ನೆಲ್ಲಿಕಟ್ಟೆ ಅಂಬಿಕಾ ಪಿಯು ಕಾಲೇಜಿನಲ್ಲಿ ಭಾಷಣ ಸ್ಪರ್ಧೆ
ಪುತ್ತೂರು: ದೇಶದಲ್ಲೀಗ ಸುಭದ್ರ ನಾಯಕತ್ವವಿದೆ. ಹಾಗಾಗಿ ಕಾಶ್ಮೀರದಲ್ಲೂ ತ್ರಿವರ್ಣ ಧ್ವಜ ರಾರಾಜಿಸುವುದನ್ನು ಕಾಣುವಂತಾಗಿದೆ. ಹಾಗೆಂದು ದೇಶಕ್ಕೆ ವಿದ್ವಂಸಕ ಶಕ್ತಿಗಳು ಮತ್ತೆ ಮತ್ತೆ ಸವಾಲುಗಳಾಗಿ ಪರಿಣಮಿಸುತ್ತಿವೆ. ಇದೀಗ ಪತ್ರಕರ್ತರ ಸೋಗಿನಲ್ಲಿಯೂ ಭಯೋತ್ಪಾದಕರು ನುಸುಳಿಕೊಳ್ಳುತ್ತಿರುವುದು ಆತಂಕಕಾರಿ. ಇತ್ತೀಚೆಗಷ್ಟೇ ಅಂತಹ ಭಯೋತ್ಪಾದಕನನ್ನು ಸೇನೆ ಸೆರೆ ಹಿಡಿದಿದೆ ಎಂದು ವಿಶ್ರಾಂತ ಇಂಗ್ಲಿಷ್ ಉಪನ್ಯಾಸಕ ಹಾಗೂ ಇಂಗ್ಲಿಷ್ ವಿಷಯದಲ್ಲಿನ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ಭಟ್ ಪನೆಯಾಲ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಅಂಬಿಕಾ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು. ಆಗ ಮಾತ್ರ ನಾವು ಬೆಳೆಯುವುದಕ್ಕೆ ಸಾಧ್ಯ. ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ನೆನಪಿಟ್ಟುಕೊಂಡು ಮುಂದುವರಿಯಬೇಕು. ಆಗ ಯಶಸ್ಸು ನಮ್ಮದಾಗುತ್ತದೆ ಎಂದರಲ್ಲದೆ ಮಕ್ಕಳನ್ನು ಕೇವಲ ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲದೆ ಮನೆಯಲ್ಲಿ ಬೆಳೆಸುವ ರೀತಿಯೂ ಅತ್ಯಂತ ಮುಖ್ಯ. ಮನೆಯಲ್ಲಿ ಉತ್ತಮ ಸಂಸ್ಕಾರಯುತ ಹಾಗೂ ಸಾಧನಾಶೀಲ ಮನಃಸ್ಥಿತಿಯನ್ನು ತುಂಬಿದರೆ ಮಕ್ಕಳು ಸತ್ಪ್ರಜೆಗಳಾಗಿ ಬೆಳೆಯುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಸ್ವಾತಂತ್ರ್ಯವೆಂದರೆ ಅದೊಂದು ಜವಾಬ್ದಾರಿ. ಆ ಹೊಣೆಗಾರಿಕೆಯನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದು ಅತ್ಯಂತ ಮುಖ್ಯವಾದದ್ದು. ಆದ್ದರಿಂದಲೇ ‘ಸ್ವಾತಂತ್ರ್ಯದ ಉದ್ದೇಶ ಸಾಧನೆಯಲ್ಲಿ ಯುವಜನತೆಯ ಜವಾಬ್ದಾರಿಗಳು’ ಎಂಬ ವಿಷಯವನ್ನೇ ಭಾಷಣಕ್ಕಾಗಿ ಇರಿಸಲಾಗಿದೆ. ನಮ್ಮ ನಮ್ಮ ಕರ್ತವ್ಯಗಳನ್ನು ನೆನಪಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯ ಎಂದು ಹೇಳಿದರು.
ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ ಸ್ವಾಗತಿಸಿದರು. ಉಪನ್ಯಾಸಕಿ ಗೀತಾ ಸಿ ಕೆ ವಂದಿಸಿದರು. ಉಪನ್ಯಾಸಕಿ ಜಯಂತಿ ಕಾರ್ಯಕ್ರಮ ನಿರ್ವಹಿಸಿದರು. ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳು, ಬಪ್ಪಳಿಗೆಯ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಂಬಿಕಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಹಾಗೂ ವಿಶ್ರಾಂತ ಇಂಗ್ಲಿಷ್ ಉಪನ್ಯಾಸಕ ರಾಮಚಂದ್ರ ಭಟ್ ತೀರ್ಪುಗಾರರಾಗಿ ಸಹಕರಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق