ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾಷೆ ಕಲಿಯುವವರು ಉತ್ತಮ ಕೇಳುಗರಾಗಿರಬೇಕು: ರಾಮಚಂದ್ರ ಭಟ್

ಭಾಷೆ ಕಲಿಯುವವರು ಉತ್ತಮ ಕೇಳುಗರಾಗಿರಬೇಕು: ರಾಮಚಂದ್ರ ಭಟ್

ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳ ಉದ್ಘಾಟನೆ




ಪುತ್ತೂರು: ಭಾಷೆಯೊಂದನ್ನು ಕಲಿಯಲು ಬಯಸುವ ವಿದ್ಯಾರ್ಥಿಗಳು ಅತ್ಯುತ್ತಮ ಕೇಳುಗರಾಗಿರಬೇಕು. ಹೆಚ್ಚು ಹೆಚ್ಚು ಕೇಳಿದಷ್ಟೂ ಭಾಷೆಯ ಬಗೆಗಿನ ಅರಿವು ನಮ್ಮೊಳಗೆ ಮೂಡುವುದಕ್ಕೆ ಸಾಧ್ಯ. ಆದ್ದರಿಂದ ನಮ್ಮ ಕಿವಿಗಳು ಎಷ್ಟು ಪರಿಣಾಮಕಾರಿಯಾಗಿ ಆಲಿಸುತ್ತವೆ ಎಂಬುದರ ಆಧಾರದ ಮೇಲೆ ನಮ್ಮ ಮಾತು ಹೊರಹೊಮ್ಮುವುದಕ್ಕೆ ಸಾಧ್ಯ ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಆಂಗ್ಲ ಭಾಷಾ ಉಪನ್ಯಾಸಕ ರಾಮಚಂದ್ರ ಭಟ್ ಎನ್.ಕೆ. ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಲಾದ ‘ಸ್ಪೋಕನ್ ಇಂಗ್ಲಿಷ್ ತರಗತಿ’ಗಳನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.


ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿಯೂ ಪುಟ್ಟದೊಂದು ನೋಟ್ ಪುಸ್ತಕ ಸದಾ ಇರಬೇಕು. ಯಾವುದೇ ಹೊಸ ವಿಷಯವನ್ನು ಬರೆದಿಟ್ಟುಕೊಳ್ಳುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಕೇವಲ ಜ್ಞಾನ ಮಾತ್ರವಲ್ಲದೆ ಭಾಷೆಯ ಸೊಬಗೂ ವಿಸ್ತಾರಗೊಳ್ಳುವುದಕ್ಕೆ ಸಾಧ್ಯ ಎಂದರಲ್ಲದೆ ರಿಪಬ್ಲಿಕ್, ನ್ಯಾಶನಲ್ ಡಿಸ್ಕವರಿ, ಆನಿಮಲ್ ಪ್ಲಾನೆಟ್‍ನಂತಹ ವಾಹಿನಿಗಳನ್ನು ನಿರಂತರವಾಗಿ ನೋಡುವುದರಿಂದ ಭಾಷಾ ಸೌಂದರ್ಯ ಬೆಳವಣಿಗೆ ಕಾಣುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.


ನಮ್ಮ ಹೆತ್ತ ತಂದೆ ತಾಯಿ, ಕಲಿಸುವ ಗುರು, ಆಶ್ರಯ ನೀಡುವ ದಾತಾರರೇ ಮೊದಲಾದವರ ಬಗೆಗೆ ನಾವು ಸದಾ ಕೃತಜ್ಞರಾಗಿರಬೇಕು. ದೇಶಪ್ರೇಮವಿಲ್ಲದ ಬದುಕು ಅರ್ಥಹೀನ. ಕೃತಘ್ನತೆಯಿಂದ ಬದುಕುವುದು ಬದುಕೇ ಅಲ್ಲ. ಹಾಗಾಗಿ ಎಳೆಯ ವಯಸ್ಸಿನಿಂದಲೇ ಈ ತೆರನಾದ ಅತ್ಯುತ್ಕøಷ್ಟ ಮನಃಸ್ಥಿತಿಯನ್ನು ಬೆಳೆಸಿಕೊಂಡು ಮುಂದುವರೆದಾಗ ಯಶಸ್ಸು ನಮ್ಮದಾಗುವುದಕ್ಕೆ ಸಾಧ್ಯ. ಆಡುವುದಕ್ಕೂ ಮಾಡುವುದಕ್ಕೂ ಸಂಬಂಧವಿರದ ಆಧುನಿಕ ದಿನಮಾನಗಳಲ್ಲಿ ಮಾತು ಮತ್ತು ಕೃತಿಗಳಲ್ಲಿ ಸಾಮ್ಯತೆ ಇರುವಂತಹವರ ಸಂಖ್ಯೆ ಬಹಳಷ್ಟು ಕಡಿಮೆ. ಅಂಬಿಕಾ ಸಂಸ್ಥೆಯ ಆಡಳಿತದಲ್ಲಿ ಅಂತಹ ಸಾಮ್ಯತೆ ಇರುವುದು ಒಂದು ಮಾದರಿಯಾಗಿ ಕಾಣಿಸುತ್ತಿದೆ ಎಂದು ಶ್ಲಾಘಿಸಿದರು.


ಪ್ರಸ್ತಾವನೆಗೈದು ಸ್ವಾಗತಿಸಿದ ಅಂಬಿಕಾ ಪದವಿ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ ಮಾತನಾಡಿ, ಇಂಗ್ಲಿಷ್ ಎಂಬುದು ಜಾಗತಿಕ ಭಾಷೆಯಾಗಿ ಗುರುತಿಸಲ್ಪಡುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಯಾವುದೇ ಉದ್ಯೋಗವನ್ನಾದರೂ ತಮ್ಮದಾಗಿಸಿಕೊಳ್ಳುವ ಪ್ರತಿಭೆ ಇದೆ. ಆದರೆ ಕೇವಲ ಇಂಗ್ಲಿಷ್ ಭಾಷಾ ಜ್ಞಾನದ ಕೊರತೆಯಿಂದಾಗಿ ಅನೇಕರಿಗೆ ಅಂತಹ ಉದ್ಯೋಗಾವಕಾಶಗಳು ಕೈತಪ್ಪುತ್ತಿವೆ. ಈ ನೆಲೆಯಿಂದ ಪದವಿ ಹಂತದಲ್ಲಿ ಸಂವಹನ ಇಂಗ್ಲಿಷ್‍ನ ಕಲಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಿದೆ. ಇಲ್ಲದಿದ್ದರೆ ಸಂದರ್ಶನಗಳನ್ನು ಎದುರಿಸುವಂತಹ ಸಂದರ್ಭದಲ್ಲಿ ಇಂಗ್ಲಿಷ್ ಜ್ಞಾನದ ಅಭಾವದಿಂದಾಗಿ ಪಶ್ಚಾತ್ತಾಪಪಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು. 


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಭಾರತದ ಮೇಲೆ ಶತ ಶತಮಾನಗಳಿಂದ ಅನೇಕ ದಾಳಿಗಳಾಗಿವೆ. ಆದರೆ ಇದೀಗ ಭಾರತ ತಿರುಗಿ ದಾಳಿ ಮಾಡಬೇಕಾದ ಸಂದರ್ಭ ಒದಗಿ ಬಂದಿದೆ. ಆದರೆ ನಾವು ಶಸ್ತ್ರಾಸ್ತ್ರಗಳ ಮೂಲಕ ದಾಳಿ ಮಾಡುವುದಲ್ಲ, ಬದಲಿಗೆ ನಮ್ಮ ಸಾಂಸ್ಕೃತಿಕ ಹಿರಿಮೆಯನ್ನು ಜಗತ್ತಿಗೆ ಸಾರುವ ಮುಖೇನ ನಮ್ಮ ಹೆಚ್ಚುಗಾರಿಕೆಯ ಪ್ರಭುತ್ವವನ್ನು ಸಾಧಿಸಬೇಕು. ಅಂತಹ ಕಾರ್ಯಕ್ಕೆ ಇಂಗ್ಲಿಷ್ ಭಾಷೆಯ ಅಗತ್ಯವಿದೆ. ಈ ನೆಲೆಯಲ್ಲಿ ಸಂವಹನ ಇಂಗ್ಲಿಷ್ ಅನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿತು ಸಲಲಿತ ಆಂಗ್ಲಭಾಷಾ ಮಾತುಗಳನ್ನಾಡುವಂತೆ ತಯಾರಾಗಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ಪದವಿ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಅಕ್ಷಯ್ ಹೆಗಡೆ, ಕಚೇರಿ ಸಹಾಯಕ ವರ್ಷನ್ ಜೈನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಸಾಯಿಶ್ವೇತಾ ಪ್ರಾರ್ಥಿಸಿ, ವೈಷ್ಣವೀ ಜೆ ರಾವ್ ವಂದಿಸಿದರು. ವಿದ್ಯಾರ್ಥಿನಿ ಅದಿತಿ ಎಂ.ಎಸ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಕಾರ್ತಿಕ್ ಕೆದಿಮಾರ್ ಅನಿಸಿಕೆ ವ್ಯಕ್ತಪಡಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم