ಗಂಧವನ್ನು ತೀಡಿದಷ್ಟು ಪರಿಮಳ. ಲೋಹವನ್ನು ತಿಕ್ಕಿದಷ್ಟು ಹೊಳಪು. ಅಂತೆಯೇ ಯಾವುದೇ ಒಂದು ಸಂಕಲ್ಪಿತ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಷ್ಟು ಬೆಳೆಯಲು ಸಾಧ್ಯ ಹಾಗೂ ಒಂದಷ್ಟು ಸೌರಭ ಬೀರಲು ಸಾಧ್ಯ. ಆ ನಿಟ್ಟಿನಲ್ಲಿ ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಮಾಡಿ ತನ್ನದೇ ಆದ ಛಾಪನ್ನು ಮೂಡಿಸಿದ ಪಬ್ಲಿಕ್ ಹೀರೋ ಯು. ಸುರೇಂದ್ರ ಶೆಣೈ. ಇವರ ಹುಟ್ಟೂರು ಗಂಗೊಳ್ಳಿಯಾದರೂ ನೆಲೆ ನಿಂತ ಊರು ಪುರಾಣ ಪ್ರಸಿದ್ಧ ಕುಂಭಾಶಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ತನ್ನೂರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಪೂರೈಸಿ ಕುಂದಾಪುರದ ಬಂಡಾರ್ಕಾರ್ಸ್ ನಲ್ಲಿ BSc. ಪದವಿ ಪಡೆದರು. ಆನಂತರ ಮೈಸೂರು ವಿವಿಯಿಂದ ಅವರ ಅಚ್ಚುಮೆಚ್ಚಿನ ಕ್ಷೇತ್ರ ಪತ್ರಿಕೋದ್ಯಮದ ತರಬೇತಿ ಪಡೆದು ಅದನ್ನು ತನ್ನ ವೃತ್ತಿ ಜೀವನದ ಮಾರ್ಗಸೂಚಿಯನ್ನಾಗಿ ಸಿಕೊಂಡವರು ಇವರು.
ತನ್ನ 23 ನೇ ವರ್ಷಕ್ಕೆ ಮಂಗಳೂರಿನ ಪ್ರಸಿದ್ಧ "ನವ ಭಾರತ" ಪತ್ರಿಕೆಯ ವರದಿಗಾರನಾಗಿ ವೃತ್ತಿ ಜೀವನಕ್ಕೆ ಪಾದಾರ್ಪಣೆ ಮಾಡಿದ ಇವರು ತದ ನಂತರ ಇಂಡಿಯನ್ ಏಕ್ಸ್ ಪ್ರೆಸ್, ಮುಂಗಾರು, ಹೊಸ ದಿಗಂತ, ಮುಂತಾದ ಪತ್ರಿಕೆಗಳಿಗೆ ಸೇವೆ ಸಲ್ಲಿಸುವುದರ ಜೊತೆಗೆ ಟೈಮ್ಸ್ ಆಫ್ ಡೆಕ್ಕನ್ ಮುಂತಾದ ಪತ್ರಿಕೆಗಳಿಗೂ ವಿಶೇಷ ಲೇಖನ ಬರೆಯುತ್ತಿದ್ದರು. ಕೊನೆಗೆ ತನ್ನ ಅನುಭವಕ್ಕೊಂದು ರೂಪ ಕೊಡುವ ನಿಟ್ಟಿನಲ್ಲಿ 1991ರಲ್ಲಿ ಕುಂದೇಶ್ವರನ ಅನುಗ್ರಹದಿಂದ ತನ್ನದೇ ಆದ "ಕುಂದ ಪ್ರಭಾ" ಎಂಬ ಸ್ವಂತ ಪತ್ರಿಕಾ ಉದ್ಯಮವನ್ನು ಪ್ರಾರಂಭಿಸಿ ಅತ್ಯಂತ ಯಶಸ್ವಿಯಾದರು.
ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ, ಸಮಾಜ ಸುಧಾರಣೆ ಸಾರ್ವಜನಿಕ ಉಪಯೋಗಿ ಮಾಹಿತಿಯನ್ನು ಹೊತ್ತ ಈ ಪತ್ರಿಕೆ ದೇಶ ವಿದೇಶಗಳಲ್ಲಿ ತನ್ನ ಇರುವಿಕೆಯನ್ನು ಗುರುತಿಸಿಕೊಂಡು ಜೊತೆಗೆ ಕುಂದ ಪ್ರಭ ಟ್ರಸ್ಟೊಂದನ್ನು ಮಾಡಿ ಅದರ ವತಿಯಿಂದ ಪತ್ರಕರ್ತರಾಗ ಬಯಸಿದ ಹಲವು ಯುವಕರಿಗೆ ಅನುಭವಿಗಳಿಂದ ತರಬೇತಿ, ಪ್ರಸಿದ್ಧ ಪತ್ರಕರ್ತರ ಗುರುತಿಸುವಿಕೆ, ಹೀಗೆ ಸಮಾಜದ ಉನ್ನತಿಗೆ ಪ್ರೇರಕವಾಗುವಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಈ ಟ್ರಸ್ಟ್ ಮತ್ತು ಪತ್ರಿಕೆ ಸುದ್ದಿ ಪ್ರಸಾರ ಮಾಧ್ಯಮಗಳಲ್ಲಿ ಮುಂಚೂಣಿಯಲ್ಲಿದೆ. ಮಾತೃ ಭಾಷೆಯ ಮೇಲೆ ಇವರಿಗೆ ಅತೀವ ಪ್ರೀತಿ. ಹಾಗಾಗಿ ಕೊಂಕಣಿ ವೈಭವ, ವಿದ್ಯಾರ್ಥಿ ಸಮ್ಮೇಳನ, ಕೊಂಕಣಿಯುವ ಸಮೇಳನ, ಅಖಿಲ ಭಾರತ ಕೊಂಕಣಿ ಪರಿಷತ್ ಸಮ್ಮೇಳನದಂತ ಸಮಾವೇಶಗಳ ಜವಾಬ್ದಾರಿಯನ್ನು ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಈ ರೀತಿಯ ಇವರ ಉತ್ಸಾಹೀ ಚಟುವಟಿಕೆಗಳಿಗೆ ಸಮಾಜ ಸೇವೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಹೆಸರಾದ ಅಂತರ್ ರಾಷ್ಟ್ರೀಯ ಸಂಸ್ಥೆಗಳಾದ JCI ಹಾಗೂ ರೋಟರಿಯಂತಹ ಅಭಿಯಾನಗಳೂ ಕಾರಣೀಭೂತವಾಗಿವೆ ಎನ್ನಬಹುದು. JCI ಕುಂದಾಪುರದ ಹಾಗೂ ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷರಾಗಿಯೂ ಹಲವಾರು ಉದಯೋನ್ಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಮನ್ನಣೆ ಪಡೆದವರು. ಕುಂದ ಕಲಾ ಉತ್ಸವ, ನುಡಿ ಬೆಳಕು ಸರಣಿ, ಪಂಚಗಂಗಾವಳಿ ಉತ್ಸವ, ಕುಂದ ಕರಾವಳಿ ಉತ್ಸವದಂತಹ ಕಾರ್ಯಕ್ರಮಗಳ ರುವಾರಿ ಇವರು. ಅಷ್ಟೇ ಅಲ್ಲದೆ ವೃತ್ತಿ ಮಾಗ೯ದಶ೯ನ, ಏಡ್ಸ್ ಮಹಾಮಾರಿ, ಕಂಪ್ಯೂಟರ್ ಕಲಿಯಿರಿ ಎಂಬ ಹಲವು ಶೈಕ್ಷಣಿಕ ಸಾಹಿತ್ಯಿಕ ಪುಸ್ತಕಗಳು ಇವರಿಂದ ಪ್ರಕಟಣೆಗೊಂಡಿವೆ.
ಇನ್ನು ಉಡುಪಿ ಜಿಲ್ಲೆಯಾದಾಗ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಅದೇ ರೀತಿ ಕುಂದಾಪುರದಲ್ಲಿ ತಾಲ್ಲೂಕು ಸಂಘ ಸ್ಥಾಪಿಸಲು ಶ್ರಮಿಸಿದ ಸಾಮಾಜಿಕ ಕಾಳಜಿ ಇರುವ ಪತ್ರಕರ್ತ ನೆನಿಸಿಕೊಂಡಿದ್ದಾರೆ ಇವರು. ಇಂತಹ ಅದ್ಭುತ, ಅನುಭವಿ ಪ್ರತಿಭೆ- ಮಾಧ್ಯಮಕ್ಕಾಗಿ ತನ್ನ ಬಹುಪಾಲು ಸಮಯವನ್ನು ಸವೆದ ಯು.ಎಸ್. ಶೆಣೈಯವರಿಗೆ ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ ಉಡುಪಿ- ಮಣಿಪಾಲ ಘಟಕ ಇನ್ನು ಮುಂದೆಯೂ ಸಮಾಜಕ್ಕೆ ತಮ್ಮಿಂದ ನಿಷ್ಕಲ್ಮಶ ಸೇವೆ ಲಭಿಸಲಿ ಎ೦ದು ಹಾರೈಸುತ್ತ ವಿಶ್ವ ಸಂವಹನ ಕಾರರ ದಿನಾಚರಣೆಯ ಅಂಗವಾಗಿ ಮಾಧ್ಯಮ ಜಾಣ ಪುರಸ್ಕಾರ ವನ್ನು ನೀಡಿ ಗೌರವಿಸುತ್ತಿದೆ.
-ರಾಜೇಶ್ ಭಟ್ ಪಣಿಯಾಡಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق