ಬಾಗಲಕೋಟೆ: ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರು ಇಂದು (ಫೆ.05) ಬೆಳಗ್ಗೆ ನಿಧನ ಹೊಂದಿದರು.
ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿನ ತಮ್ಮ ಭಾವೈಕ್ಯ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಇವರಿಗೆ 82 ವರ್ಷ ವಯಸ್ಸಾಗಿತ್ತು.
ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ಅವರಿಗೆ ಇಂದು ಬೆಳಿಗ್ಗೆ 6.30ಕ್ಕೆ ಹೃದಯಾಘಾತ ಉಂಟಾಗಿತ್ತು. ಆಸ್ಪತ್ರೆಗೆ ತಲುಪಿಸುವ ಮಾರ್ಗದಲ್ಲಿ ಸೂಫಿಸಂತ ಇಬ್ರಾಹಿಂ ಸುತಾರ್ ಕೊನೆಯುಸಿರೆಳೆದಿದ್ದಾರೆ. ಇಬ್ರಾಹಿಂ ಸುತಾರ್ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಪ್ರವಚನಕ್ಕೆ ಹೆಸರಾಗಿದ್ದರು. ಅಲ್ಲದೇ ಬಣವಣ್ಣನವರ ಅನುಯಾಯಿಗಳಾಗಿದ್ದು, ಬಸವಣ್ಣನವರ ವಚನಗಳನ್ನು ಹೇಳುತ್ತಿದ್ದರು.
ಇಬ್ರಾಹಿಂ ಎನ್. ಸುತಾರ್ ಮೇ 10, 1940 ರಲ್ಲಿ ಜನಿಸಿದರು. ಇವರ ತಂದೆ ಮಹಾಲಿಂಗಪುರದ ನಬಿಸಾಹೇಬ್, ತಾಯಿ ಅಮೀನಾಬಿ. ಆರ್ಥಿಕವಾಗಿ ಸದೃಢರಾಗಿಲ್ಲದಿದ್ದರಿಂದ ಮೂರನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದರು. ನಂತರ ನೇಕಾರ ವೃತ್ತಿ ಮೈಗೂಡಿಸಿಕೊಂಡರು. ಅದರ ಜತೆಗೆ ಮಸೀದಿಯಲ್ಲಿ ನಮಾಜು, ಕುರಾನ್ ಅಧ್ಯಯನ ಮಾಡಿದರು. ಬಳಿಕ ಭಗವದ್ಗೀತೆ ಅಧ್ಯಯನ ಮಾಡಿದರು. ನಂತರದ ದಿನಗಳಲ್ಲಿ ಪ್ರವಚನಗಳನ್ನು ಮಾಡುತ್ತಾ ಭಾವೈಕ್ಯತೆಯ ಪಾಠವನ್ನು ಸಾರಿದರು. ಕನ್ನಡದ ಕಬೀರ ಎಂದೇ ಇವರು ಖ್ಯಾತರಾಗಿದ್ದು, ಇವರಿಗೆ 1995ರಲ್ಲಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿಯನ್ನು ನೀಡಿದೆ.
ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರಕಾರ (2018ರ ಏಪ್ರಿಲ್ ರಂದು) ಇಬ್ರಾಹಿಂ ಸುತಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق