆಯನ್ನು ದಾಖಲಿಸಿದ್ದ ದೇಶ ಕಂಡ ಅದ್ಭುತ, ಹಿರಿಯ ಸಸ್ಯ ವಿಜ್ಞಾನಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ವಿಭಾಗ ಮುಖ್ಯಸ್ಥರೂ ಆಗಿದ್ದ ಡಾ ಕೆ. ಗೋಪಾಲಕೃಷ್ಣ ಭಟ್ಟರು ಅಲ್ಪಕಾಲದ ಅಸ್ವಾಸ್ಥ್ಯದಿಂದ ಇಂದು ಮುಂಜಾನೆ ಉಡುಪಿ ಚಿಟ್ಪಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.


Flora of udupi, flora of dakshina Kannada ಎನ್ನುವ ಅನನ್ಯ ಶ್ರಮ ಸಾಹಸದಿಂದ ಕೂಡಿದ ಬೃಹತ್ ಸಸ್ಯಶಾಸ್ತ್ರೀಯ ನಿಘಂಟು ಸಂಶೋಧನಾ ಗ್ರಂಥಗಳನ್ನು ರಚಿಸಿ ಎರಡು ಜಿಲ್ಕೆಗಳಲ್ಲಿರುವ ಸಮಗ್ರ ಸಸ್ಯಪ್ರಬೇಧಗಳ ಜಾತಕಗಳನ್ನು ಬಿಚ್ಚಿಕೊಟ್ಟು ಜಗತ್ತಿಗೇ ಅಮೂಲ್ಯ ಅಚ್ಚರಿ ಎನ್ನಬಹುದಾದ ಕೊಡುಗೆ ಕೊಟ್ಟವರು ಡಾ ಭಟ್ಟರು. ಅವರು ಉಡುಪಿಯಲ್ಲಿ ಕಂಡು ಹಿಡಿದ ಅಪೂರ್ವ ಸಸ್ಯಪ್ರಭೇದವೊಂದಕ್ಕೆ ಲಂಡನ್ ನ ಪ್ರತಿಷ್ಠಿತ ಬಯೋಲಜಿಕಲ್ ಸೊಸೈಟಿಯು ಅವರ ಹೆಸರನ್ನೇ ಇಟ್ಟು ಗೌರವಿಸಿದ್ದು ಭಟ್ಟರ ಅನನ್ಯ ಸಾಧನೆಗೆ ಶ್ರೇಷ್ಠತೆಗೆ ಸಾಕ್ಷಿ.


ಯಾವ ಸಾಧನೆಯೂ ಇಲ್ಲದೇ ಡಾಕ್ಟರೇಟ್ ಗಳನ್ನು ಬಿಕರಿಗಿಟ್ಟವರಂತೆ ವಿಶ್ವವಿದ್ಯಾಲಯಗಳು  ಆ ಪದವಿಯ ಮರ್ಯಾದೆ ಹರಾಜು ಮಾಡುತ್ತಿರುವ ಕಾಲಘಟ್ಟದಲ್ಲಿ ಭಟ್ಟರ ಸಾಧನೆಗಳನ್ನು ತಪಸ್ಸನ್ನು ಗುರುತಿಸಲು ನಮ್ಮ ವಿವಿಗಳು ಸರ್ಕಾರಗಳು ವಿಫಲವಾಗಿರುವ ಸಂಗತಿ ತೀರಾ ನೋವು ಬೇಸರ, ಮತ್ತು ಕೆಲವೊಮ್ಮೆ ಆಕ್ರೋಶವನ್ನೂ ತರಿಸುತ್ತವೆ.‌


ಉಡುಪಿ ಶಾಸಕ ಡಾ ರಘುಪತಿ ಭಟ್ಟರು ಸ್ವಲ್ಪ ಗಮನಿಸಿ ಇತ್ತೀಚೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ  ಕೊಡಿಸಿ ಸ್ವಲ್ಪ ಮಟ್ಟಿಗೆ ಉಡುಪಿಯ ಗೌರವ ಸಲ್ಲುವಂತೆ ಮಾಡಿದ್ದರು.


ಉಳಿದಂತೆ ಭಟ್ಟರ ಸಾಧನೆಗೆ ಸಲ್ಲಬೇಕಾಗಿದ್ದ ರಾಷ್ಟ್ರೀಯ ರಾಜ್ಯ ಗೌರವಗಳು ಸಲ್ಲದೇ ಹೋಯಿತಲ್ಲಾ ಎಂಬ ಕೊರಗು ಭಟ್ಟರ ಆಪ್ತ ವಲಯಕ್ಕೆ ಯಾವತ್ತೂ ಇರುತ್ತದೆ.


ಅತ್ಯಂತ ಶಿಸ್ತು, ಸಂಯಮ‌ ತಾಳ್ಮೆ, ಮೃದುಮಾತು, ನಿರ್ಲಿಪ್ತತೆ, ಸರಳತೆ ಸಂಶೋಧಕನಿಗಿರಬೇಕಾದ ಅನನ್ಯ ಏಕಾಗ್ರತೆ, ಶ್ರದ್ಧೆಗಳು ಭಟ್ಟರ ಸಜ್ಜನಿಕೆಯ ಶ್ರೇಷ್ಠ ವ್ಯಕ್ತಿತ್ವದ ಆಭರಣಗಳಾಗಿದ್ದವು. ಹವ್ಯಕ ಸಭಾ ಉಡುಪಿಗೂ ಅವರ ಮಾರ್ಗದರ್ಶನ ಲಭಿಸಿತ್ತು. ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಗೌರವಗಳು ಅವರಿಗೆ ಸಂದಿತ್ತು.


ಉಡುಪಿಯ ಹಿಂದು ಯುವಸೇನೆಯು ಸ್ವಾತಂತ್ರ್ಯ ಸುವರ್ಣ ಮಹೋತ್ಸವ ವರ್ಷದಲ್ಲಿ ಪುತ್ತಿಗೆ ಶ್ರೀಪಾದರ ಸಾನ್ನಿಧ್ಯ ಮತ್ತು ಹಿರಿಯ ಪತ್ರಕರ್ತ ಪದ್ಮಭೂಷಣ ದಿವಂಗತ ಎಂ ವಿ ಕಾಮತ್ ರ ಉಪಸ್ಥಿತಿಯಲ್ಲಿ ಅವರಿಗೆ ಜೈ ವಿಜ್ಞಾನ್ ಪುರಸ್ಕಾರದೊಂದಿಗೆ ಸಂಮಾನಿಸಿತ್ತು. ಮೂಲತಃ ಕಾಸರಗೋಡಿನ ಕಾಕುಜೆಯವರಾಗಿದ್ದ ಅವರು ಬಹುಪಾಲು ಜೀವನ ಉಡುಪಿಯಲ್ಲೇ ನಡೆಸಿದ್ದರು.


ಇತ್ತೀಚೆಗಷ್ಟೇ ಪ್ರೊ ಅರವಿಂದ ಹೆಬ್ಬಾರ್ ಅವರು ರಚಿಸಿದ "ಟ್ಯಾಕ್ಸೋನೊಮಿ ಭಟ್ಟರ ಯಾನ" ಕೃತಿ ಬಿಡುಗಡೆಯೊಂದಿಗೆ  ಅವರ ಆಪ್ತ ವಲಯ ಅವರನ್ನು ಸಾರ್ವಜನಿಕವಾಗಿ ಸಂಮಾನಿಸಿತ್ತು.‌ ಅವರು ಪತ್ನಿಯನ್ನು ಅಗಲಿದ್ದಾರೆ.


ಶ್ರೇಷ್ಠ ಜೀವನವನ್ನು ದಾಖಲಿಸಿ ಇಹದ ಯಾತ್ರೆ ಮುಗಿಸಿ ತೆರಳಿಸಿ ಡಾ ಕಾಕುಡೆ ಗೋಪಾಲಕೃಷ್ಣ ಭಟ್ಟರ ದಿವ್ಯಾತ್ಮಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಡಾ ಭಟ್ಟರ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಟ್ಟರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ಸದ್ಗತಿಯನ್ನು ಪ್ರಾರ್ಥಿಸಿ ಸಂದೇಶ ನೀಡಿದ್ದಾರೆ.

-ಜಿ ವಾಸುದೇವ ಭಟ್ ಪೆರಂಪಳ್ಳಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




hit counter



0 تعليقات

إرسال تعليق

Post a Comment (0)

أحدث أقدم