ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಕ್ತ ಸಂಬಂಧಗಳ ಮೀರಿದ ಬಂಧವಿದು.....

ರಕ್ತ ಸಂಬಂಧಗಳ ಮೀರಿದ ಬಂಧವಿದು.....

 



ಈ ಭೂಮಿ ಸುಂದರ ಹೂದೋಟ ನಾವೆಲ್ಲ ಇಲ್ಲಿಯ ಹೂಗಳು.

ಇಂದು ಅರಳಿ ನಾಳೆ ಕರಗೋ ನಮಗೆಲ್ಲ ಇಲ್ಲಿ ಹತ್ತು ಹಲವು ಬಂಧಗಳ ಭಾಂದವ್ಯ ಹಾಗೋ ಹೀಗೋ ಸುರುಳಿ ಸುತ್ತಿಕೊಳ್ಳುತ್ತವೆ. 

ಮಾತೆಯ ಕರುಳ ಬಳ್ಳಿಯ ಅ ಅವರ್ಣನೀಯ ಬಂಧದಿ ಮೊದಲ್ಗೊಂಡು ಅಪ್ಪ,ಅಜ್ಜ - ಅಜ್ಜಿ ,ಚಿಕ್ಕಪ್ಪ - ಚಿಕ್ಕಮ್ಮ,ಅತ್ತೆ - ಮಾವ, ದೊಡ್ಡಪ್ಪ - ದೊಡ್ಡಪ್ಪ, ಅಕ್ಕ - ತಂಗಿ, ಅಣ್ಣಾ - ತಮ್ಮ ಹೀಗೆ ರಕ್ತದೊಳಗಿನ ಸಂಬಂಧಗಳು ಎಲ್ಲೇ ಇರದೇ ಸಾಗುತ್ತಲೇ ಇರುತ್ತದೆ.


   ಬದುಕಿನ ಪಯಣದಲ್ಲಿ ಈ ಸಂಬಂಧಗಳು ಹೇಗೋ ಹಾಗೆ ಒಂದು ಅನನ್ಯ ಸ್ನೇಹವೂ ತನ್ನ ಬಹುಪಾಲು ಬಾಂಧವ್ಯವನ್ನು ಬೆಸೆದುಕೊಂಡಿರುತ್ತದೆ. ಹೇಳಿ ಕೇಳಿ ಸ್ನೇಹ ಹುಟ್ಟುತ್ತದೆ ಅನ್ನೋ ಹಾಗಿಲ್ಲ, ಬಾಲ್ಯದ ಸ್ನೇಹ ಅಪೂರ್ವ ಆನಂದಮಯ ಸ್ನೇಹ ಎಂಬುದರ ಅರಿವೇ ಇಲ್ಲದೇ ಹುಟ್ಟಿದ ಸ್ನೇಹವದು ಬಿಡಿಸಲಾಗದ ಬಂಧ ಬೆಸೆದು ಕ್ಷಣ ಕ್ಷಣಕ್ಕೂ ಜೊತೆಯಾಗುವುದು. 


   ಇನ್ನು ಹಲವು ಸ್ನೇಹಗಳು ನಾವು ಪಯಣಿಸುವ ಹಾದಿಯಲ್ಲಿ ಆಕಸ್ಮಿಕವಾಗಿ ದೊರೆತು ಜೊತೆಯಾಗಿ ಬರುವುದು ಬಸ್ಸಿನಲ್ಲೋ.... ಸಭೆ ಸಮಾರಂಭಗಳಲ್ಲೋ... ಪ್ರವಾಸಿ ತಾಣದ ಸುತ್ತಲೋ...ಊರಿನ ಜಾತ್ರೆಯಲ್ಲೋ.... ಗೊತ್ತು ಗುರಿ ಇಲ್ಲದ ಊರಿನಲ್ಲಿ ನಮ್ಮ ಜೊತೆ ಸೇರುವವರು ಇಲ್ಲಿ ಜಾತಿ ಮತಗಳ ಸೋಂಕಿಲ್ಲ ರಕ್ತ ಸಂಬಂಧದ ಕುರುಹೂ ಇಲ್ಲ ಆದರೂ ಇಲ್ಲಿ ಯಾವುದೋ ಹಿತವಾದ ಬಾಂಧವ್ಯವಿದೆ.


     ಸ್ನೇಹಕ್ಕೆ ಬಡತನ ಸಿರಿತನವೆಂಬುದಿಲ್ಲ. ನೋವು ನಲಿವಿನಲಿ ಸಮ ಪಾಲು ಪಡೆಯುವಲ್ಲಿ ಸ್ನೇಹಿತರು ಎಂದೂ ಮುಂದು ನಿಮ್ಮ ಸಂಬಂಧಿಕರು ನಿಮ್ಮ  ಪ್ರತೀ ಹೆಜ್ಜೆಯಲ್ಲೂ ಜೊತೆ ಬಾರದಿದ್ದರೂ ಸ್ನೇಹಿತರೂ ನಿಮ್ಮ ನೆರಳಂತೆ ಬರುವರು.ಸ್ನೇಹದ ಸಂಕೋಲೆ ನಂಬಿಕೆ ಎಂಬ ಕೊಳಿಕೆಯಲ್ಲಿ ಬಿಗಿಯಾಗಿದ್ದರೆ ಅಲ್ಲಿ ಯಾವತ್ತೂ ಬಿರುಕು ಎಂಬುದು ಸಾಧ್ಯವಿಲ್ಲ . ಸಮಾನ ಮನಸ್ಕರ ಸ್ನೇಹ ಬದುಕಿನ ಕೊನೆವರೆಗೂ ಅದ್ಭುತ ಪಯಣದೊಂದಿಗೆ ಸಾಗಿದರೆ ಇನ್ನು ಹಲವು ಸ್ನೇಹ ಹೊಂದಾಣಿಕೆಯೆಂಬ ಸೂತ್ರದಲಿ ಏಳು ಬೀಳಿನ ಜೊತೆ ಸಾಗುತ್ತಿರುತ್ತದೆ.


   ಪುರಾಣಗಳಲ್ಲಿ ಕರ್ಣ - ದುರ್ಯೋಧನ,ಕೃಷ್ಣ - ಕುಚೇಲರ ಸ್ನೇಹದ ಗಟ್ಟಿತನ ಹೇಗಿತ್ತು ಎಂಬುದು ಎಲ್ಲರಿಗೂ ಅರಿವಿರುವ ವಿಚಾರ ಎಂದರೆ ತಪ್ಪಾಗಲಾರದು. ಆದರೆ ಇಂದು ನಮ್ಮ ನಡುವೆ ಅಂತಹ ಸ್ನೇಹ ಕಾಣಸಿಗುವುದು ಅಪರೂಪದಲ್ಲಿ ಅಪರೂಪವೇ ಸರಿ. ಸಣ್ಣ ಪುಟ್ಟ ವಿಷಯಗಳನ್ನು ಪರಸ್ಪರ ಅರಿತು ತಿದ್ದಿಕೊಳ್ಳೋ ಬದಲು ಸ್ನೇಹದ ಅರ್ಥವೇ ಮರೆತು ಜೀವಕ್ಕೆ ಕುತ್ತಾಗಿ ಕೆಲವು ಸ್ನೇಹಗಳು ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವ ಸಂಭವಗಳೇ ಈಗ ಕಾಣ ಸಿಗುತ್ತಿವೆ.


   ಕೊನೆಯದಾಗಿ ಪ್ರಕೃತಿದತ್ತವಾದ ನಮ್ಮ ಆಚರಣೆಗಳು ಬಹಳಷ್ಟು ಇದ್ದರೂ ಈಗೀಗ ಹಲವು ಆಚರಣೆಗಳು ಬಂದು ಸೇರಿ ಆಚರಣೆಗಳ ಭರಪೂರವೇ ಇಲ್ಲಿದೆ. ಪ್ರಕೃತಿದತ್ತವಾದ  ಆಚರಣೆಯಲ್ಲಿ ಮೊಗೆದಷ್ಟೂ ಮುಗಿಯದ ತಿರುಳಿದೆ. ಆದರೆ ಸ್ನೇಹಿತರ ದಿನಾಚರಣೆ, ಅಪ್ಪ ಅಮ್ಮಂದಿರ ದಿನ ಹೀಗೆ ಅದೆಷ್ಟೋ ದಿನಗಳು ಪ್ರತಿಯೊಬ್ಬರಿಗಾಗಿ ಜನ್ಮ ತಾಳಿವೆ ಆದರೆ ಏನು ಮಾಡಬಹುದು ಅವರಿವರು ಶುಭ ಹಾರೈಸಿದರು ಎಂದು ಶುಭ ಹಾರೈಸಿ ಮುಗುಳು ನಗೆಯ ಬೀರಬೇಕು ಅಷ್ಟೇ.


ಬರಹ *ಕೃಷ್ಣಪ್ರಿಯ ✍️*

0 تعليقات

إرسال تعليق

Post a Comment (0)

أحدث أقدم