ಧರ್ಮಸ್ಥಳ: ಪರಿಸರ ಪ್ರಜ್ಞೆ ಎಳವೆಯಲ್ಲಿಯೇ ಮೊಳಕೆಯೊಡೆಯಬೇಕೆನ್ನುವ ಉದ್ದೇಶದೊಂದಿಗೆ ಧರ್ಮಸ್ಥಳದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 7ರಂದು ಪರಿಸರ ಸಂಘವು ಆನ್‌ಲೈನ್ ಮೂಲಕ ಶುಭಾರಂಭಗೊಂಡಿತು.
ಉಪ್ಪಿನಂಗಡಿಯ ಅರಣ್ಯಾಧಿಕಾರಿ ಅಶೋಕ್ ಕೆ.ಆರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
"ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಶಾಲೆಯ ಸಿಬ್ಬಂದಿ ವರ್ಗದವರು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ. ಹಿಂದೆ ಕಾಣುತ್ತಿದ್ದ ಪ್ರಕೃತಿ ಸೌಂದರ್ಯ ಇಂದು ಮಾಯವಾಗುತ್ತಿದೆ. ಗಿಡಗಳನ್ನು ನೀಡುವುದರ ಜೊತೆಗೆ ಅವುಗಳನ್ನು ಬೆಳೆಸುವ ಕಾಳಜಿಯನ್ನು ವಹಿಸಿಕೊಳ್ಳುವುದು ಅತಿಮುಖ್ಯ' ಎಂದರು.
ನಮ್ಮ ನಮ್ಮ ಮನೆಗಳಲ್ಲಿ ಲಭ್ಯವಿರುವ ಹಲಸಿನ, ಮಾವಿನ, ಪೇರಳೆ ಹಣ್ಣಿನ ಬೀಜಗಳನ್ನು ಬಳಸಿ ಸೀಡ್ ಬಾಲ್ ತಯಾರಿಸಿ ಖರ್ಚಿಲ್ಲದೆ ಎಲ್ಲೆಂದರಲ್ಲಿ ಗಿಡಗಳನ್ನು ಬೆಳೆಸುವ ಸುಲಭ ಉಪಾಯವನ್ನು ಮನವರಿಕೆ ಮಾಡಿಕೊಟ್ಟರು. ಪಿಪಿಟಿ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತಾ ಪರಿಸರ ಪ್ರಾಮುಖ್ಯತೆಯ ಸಂದೇಶದ ಬೀಜವನ್ನು ಮಕ್ಕಳ ಮನದಾಳದಲ್ಲಿ ಬಿತ್ತನೆ ಮಾಡಿದರು. ಶಾಲಾ ಮುಖ್ಯ ಶಿಕ್ಷಕಿ ಪರಿಮಳ ಎಂ ವಿ ಅವರು ಕಾರ್ಯಕ್ರಮದ ಕುರಿತು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಪರಿಸರ ಉಳಿಸಿ ಬೆಳೆಸುವ ಕಾಯಕದಲ್ಲಿ ಕೈ ಜೋಡಿಸಿ ಎನ್ನುತ್ತಾ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದರು.
5ನೇ ತರಗತಿಯ ಕುಮಾರಿ ಆದ್ಯ ಇವರು ಪರಿಸರ ಸಂರಕ್ಷಣೆಯ ಮಹತ್ವವನ್ನು ತಮ್ಮ ಮಾತುಗಳ ಮೂಲಕ ಅಭಿವ್ಯಕ್ತ ಪಡಿಸಿದರೆ, ಕುಮಾರಿ ಅನುಜ್ಞಾ ಏಕಪಾತ್ರ ಅಭಿನಯದ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದರು.
ಸಹಶಿಕ್ಷಕಿಯರಾದ ಶ್ರೀಮತಿ ಶಿಭ, ಶ್ರೀಮತಿ ಸೌಮ್ಯ, ಶ್ರೀಮತಿ ಸತ್ಯವತಿ ಇವರ ನೇತೃತ್ವದಲ್ಲಿ ಆನ್ಲೈನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಮಾರಿ ಆಶಿತಾ ಅವರ ನಿರೂಪಣೆ, ಅಭಿರಾಮ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಗಿ ಕುಮಾರಿ ಸ್ಮೃತಿ ಅವರ ಸ್ವಾಗತಿಸಿದರು. 10ನೆ ತರಗತಿಯ ಪ್ರೀತಂ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಸಂಪನ್ನಗೊಂಡಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق