ನಿದ್ದೆಯೆ ಬರದ ಈ ಕಣ್ಣಲ್ಲಿ ನೀರಿನ ತಳಮಳ. ಯಾಕೋ ಮನಸ್ಸಲ್ಲಿ ಹೇಳ ತೀರದಷ್ಟು ನೋವು ತನ್ನ ಹೃದಯವನ್ನು ಹಿಂಚುತ್ತಿದೆ. ಕಾರಣ ಗೊತ್ತಿಲ್ಲ. ನನ್ನ ಮನಸ್ಸಿಗೆ ನಾನೆ ಪ್ರಶ್ನೆ ಹಾಕಿದೆ ತಿಳಿಯಲಿಲ್ಲ. ಪ್ರತಿಯೊಂದು ಕಣ್ಣ ಹನಿಯಲ್ಲೂ ಒಂದೊಂದು ನೋವಿನ ಸಂಕೇತಗಳಿತ್ತು. ಕೇಳಲಾಗದ ವಯಸ್ಸಿನಲ್ಲಿ ಎಲ್ಲವನ್ನು ಕೇಳಿದೆ ಎಲ್ಲವನ್ನೂ ತಿಳಿದೆ ಎಂಬ ಒಂದು ಭಾವನೆ ಮೂಡಿತು. ಎಲ್ಲರಿಗೂ ನನ್ನಿಂದಲೆ ಕಷ್ಟವಾಯಿತು. ನನ್ನಿಂದಲೇ ಮೊದಲಿದ್ದ ಖುಷಿ, ನೆಮ್ಮದಿ ದೂರ ಸರಿಯಿತು. ಚಿಂತೆ ಮಾಡಬೇಡ ಎಂದಾಗಲೂ ಹರಿಯುವುದು ಕಣ್ಣೀರು ಮಾತ್ರವಾಗಿತ್ತು. ನನ್ನನ್ನು ಸಮಾಧಾನಿಸಲು ನನ್ನ ಮನಸ್ಸು ನನ್ನೆರಡು ಕೈಗಳಿಂದಲೂ ಸಾಧ್ಯವಾಗಲಿಲ್ಲ. ಜೀವನ ಅಂದರೆ ಏನೋ ಎಂದು ತಿಳಿದಿದ್ದೆ. ಆದರೆ ನಾನು ಅಂದುಕೊಂಡಿದ್ದ ಹಾಗೇ ಯಾವುದು ಅಲ್ಲ ಎಂಬುದು ಅರಿವಾಯಿತು. ಬದುಕು ಎಂಬ ಏಳುಬೀಳುವಿನ ನಡುವೆ ನಾನೊಬ್ಬಳು ದುರಾದೃಷ್ಟ ಹುಡುಗಿ. ಎಲ್ಲವನ್ನು ಒಂದು ಕಡೆ ಕಳಚಿ ಮುಂದಿನ ಜೀವನ ಶೈಲಿ ಸುಮಧುರವಾಗಿರಬಹುದು ಎಂಬ ಆಕಾಂಕ್ಷೆ ಹೊಂದಿದ್ದೆ. ಇವೆಲ್ಲ ಕನಸು ಕಂಡಿದ್ದು ಮಾತ್ರವಲ್ಲದೇ ಯಾವುದು ಯಶಸ್ವಿಯಾಗಲಿಲ್ಲ. ಕಾರಣ ನನ್ನ ಹಣೆಬರಹ. ಬ್ರಹ್ಮ ಗೀಚಿದ ಬರಹವನ್ನು ಯಾರು ತಾನೇ ತಿದ್ದಲು ಸಾಧ್ಯ.. ಆತ ಸೂತ್ರಧಾರಿ ನಾನು ಪಾತ್ರಧಾರಿ. ಹಾಕಿದ ತಾಳಕ್ಕೆ ತಕ್ಕ ಕುಣಿಯುತ್ತಾ ಜೀವನದ ಗಡಿ ಸೇರು ಎಂಬುದು ಬ್ರಹ್ಮನ ಆಶೀರ್ವಾದವಷ್ಟೇ. ನಿದ್ದೆ ಬರದೆ ಚಡಪಡಿಸುವ ನನ್ನ ಬಟ್ಟೆ ಪೂರ್ತಿ ಕಣ್ಣೀರಿನಲ್ಲಿ ಒದ್ದೆಯಾಗಿತ್ತು. ಸಮಯ ಮುಂಜಾನೆ ನಾಲ್ಕು ಗಂಟೆಯಾದರೂ ತಿಳಿದಿಲ್ಲ. ನನ್ನ ಮನಸ್ಸಿನಲ್ಲಿ ಒಂದೇ ಉದ್ದೇಶ ಎಲ್ಲರಿಗೂ ಹೊರೆಯಾಗುವ ಮತ್ತು ತಪ್ಪು ಮಾಡುವ ನನ್ನಿಂದ ಯಾರಿಗೂ ನನ್ನ ನೋವು ತಿಳಿಯಬಾರದು. ನನ್ನವರೆಂದು ಭಾವಿಸಿ ಆ ಪ್ರಿತಿಯಿಂದ ನನಗೆ ಸಮಯ ನೀಡಿ ಎಂದು ಹೇಳಿದ ಮಾತು ತಪ್ಪಾಗಿ ಹೋಯಿತು. ಏನು ಮಾಡುವುದು ಎಂದು ಯೋಚಿಸಿದಾಗ ಕೊನೆಗೆ ತಿಳಿಯಿತು ನಿನ್ನ ಎಲ್ಲ ಪ್ರಶ್ನೆಗೂ, ನೋವಿಗೂ, ಪ್ರತಿ ದಿನ ಹಾಕುವ ಕಣ್ಣೀರಿಗೂ ಸರಿಯಾದ ಉತ್ತರ ಮೌನ... ನಂತರದ ದಿನಗಳಿಂದ ಮೌನದಿಂದಲೇ ಉತ್ತರಿಸಿದೆ ಪ್ರತಿಯೊಬ್ಬರ ಪ್ರಶ್ನೆಗೆ...
-ನಿರೀಕ್ಷಾ ಗೌಡ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
إرسال تعليق