ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ದಶಲಕ್ಷಣ ಪರ್ವ

ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ದಶಲಕ್ಷಣ ಪರ್ವ

ಸಕಲ ಪಾಪಕರ್ಮಗಳ ಕೊಳೆ ಕಳೆದಾಗ ಆತ್ಮನೇ ಪರಮಾತ್ಮನಾಗಬಲ್ಲ: ಪುಣ್ಯನಂದಿ ಮುನಿಮಹಾರಾಜರು


ಉಜಿರೆ: ಮನ, ವಚನ, ಕಾಯದಿಂದ ಧರ್ಮದ ಅನುಷ್ಠಾನದೊಂದಿಗೆ ಆತ್ಮನಿಗಂಟಿದ ಸಕಲ ಪಾಪಕರ್ಮಗಳ ಕೊಳೆ ಕಳೆದಾಗ ಆತ್ಮನೇ ಪರಮಾತ್ಮನಾಗಬಲ್ಲ. ಸಕಲ ಜೀವಿಗಳೂ ಮೋಕ್ಷ ಪ್ರಾಪ್ತಿಗೆ ಅರ್ಹವಾಗಿವೆ ಎಂದು ಪೂಜ್ಯ ಪುಣ್ಯನಂದಿ ಮುನಿಮಹಾರಾಜರು ಹೇಳಿದರು.


ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ಶನಿವಾರ ಅವರು ದಶಲಕ್ಷಣ ಪರ್ವ ಉದ್ಘಾಟನಾ ಸಮಾರಂಭದಲ್ಲಿ ಮಂಗಲ ಪ್ರವಚನ ನೀಡಿದರು.


ಕ್ಷಮೆ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ್ಯ ಮತ್ತು ಬ್ರಹ್ಮಚರ್ಯ ಎಂಬ ದಶಧರ್ಮಗಳು ಆತ್ಮನ ಸಹಜಗುಣಗಳಾಗಿದ್ದು ಆತ್ಮನಲ್ಲಿರುತ್ತವೆ. ಆದರೆ ಕ್ರೋಧ, ಲೋಭ, ಮತ್ಸರ, ದ್ವೇಷ ಮೊದಲಾದ ಮಾನಸಿಕ ಕಷಾಯಗಳಿಂದ ಆತ್ಮನ ಸಹಜಗುಣಗಳು ಪ್ರಕಟವಾಗುವುದಿಲ್ಲ. ನಿರಂತರ ಧರ್ಮದ ಅನುಷ್ಠಾನದಿಂದ ಮೋಕ್ಷ ಸಾಧನೆ ಸಾಧ್ಯವಾಗುತ್ತದೆ.


ಕ್ರೋಧ ಎಂಬುದು ತನಗೂ ಇತರರಿಗೂ ಅತ್ಯಂತ ಅಪಾಯಕಾರಿಯಾಗಿದ್ದು ಕ್ಷಮಾ ಧರ್ಮದಿಂದ ಕ್ರೋಧವನ್ನು ತ್ಯಜಿಸಿ ಆದರ್ಶ ವ್ಯಕ್ತಿಗಳಾಗಬಹುದು. ಸಾಧುಗಳು ಎಲ್ಲರ ಹಿತವನ್ನೆ ಬಯಸುತ್ತಾರೆ. ಸಕಲ ಜೀವಿಗಳಿಗೂ ಅಹಿಂಸೆಯ ಭಾವ ತೋರಿಸುತ್ತಾರೆ. ಸದಾ ಜಾಗೃತ ಮನಸ್ಸಿನಿಂದ, ಕಷಾಯ ರಹಿತವಾಗಿ ಬದುಕಿದರೆ ಜೀವನ ಪಾವನವಾಗುತ್ತದೆ. ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.


ಮೂಡಬಿದ್ರೆ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಕ್ಷಮಾಧರ್ಮದ ಬಗ್ಯೆ ಮಾತನಾಡಿ, ಸಕಲ ಪರ್ವಗಳ ರಾಜ ದಶಲಕ್ಷಣ ಪರ್ವವಾಗಿದೆ. ದಶ ಧರ್ಮಗಳು ಆತ್ಮನ ಸಹಜ ಗುಣಗಳಾಗಿದ್ದು ಆತ್ಮನಿಗಂಟಿದ ಪಾಪಕರ್ಮಗಳ ಕೊಳೆ ಕಳೆದಾಗ ಸಹಜಗುಣಗಳು ಪ್ರಕಟವಾಗುತ್ತವೆ. ನಿಸ್ವಾರ್ಥ ಜೀವನದೊಂದಿಗೆ ಮೋಕ್ಷ ಪ್ರಾಪ್ರಿಯೇ ಬದುಕಿನ ಮುಖ್ಯ ಗುರಿಯಾಗಿದೆ. ಲೋಭ, ಮೋಹ ಮತ್ತು ಅಹಂನಿಂದಾಗಿ ನಮಗೆ ಸಹಜವಾಗಿ ಕ್ರೋಧ ಬರುತ್ತದೆ. ಕ್ಷಮಾಗುಣದಿಂದ ಕ್ರೋಧವನ್ನು ಶಮನಗೊಳಿಸಿ ಮೋಕ್ಷ ಹೊಂದಬಹುದು ಎಂದು ಹೇಳಿದರು.


ಪೆರಿಂಜೆ ಪಡ್ಯಾರಬೆಟ್ಟು ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಎ. ಜೀವಂಧರ ಕುಮಾರ್ ಶುಭಾಶಂಸನೆ ಮಾಡಿದರು.


ಅಧ್ಯಕ್ಷತೆ ವಹಿಸಿದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಮಾತನಾಡಿ, ಕ್ಷಮಾಗುಣದಿಂದ ಜೀವನ ಪಾವನವಾಗುತ್ತದೆ. ನಾವು ಸಕಲ ಜೀವಿಗಳಿಂದಲೂ ವಿಶೇಷ ಗೌರವಕ್ಕೆ ಪಾತ್ರರಾಗುತ್ತೇವೆ. ಆದುದರಿಂದ ಎಲ್ಲರೂ ಕ್ಷಮಾಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಮಧುರಾ ಪಿ.ಪಿ. ಅಜಿಲ, ಸರೋಜಾ ಜಿ. ಜೈನ್, ಪ್ರಸನ್ನ ಆರ್. ಹೆಗ್ಡೆ, ಉಪಸ್ಥಿತರಿದ್ದರು. ಮಾರಗುತ್ತು ವಿಜಯರಾಜ ಅಧಿಕಾರಿ ಸ್ವಾಗತಿಸಿದರು. ಮೂಡುಕೋಡಿಗುತ್ತು ಮಹಾವೀರ ಜೈನ್ ಧನ್ಯವಾದವಿತ್ತರು. ಮಾಣಿಕ್ಯರಾಜ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

0 تعليقات

إرسال تعليق

Post a Comment (0)

أحدث أقدم