ಉಡುಪಿ: ಕೊರೊನಾ ವಿಪತ್ತಿನ ಸಂದರ್ಭದಲ್ಲಿ ಆರ್ಥಿಕ ವಿಪತ್ತನ್ನು ಎದುರಿಸುತ್ತಿರುವ ಗೋಶಾಲೆಗಳಿಗೆ ಯಥಾಶಕ್ತಿ ಸಹಾಯ ನೀಡಿ ಬೆಂಬಲಿಸಬೇಕೆಂದು ವಿನಂತಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರಕಟಣೆಯೊಂದಕ್ಕೆ ಸ್ಪಂದಿಸಿದ ಉಡುಪಿಯ ಬಡಾನಿಡಿಯೂರಿನ ಬಾಲಯ್ಯ ಕುಟುಂಬಸ್ಥರ ಪಂಜುರ್ಲಿ ಟ್ರಸ್ಟ್ (ರಿ) ಸಾವಿರ ಚೀಲಕ್ಕೂ ಅಧಿಕ ಗೋಗ್ರಾಸವನ್ನು ತಮ್ಮ ಕುಟುಂಬಸ್ಥರು ಮತ್ತು ಬಂಧುಮಿತ್ರರಿಂದ ಸಂಗ್ರಹಿಸಿ ನೀಡಿ ಅಪೂರ್ವ ಗೋಸೇವೆ ಸಲ್ಲಿಸಿದೆ.
ಟ್ರಸ್ಟ್ ಮುಖ್ಯಸ್ಥರೂ, ಉದ್ಯಮಿಯೂ ಆಗಿರುವ ಬಿ ಉಮೇಶ್ ರಾವ್‌ರ ಸಂಯೋಜನೆ ಮತ್ತು ವಿಶೇಷ ಮುತುವರ್ಜಿಯಲ್ಲಿ ಈ ತನಕ 1200 ಕ್ಕೂ ಅಧಿಕ ಚೀಲ (600 ಕ್ವಿಂಟಾಲ್) ಸಂಗ್ರಹಿಸಿ ಉಡುಪಿಯ ನೀಲಾವರ, ಕೊಡವೂರು, ಹೆಬ್ರಿ ಕಬ್ಬಿನಾಲೆಯ ಗೋಶಾಲೆಗಳಿಗೆ ಮಾತ್ರವಲ್ಲದೇ, ಬೈಂದೂರಿನ ಅಮೃತಧಾರಾ ಗೋಶಾಲೆ ಉಡುಪಿ ಶ್ರೀಕೃಷ್ಣ ಮಠ, ತೀರ್ಥಳ್ಳಿ ಬಾಳಗಾರು ಮಠದ ಗೋಶಾಲೆಗಳಿಗೂ ವ್ಯವಸ್ಥಿತವಾಗಿ ಅರ್ಪಿಸುವ ಮೂಲಕ ಟ್ರಸ್ಟ್ ನಡೆಸಿದ ಈ ಕಾರ್ಯ ವಿಶೇಷವಾಗಿ ಗಮನಸೆಳೆದಿದೆ.
ಈ ಟ್ರಸ್ಟ್ ನ ಕುಟುಂಬಸ್ಥರು ಮತ್ತು ಬಂಧುಮಿತ್ರರು ಉಡುಪಿ, ಮಂಗಳೂರು, ಬೆಂಗಳೂರು, ಮಾತ್ರವಲ್ಲದೆ ದೇಶವಿದೇಶಗಳಲ್ಲಿ ನೆಲೆಸಿದ್ದು ಅವರೆಲ್ಲರಿಂದ ಈ ಗೋಭಿಕ್ಷಾ ಅಭಿಯಾನಕ್ಕೆ ಶ್ರದ್ಧಾಪೂರ್ವಕ ಸ್ಪಂದನೆ ದೊರೆತಿದೆ.
ಹೀಗೆ ಸಂಗ್ರಹವಾದ ಗೋಗ್ರಾಸ ಸಮರ್ಪಣೆ, ಗೋದಾನ ಸೇವಾಕಾರ್ಯಗಳು ಇತ್ತೀಚೆಗೆ ನೀಲಾವರ ಗೋಶಾಲೆಯಲ್ಲಿ ನಡೆಯಿತು. ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಮಠದ ಪಟ್ಟದ ದೇವರ ಪೂಜೆ ನೆರವೇರಿತು.
ನಂತರದಲ್ಲಿ ಶ್ರೀಗಳಿಗೆ ಟ್ರಸ್ಟ್ ವತಿಯಿಂದ ಪಾದಪೂಜೆ, ಗುರುವಂದನೆ ಸಲ್ಲಿಸಲಾಯಿತು. ಗೋಗ್ರಾಸ ಸಮರ್ಪಿಸಿದ ಸೇವಾರ್ಥಿಗಳಿಂದ ಕೃಷ್ಣಾರ್ಪಣ, ಟ್ರಸ್ಟ್ ಮೂಲಕ ಖರೀದಿಸಲಾದ ಹಸು ಮತ್ತು ಕರುವಿಗೆ ಗೋಪೂಜೆ ನಡೆಸಿ ಶ್ರೀಗಳಿಗೆ ಹಸ್ತಾಂತರ ನೆರವೇರಿತು.
ಈ ಸಂದರ್ಭ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಗೋಸೇವೆಯ ಕಾರ್ಯ ಕೇವಲ ಮಠ ಮಾನ್ಯರಿಗೆ ಅಥವಾ ಯಾರೋ ಕೆಲವರಿಗೆ ಮಾತ್ರ ಸೀಮಿತವಾದ ಕಾರ್ಯ ಅಲ್ಲ. ಜೀವನ ಪರ್ಯಂತ ಪ್ರತೀ ನಿತ್ಯ ಗೋವಿನ ಋಣದಿಂದ ಬದುಕುತ್ತಿರುವ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಗೋವಿನ ಪೋಷಣೆ ಸಾಧ್ಯವಿಲ್ಲದಿದ್ದರೆ ಗೋಶಾಲೆಗಳಿಗೆ ತೆರಳಿ ಸೇವೆ ಸಲ್ಲಿಸಬೇಕು ಮತ್ತು ಅವುಗಳ ಬೆಂಬಲಕ್ಕೆ ನಿಲ್ಲಬೇಕು. ನಮಗೆ ಜೀವನ ಕೊಟ್ಟ ಗೋವುಗಳ ಪೋಷಣೆ, ಮಾಡದಿದ್ದರೆ ಅದು ಮಹಾಪಾಪದ ಕೆಲಸ ಎಂದು ಸ್ವಯಮ್ ಕೃಷ್ಣನೇ ತಿಳಿಸಿದ್ದಾನೆ. ಆದ್ದರಿಂದ ಗೋರಕ್ಷಣೆಯ ಕಾರ್ಯ ಅತೀ ಅವಶ್ಯವಾಗಿದೆ. ಕೊರೊನ ಆರ್ಥಿಕ ಸಂಕಟದ ಸಮಯದಲ್ಲೂ ಬಾಲಯ್ಯ ಕುಟುಂಬಸ್ಥರು ಬಹಳ ದೊಡ್ಡ ಮಟ್ಟದಲ್ಲಿ ಗೋಗ್ರಾಸ ಸಮರ್ಪಿಸಿ ಮಾದರಿಯಾಗಿದ್ದಾರೆ ಎಂದರು.
ಬಾಲಯ್ಯ ಕುಟುಂಬಿಕರು ಮತ್ತು ಬಂದುಗಳು ಉಪಸ್ಥಿತರಿದ್ದರು. ಗೋಭಿಕ್ಷಾಭಿಯಾನದ ರೂವಾರಿ ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿದರು. ಶ್ರೀಗಳ ಆಪ್ತಕಾರ್ಯದರ್ಶಿಗಳಾದ ಕೃಷ್ಣ ಭಟ್, ವಿಷ್ಣುಮೂರ್ತಿ ಆಚಾರ್ಯ, ಗೋಶಾಲೆಯ ಅರ್ಚಕ ಪ್ರಶಾಂತ್, ಸಹಾಯಕರಾದ ರಾಘವೇಂದ್ರ ಭಟ್, ವ್ಯವಸ್ಥಾಪಕ ನರಸಿಂಹ ಭಟ್ ಮೊದಲಾದವರು ಸಹಕರಿಸಿದರು.
-ಜಿ. ವಾಸುದೇವ ಭಟ್ ಪೆರಂಪಳ್ಳಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق