ಯೋಧರನ್ನು ಗೌರವಿಸುವುದು ಸಮಾಜದ ಕರ್ತವ್ಯ: ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಪುತ್ತೂರಿನ ಮಾಜಿ ಸೈನಿಕರ ಸಂಘದ ವತಿಯಿಂದ ಇತ್ತೀಚೆಗೆಷ್ಟೇ ಸೇನಾ ನಿವೃತ್ತಿ ಹೊಂದಿದ ಕಬಕದ ಸನಿಹದ ಯೋಧ ವಸಂತ ಕುಮಾರ್ ಎಂ.ಜಿ. ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಕಿಲ್ಲೆ ಮೈದಾನದ ಬಳಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಿರ್ಮಿಸಲಾಗಿರುವ ದಕ್ಷಿಣ ಭಾರತದ ಏಕೈಕ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಈ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ತನ್ನ ಕೌಟುಂಬಿಕ ಸುಖವನ್ನು ತ್ಯಜಿಸಿ ದೇಶಕ್ಕಾಗಿ ಬದುಕನ್ನು ಅರ್ಪಿಸುವ ಯೋಧರು ಸೇನಾನಿವೃತ್ತಿ ಪಡೆದು ಊರಿಗೆ ಬಂದಾಗ ಅವರನ್ನು ಸ್ವಾಗತಿಸಿ, ಗೌರವಿಸಬೇಕಾದ್ದು ಸಮಾಜದ ಜನರ ಜವಾಬ್ದಾರಿ. ಇಂದು ಯಾವುದೋ ಚುನಾವಣೆಯಲ್ಲಿ ಒಬ್ಬಾತ ಗೆದ್ದಾಗ ಊರಿಗೆ ಊರೇ ಮೆರವಣಿಗೆ ನಡೆಯುತ್ತದೆ. ಆದರೆ ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ಅರ್ಪಿಸಿಕೊಂಡ ಯೋಧ ತನ್ನ ಹುಟ್ಟೂರಿಗೆ ಬರುವಾಗ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂಬುದು ನಾಗರಿಕ ಸಮಾಜ ಯೋಚಿಸಬೇಕಾದ ಸಂಗತಿ ಎಂದು ನುಡಿದರು.
ಅಂಬಿಕಾದಿಂದ ಸ್ವಾಗತ: ಇನ್ನು ಮುಂದಿನ ದಿನಗಳಲ್ಲಿ ಪುತ್ತೂರಿನ ಯಾವುದೇ ಯೋಧ ಸೇನಾ ನಿವೃತ್ತಿ ಪಡೆದು ಮರಳುವುದಿದ್ದರೆ ಅಂತಹ ಯೋಧನನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಿಸಲಾಗುತ್ತದೆ. ಬಸ್ ಸ್ಟಾಂಡ್‍ನಿಂದ ತೊಡಗಿ ತೆರೆದ ವಾಹನದಲ್ಲಿ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿಗೆ ಕರೆತಂದು ಅಲ್ಲಿ ಗೌರವಾರ್ಪಣೆ ನಡೆಸಲಾಗುತ್ತದೆ. ಆದ್ದರಿಂದ ಯಾವುದೇ ಯೋಧ ಸೇನಾ ನಿವೃತ್ತಿ ಹೊಂದುವುದಿದ್ದರೆ ಅಂಬಿಕಾ ಶಿಕ್ಷಣ ಸಂಸ್ಥೆಗಳಿಗೆ ಮಾಹಿತಿ ನೀಡುವ ಕಾರ್ಯವನ್ನು ಅವರ ಕುಟುಂಬಸ್ಥರು ಅಥವಾ ಮಾಜಿ ಸೈನಿಕರ ಸಂಘ ಮಾಡಿಕೊಡಬೇಕೆಂದು ಸುಬ್ರಹ್ಮಣ್ಯ ನಟ್ಟೋಜ ವಿನಂತಿಸಿದರು.
ಮಾಜಿ ಯೋಧ ವಸಂತ ಕುಮಾರ್ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರುಗಳಾದ ವಿದ್ವಾನ್ ಕಾಂಚನ ಈಶ್ವರ ಭಟ್, ಪ್ರಸನ್ನ ಭಟ್, ಸುರೇಶ್ ಶೆಟ್ಟಿ ಹಾಗೂ ಎಂ.ಎಸ್.ಶೆಣೈ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಬೋಧಕ ಮತ್ತು ಬೋಧಕೇತರ ವೃಂದ, ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು, ಮಾಜಿ ಸೈನಿಕ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಆಸಕ್ತರು ಉಪಸ್ಥಿತರಿದ್ದರು. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಯೋಧ ಸುಬೇದಾರ್ ರಮೇಶ್ ಬಾಬು ಸಹಕರಿಸಿದರು.
إرسال تعليق