ಸವಾಲು, ಅಡೆತಡೆಗಳನ್ನು ಮೀರಿ ಸಂಸ್ಥೆ ಬೆಳೆದಿದೆ: ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ನಗರದ ನೆಲ್ಲಿಕಟ್ಟೆಯಲ್ಲಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಕಾಲೇಜಿನ ಉಪಪ್ರಾಂಶುಪಾಲರಾಗಿದ್ದ ಸತ್ಯಜಿತ್ ಉಪಾಧ್ಯಾಯ ಎಂ ಗುರುವಾರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಸಂಸ್ಥೆಯ ಪ್ರಾಂಶುಪಾಲರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಅವರು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರಿಸಿದರು.
ನೂತನ ಪ್ರಾಂಶುಪಾಲರನ್ನು ಸ್ವಾಗತಿಸಿ ಮಾತನಾಡಿದ ಸುಬ್ರಹ್ಮಣ್ಯ ನಟ್ಟೋಜ, ಅನೇಕ ಸವಾಲು, ಸಮಸ್ಯೆಗಳನ್ನು ಎದುರಿಸಿ ಅಂಬಿಕಾ ಸಂಸ್ಥೆ ಈ ಹಂತಕ್ಕೆ ಬಂದು ತಲಪಿದೆ. ಇಂದು ಹೆತ್ತವರಿಗೆ ಅಂಬಿಕಾ ಸಂಸ್ಥೆಯ ಬಗೆಗೆ ವಿಶೇಷ ನಂಬಿಕೆ ಮೂಡಿದೆ. ಪ್ರಸ್ತುತ ವರ್ಷ ಪುತ್ತೂರು ತಾಲೂಕು ಹಾಗೂ ಸುತ್ತಮುತ್ತಲಿನ ಕೆಲವು ತಾಲೂಕುಗಳಲ್ಲೇ ಅಂಬಿಕಾ ಸಂಸ್ಥೆಯ ಅತಿ ಹೆಚ್ಚು ವಿದ್ಯಾರ್ಥಿಗಳಿಗೆ ಆರು ನೂರರಲ್ಲಿ ಆರುನೂರು ಅಂಕವೂ ದೊರೆತಿದೆ. ಪ್ರಸ್ತುತ ಬಾರಿ 17 ಮಂದಿ ವಿದ್ಯಾರ್ಥಿಗಳು ಸಂಪೂರ್ಣ ಅಂಕವನ್ನು ತಮ್ಮದಾಗಿಸಿಕೊಂಡಿರುವುದು ಸಂಸ್ಥೆಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಗುಣಮಟ್ಟವನ್ನು ಕಾಯ್ದುಕೊಂಡು ಮತ್ತು ಎತ್ತರಿಸಿಕೊಂಡು ಮುನ್ನಡೆಯುವುದು ಅತ್ಯಂತ ಅಗತ್ಯ ಎಂದು ನುಡಿದರು.
ರಾಜಶ್ರೀ ನಟ್ಟೋಜ ಅವರು ಮಾತನಾಡಿ ಯಾವ ಕೆಲಸವೂ ಕಷ್ಟವಾದದ್ದಲ್ಲ. ನಾವು ಇದು ಕಷ್ಟ ಎಂದುಕೊಂಡರೆ ಅದು ಹಾಗೆಯೇ ಭಾಸವಾಗುತ್ತದೆ. ಇದು ಸುಲಭ ಎಂದುಕೊಂಡರೆ ಸುಲಭವೆನಿಸುತ್ತದೆ. ಸಂಸ್ಥೆಯಲ್ಲಿ ಅತ್ಯುತ್ತಮ ಶೈಕ್ಷಣಿಕ ವಾತಾವರಣ, ಉತ್ಕøಷ್ಟ ಮಟ್ಟದ ಉಪನ್ಯಾಸಕರಿದ್ದಾರೆ. ಎಲ್ಲರೂ ಕೈಜೋಡಿಸಿ ಕಾರ್ಯನಿರ್ವಹಿಸಿದರೆ ಪ್ರತಿಯೊಂದೂ ಸಾಧ್ಯವಾಗುತ್ತಾ ಸಾಗುತ್ತದೆ. ಈವರೆಗೆ ಆಡಳಿತ ಮಂಡಳಿಯ ಭಾಗವಾಗಿದ್ದ ತಾನು ಪ್ರಾಂಶುಪಾಲೆಯಾಗಿದ್ದರೆ ಇದೀಗ ಉಪನ್ಯಾಸಕರ ಪ್ರತಿನಿಧಿಯೇ ಪ್ರಾಚಾರ್ಯ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಮತ್ತಷ್ಟು ವೇಗದಲ್ಲಿ ಮುನ್ನಡೆಸುವ ಹೊಣೆಯನ್ನು ಎಲ್ಲರೂ ಹೊರಬೇಕಾಗಿದೆ ಎಂದು ನುಡಿದರು.
ನೂತನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ ಮಾತನಾಡಿ ಗುಣಮಟ್ಟಕ್ಕೆ ಮತ್ತೊಂದು ಹೆಸರಾಗಿ ಅಂಬಿಕಾ ಸಂಸ್ಥೆ ಇಂದು ಸಮಾಜದಲ್ಲಿ ಗುರುತಿಸಿಕೊಂಡಿದೆ. ಎಲ್ಲರೂ ಜತೆಜತೆಯಾಗಿ ಹೆಜ್ಜೆ ಹಾಕಿದರೆ ಸಂಸ್ಥೆ ಮತ್ತಷ್ಟು ಉನ್ನತಿಯನ್ನು ಸಾಧಿಸುವುದರಲ್ಲಿ ಅನುಮಾನವಿಲ್ಲ. ಅಂಬಿಕಾ ಸಂಸ್ಥೆ ಅತ್ಯಂತ ತನ್ನ ಮೇಲೆ ವಿಶ್ವಾಸ ಇರಿಸಿ ಎಳೆಯ ವಯಸ್ಸಿನಲ್ಲಿ ತನಗೆ ಗುರುತರ ಜವಾಬ್ದಾರಿಯನ್ನು ಸಂಸ್ಥೆ ನೀಡಿದೆ. ಇದನ್ನು ನಿರ್ವಹಿಸುವಲ್ಲಿ ಎಲ್ಲರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಉಪನ್ಯಾಸಕರು, ಉಪನ್ಯಾಸಕೇತರ ವೃಂದ ಹಾಜರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق