ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿವೃತ್ತ ಮುಖ್ಯಶಿಕ್ಷಕ ಟಿ. ಕೃಷ್ಣ ಭಟ್ ನಿಧನ

ನಿವೃತ್ತ ಮುಖ್ಯಶಿಕ್ಷಕ ಟಿ. ಕೃಷ್ಣ ಭಟ್ ನಿಧನ



ಅಡ್ಯನಡ್ಕ: ನಿವೃತ್ತ ಮುಖ್ಯ ಶಿಕ್ಷಕ ಟಿ. ಕೃಷ್ಣ ಭಟ್ ಇವರು ಜೂನ್ 13 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಅಡ್ಯನಡ್ಕ ಸಮೀಪದ ತಲಂಜೇರಿಯ ಕೃಷ್ಣ ಭಟ್ ಅವರು ಒಂದೆರಡು ವರ್ಷಗಳಿಂದ ಪುತ್ತೂರು ಪುರುಷರಕಟ್ಟೆ ಸಮೀಪ ಕರ್ಗಲ್ಲು ಎಂಬಲ್ಲಿ ವಾಸವಾಗಿದ್ದರು.


ಅಡ್ಯನಡ್ಕದ ಜನತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಬಳಿಕ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸರಕಾರ ಅವರನ್ನು ಗೌರವಿಸಿತ್ತು. ನಿವೃತ್ತಿಯ ನಂತರ ಜನತಾ ಪ್ರೌಢಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿ ದುಡಿದು, ಜನತಾ ಪದವಿಪೂರ್ವ ವಿದ್ಯಾಲಯದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೆಚ್ಚಿನ ಕನ್ನಡ ಉಪನ್ಯಾಸಕರಾಗಿದ್ದರು.


ಟಿ.ಕೆ ಮಾಷ್ಟ್ರು ಎಂದೇ ಜನಪ್ರಿಯರಾಗಿದ್ದ ಕೃಷ್ಣ ಭಟ್ಟರು ಯಕ್ಷಗಾನ ಕಲಾವಿದರೂ ಆಗಿದ್ದರು. ಅಡ್ಯನಡ್ಕದಲ್ಲಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದು ಅನೇಕ ಯಕ್ಷಗಾನ ಬಯಲಾಟ, ತಾಳಮದ್ದಳೆಗಳನ್ನು ಆಯೋಜಿಸಿದ್ದರು ಮಾತ್ರವಲ್ಲದೆ ವೇಷಧಾರಿಯಾಗಿ, ಅರ್ಥಧಾರಿಯಾಗಿ ಪ್ರಸಿದ್ಧರಾಗಿದ್ದರು. ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೃತ್ಯ, ಅರ್ಥಗಾರಿಕೆಯ ತರಬೇತಿ ನೀಡಿ ಯಕ್ಷಗಾನ ಸಂಘಟಿಸುತ್ತಿದ್ದರು. ಯಕ್ಷಗಾನ ಕಲಾವಿದೆಯೂ ಆಗಿರುವ ಪತ್ನಿ, ಕೇಪು ಅಮೈ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ, ರತ್ನಾವತಿ ಟಿ.ಕೆ. ಭಟ್ ಅವರು ಸಂಚಾಲಕಿಯಾಗಿರುವ ಅಡ್ಯನಡ್ಕ ಮಹಿಳಾ ಯಕ್ಷಗಾನ ಸಂಘದ ಬೆನ್ನೆಲುಬಾಗಿದ್ದರು.


ಶಾಲಾ‌ ವಾರ್ಷಿಕೋತ್ಸವದ ವೇದಿಕೆ ನಿರ್ಮಾಣದಲ್ಲಿ ಪರಿಣತರಾಗಿದ್ದ ಅವರು ಮುಖವರ್ಣಿಕೆ ಬರೆಯುವುದರಲ್ಲಿಯೂ ನಿಸ್ಸೀಮರಾಗಿದ್ದರು. ಗಮಕ ವಾಚನ ಪ್ರವಚನ ಕಾರ್ಯಕ್ರಮಗಳಲ್ಲಿ ಪ್ರವಚನಕಾರರಾಗಿಯೂ, ಧಾರ್ಮಿಕ ಭಾಷಣಕಾರರಾಗಿಯೂ ಜನಮನ್ನಣೆ ಗಳಿಸಿದ್ದರು. ಅಡ್ಯನಡ್ಕದ ಅಯ್ಯಪ್ಪಸ್ವಾಮಿ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷರಾಗಿ ಹಲವು ವರ್ಷ ಮುನ್ನಡೆಸಿದ್ದರು, ಪ್ರಸ್ತುತ ಅದರ ಗೌರವಾಧ್ಯಕ್ಷರಾಗಿದ್ದರು.


ಮೃತರು ಓರ್ವ ಪುತ್ರ, ಓರ್ವ ಪುತ್ರಿ, ನಾಲ್ವರು ಮೊಮ್ಮಕ್ಕಳು, ಸೋದರ-ಸೋದರಿಯರನ್ನು ಹಾಗೂ ಬಂಧುಬಳಗದವರನ್ನು ಅಗಲಿದ್ದಾರೆ.


0 Comments

Post a Comment

Post a Comment (0)

Previous Post Next Post