ನಮ್ಮ ಕಷ್ಟ ನೋವು ನಲಿವು ಸಂತಸ ಎಲ್ಲ ಸಮಯದಲ್ಲಿ ನೆರವಾಗುವವರೇ ನಿಜವಾದ ಸ್ನೇಹಿತರು.
ಜೀವನದಲ್ಲಿ ಅತಿ ಮುಖ್ಯ ಪಾತ್ರವಹಿಸುವ ಸ್ನೇಹಿತರನ್ನು ನೆನಪಿಸಿಕೊಳ್ಳುವುದು ಅಷ್ಟೇ ಮುಖ್ಯ. ಹೀಗಾಗಿ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ವಿಶ್ವದೆಲ್ಲೆಡೆ ಅಂತರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತದೆ.
ಗೆಳೆತನದ ಆನಂದವನ್ನು ಅನುಭವಿಸುವ ದಿನ. 1958 ರಲ್ಲಿ ಮೊದಲ ಸಲ ಸ್ನೇಹಿತರ ದಿನದ ಆಚರಣೆ ಆರಂಭಿಸಿದರು. ಇಂದೂ ವಿಶ್ವದೆಲ್ಲೆಡೆ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.
ಗೆಳೆತನ ಎಲ್ಲವನ್ನೂ ಮೀರಿದ ಬಂಧವದು. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಯಾವುದೋ ಕನಸು ಹೊತ್ತು ಸಾಗುವ ಅಪರಿಚಿತರ ನಡುವೆ ಚಿರಪರಿಚಿತ ಬಂಧವನ್ನು ಬೆಸೆಯುವ ಬೆಸುಗೆ ಅದು.
ಅಮ್ಮನ ಪ್ರೀತಿ, ಅಪ್ಪನ ಕಾಳಜಿ, ಅಕ್ಕನ ಅಕ್ಕರೆ, ಅಣ್ಣನ ರಕ್ಷೆ , ತಮ್ಮನ ತರಲೆ, ತಂಗಿಯ ತುಂಟತನ ಹೀಗೆ ಎಲ್ಲರನ್ನೂ ಎಲ್ಲವನ್ನೂ ಒಂದೇ ಪುಟಗಳಲ್ಲಿ ನೆನಪಿಸುವ ನೆನಪಿನ ಭಾವಗಳ ಬುತ್ತಿಯಿದು.
ಜಗತ್ತೇ ತಿರುಗಿಬಿದ್ದರೂ ಜಗಕೆ ಬೆನ್ನು ತಿರುಗಿಸಿ ನಿಂತರೂ ಹೆಗಲಿಗೆ ಹೆಗಲು ಕೊಡುವ ಸೆಳೆತವಿದು. ಎಲ್ಲೆಲ್ಲಿಂದಲೋ ತಾಯಂದಿರೊಡಲುಗಳ ಕತ್ತರಿಸಿಕೊಂಡು ಬಂದ ಕರುಳಬಳ್ಳಿಗಳೆಲ್ಲಾ ಕೂಡುವ ಸಂಗಮ ತಾಣವದು.
ಹಾಗಾಗಿಯೇ ಕಷ್ಟವಾಗುವುದು. ಇವಳ ಇವನ ಖುಷಿ ಅವಳ ಅವನ ಖುಷಿಯಾಗುವುದು. ಅವಳ ಅವನ ದುಃಖ ಇವರ ಕಣ್ಣೀರಾಗುವುದು. ಇವರ ಸಂತೋಷ ಅವಳ ಅವನ ನಗುವಾಗುವುದು.
ನದಿಯೊಂದು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಹರಿದು ಹೋಗುತ್ತದೆ. ಹಾಗೆಯೇ ಸ್ನೇಹಿತರು ತಮ್ಮ ವಿದ್ಯಾಭ್ಯಾಸಗಳಿಗೆ ಅಥವಾ ಉದ್ಯೋಗಗಳಿಗೆ ತಮ್ಮ ತಮ್ಮ ಊರುಗಳಿಂದ ಬೇರೊಂದು ಊರಿಗೆ ಮರಳಿ ಹೋಗುವರು. ಅಲ್ಲಿಯಾ ವ್ಯಕ್ತಿಗಳ ಜೊತೆ ಮಾತು ಬೆಳೆದು ಸ್ನೇಹವಾಗ ತೊಡಗುವುದು.
ಅಬ್ಬಾ ಸ್ನೇಹವೆಂದರೆ ಅದಕ್ಕೆಷ್ಟು ಅರ್ಥ ವಿದೆ. ಎಷ್ಟೇಲ್ಲಾ ಸಂಬಂಧಗಳ ಭಾವಗಳ ಸಮಷ್ಟಿ. ಅದು ಜಾತಿ , ಮತ, ಧರ್ಮ, ಶಿಕ್ಷಣ, ಹಿರಿಯ-ಕಿರಿಯ, ಕರಿಯ-ಬಿಳಿಯ, ಅರಸ-ಅಳು, ಬಡವ- ಧನಿಕ, ದೇಶಿ-ವಿದೇಶಿ ಏನೆಲ್ಲಾ ಗೋಡೆಗಳನ್ನು ಗಡಿಯನ್ನು ದಾಟಿ ಛಿದ್ರ ಛಿದ್ರಗೊಳಿಸಿದೆ.
ಸ್ನೇಹದ ಸರಮಾಲೆಯೇ ಇದೆ ಸಣ್ಣವರಿದ್ದಾಗ ಅಂಗವಾಡಿಯಿಂದ ಹಿಡಿದು ಕಾಲೇಜು ತನಕ ಸಿಕ್ಕಿದಲ್ಲೆಲ್ಲಾ ಗೆಳತನದ ಸಮೂಹವೇ ನೋಡಬಹುದು.
ಸ್ನೇಹದ ಕೊಂಡಿಗೆ ಕೊನೆಯೆಂಬುದಿಲ್ಲ. ಹೋದಲ್ಲಿ ಬಂದಲ್ಲಿ ಗೆಳೆತನವೇ ಆರಂಭವಾಗುತ್ತದೆ. ಸರಮಾಲೆಯೇ ಮುಂದುವರಿಯುತ್ತಾ ಸಾಗುತ್ತದೆ.
ಅದು ಸ್ನೇಹಿತರು ಜೊತೆಯಲ್ಲಿದ್ದರೆ ಅದೇ ಸ್ವರ್ಗ . ಅಪ್ಪಿ ತಪ್ಪಿ ಮಾತು ಆಡೋದು ಬಿಟ್ಟರೆ ಅದೇ ದೊಡ್ಡ ನರಕ. ಉಸಿರಾಡುವ ಹೆಣದಂತಾಗಿ ಒದ್ದಾಡುವ ಮನಸ್ಸಿಗೆ ಅವರಿಲ್ಲದ ಬದುಕು ,ಕೋಪ, ಅಹಂ ಎಲ್ಲವನ್ನೂ ಸರಿಸಿ ಒಮ್ಮೆ ಮನಸಾರೆ ಮಾತನಾಡಿದರೆ ಜೇನಿನಂತೆ ಸಿಹಿಯಾದ ಮಧುರ ಸ್ನೇಹ ಎಂದೆಂದಿಗೂ ಮುಗಿಯದ ಕಥೆ.
ಸ್ನೇಹಿತರ ದಿನದ ಸಂಕೇತವಾಗಿ ಪರಸ್ಪರ ಒಬ್ಬರಿಗೊಬ್ಬರು ಗೆಳೆತನದ ಪಟ್ಟಿಯನ್ನು ಕಟ್ಟಿ ಈ ದಿನವನ್ನು ಆಚರಿಸುವುದು ರೂಢಿಯಲ್ಲಿದೆ.
ಸ್ನೇಹಕ್ಕೆ ಕೊನೆಯೆಂಬುದಿಲ್ಲ ಈ ಸ್ನೇಹಿತರನ್ನು ಎಣಿಸಲು ಸಾದ್ಯವಿಲ್ಲ. ದಿನದ ಸಂತೋಷವನ್ನು ಮರೆಯಲಾಗದ ನೆನಪುಗಳು ಮನಸ್ಸಿನಲ್ಲಿ ಅಚ್ಚಲಿಯದೆ ಉಳಿದಿದೆ.
-ಹರ್ಷಿತಾ ಹರೀಶ್ ಕುಲಾಲ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق