ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮರೆಯಾದ ವೇದ ವಿದ್ವಾಂಸ ಚೂಂತಾರು ಲಕ್ಷ್ಮೀನಾರಾಯಣ ಭಟ್ಟ; ಕುಟುಂಬಸ್ಥರಿಗೆ ಮಾಜಿ ಸಚಿವ ರಮಾನಾಥ ರೈ ಸಾಂತ್ವನ

ಮರೆಯಾದ ವೇದ ವಿದ್ವಾಂಸ ಚೂಂತಾರು ಲಕ್ಷ್ಮೀನಾರಾಯಣ ಭಟ್ಟ; ಕುಟುಂಬಸ್ಥರಿಗೆ ಮಾಜಿ ಸಚಿವ ರಮಾನಾಥ ರೈ ಸಾಂತ್ವನ


ಮಂಗಳೂರು: ವೈದಿಕ ಪರಂಪರೆಯೆಂದರೆ ಹೇರಿಕೆಯ, ಶೋಷಣೆಯ ಪದ್ಧತಿಯಲ್ಲ. ಅದೊಂದು ಜೀವನ ಕ್ರಮ. ಭಾರತದ ಸನಾತನ ಸಂಸ್ಕೃತಿ ಪರಂಪರೆಯ ಭಗವಾಗಿರುವ ವೇದ, ಉಪನಿಷತ್ತು, ಮಹಾಕಾವ್ಯ ಹಾಗೂ ಧಾರ್ಮಿಕ ಆಚಾರ- ವಿಚಾರಗಳು ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅಂತಹ ಸನಾತನ ಸಂಸ್ಕೃತಿ ಪರಂಪರೆಯ ಹಿರಿಯ ಕೊಂಡಿಯಾಗಿ ಸುಮಾರು ನಾಲ್ಕು ದಶಕಗಳ ಕಾಲ ಪುರೋಹಿತರಾಗಿ, ಸೇವೆ ಸಲ್ಲಿಸಿದ ವೇದ ವಿದ್ವಾಂಸರು ಶ್ರೀ ಚೂಂತಾರು ಲಕ್ಷ್ಮೀನಾರಾಯಣ ಭಟ್ಟರು. ಸುಳ್ಯ ತಾಲೂಕು ಹಾಗೂ ಹೊರ ತಾಲೂಕುಗಳ ಬಹಳಷ್ಟು ಮನೆಗಳ ಮನೆಗಳ ಆರಾಧನಾ ಪರಂಪರೆಯ ಭಾಗವಾಗಿ, ಧಾರ್ಮಿಕ ಆಚರಣೆಗಳ ಪುರೋಹಿತರಾಗಿ, ವೃತ್ತಿ ಪಾವಿತ್ರ್ಯವನ್ನು ಕಾಯ್ದುಕೊಂಡು ಬದುಕಿದ ಶ್ರೀಯುತ ಲಕ್ಷ್ಮೀನಾರಾಯಣ ಭಟ್ಟರು, ದಿನಾಂಕ 14-10-2022 ರಂದು ನಮ್ಮನ್ನಗಲಿರುವುದು ಸಂಸ್ಕೃತಿ ಪರಂಪರೆಯ ವಿಭಾಗಕ್ಕೊಂದು ದೊಡ್ಡ ತುಂಬಲಾರದ ನಷ್ಟ.ಅವರ ಸಾವಿನ ನೋವನ್ನು ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಹಾರೈಸಿದರು ಮತ್ತು ಅವರ ಮಕ್ಕಳಿಗೆ ಸಾಂತ್ವನ ಹೇಳಿದರು.


ವೈದಿಕ ವೃತ್ತಿಯೊಂದಿಗೆ ಉತ್ತಮ ಕೃಷಿಕರಾಗಿ, ಪಾಕ ತಜ್ಞತೆಯನ್ನೂ ಹೊಂದಿದವರಾಗಿ, ವೃತ್ತಿ ನಿಷ್ಠೆಯೊಂದಿಗೆ ಸಾವಿರಾರು ಶಿಷ್ಯ- ಬಂಧುಗಳ ಶ್ರೇಯೋಭಿವೃದ್ಧಿಯಲ್ಲಿ ತನ್ನ ಉತ್ಕರ್ಶೆಯನ್ನು ಕಂಡುಕೊಂಡ ವಿರಳ ವ್ಯಕ್ತಿತ್ವದವರು.  


ಅಂದಿನ ಕಾಲಮಾನದಲ್ಲಿ ಪೌರೋಹಿತ್ಯವೆಂದರೆ ಬಡತನದ ಉದ್ಯೋಗವಾಗಿತ್ತು. ಅದೊಂದು ವೃತ್ತಿಯಾಗಿದ್ದರೂ, ಜೀವನಾವಶ್ಯಕವನ್ನು ಪೂರೈಸಿಕೊಳ್ಳುವುದು ಕಷ್ಟವೆಂಬ ಪರಿಸ್ಥಿತಿ ಇತ್ತು. ಪುರದೆಲ್ಲರ ಹಿತ ಬಯಸುವ, ಉತ್ತರೋತ್ತರ ಶ್ರೇಯಕ್ಕಾಗಿ ಹಾರೈಸುವ ಪುರೋಹಿತರು ಕಷ್ಟದಲ್ಲಿದ್ದರೂ, ಶಿಷ್ಯ ಬಂಧುಗಳ ಔದಾರ್ಯತೆಯ ರಕ್ಷಣೆ ಇತ್ತು. ಅಂತಹ ದಿನಗಳಲ್ಲಿ ಪೌರೋಹಿತ್ಯವೂ ಒಂದು ಉದ್ಯೋಗ ಎಂಬ ನೆಲೆಯಲ್ಲಿ ವೃತ್ತಿ ಗೌರವ ಮತ್ತು ಪಾವಿತ್ರ್ಯತೆಯ ನೆಲೆಗಟ್ಟಿನಲ್ಲಿ, ಪೌರೋಹಿತ್ಯ ವೃತ್ತಿಗೊಂದು ಸ್ಥಾನ -ಮಾನ ಮತ್ತು ಆರ್ಥಿಕ ಬಲವನ್ನು ತಂದುಕೊಟ್ಟವರು ಇವರು. ಈ ಹಿನ್ನೆಲೆಯಲ್ಲಿ ಇವರ ನೇರ ನಿಷ್ಠುರ ನಡೆ ಕೆಲವೊಮ್ಮೆ ಅಪಥ್ಯವಾಗಿದ್ದರೂ, ಪುರೋಹಿತ ವರ್ಗದವರ ಜೀವನ ಮಟ್ಟದ ಸುಧಾರಣೆಯ ಕ್ರಾಂತಿಕಾರಿ ಹೆಜ್ಜೆಯಾಗಿತ್ತು ಎಂಬುದು ಒಪ್ಪಿಕೊಳ್ಳುವ ವಿಷಯವಾಗಿದೆ.


ಇವರ ಪತ್ನಿ ಸರೋಜಿನಿ. ಮನೆ, ಕೃಷಿ, ಮಕ್ಕಳ ಜವಾಬ್ದಾರಿ ಇತ್ಯಾದಿಗಳ ನಿರ್ವಹಣೆಯನ್ನು ಮಾಡಿದ ಆದರ್ಶ ಗೃಹಣಿ. ಇವರಿಗೆ ನಾಲ್ಕು ಜನ ಮಕ್ಕಳು. ಮಗಳು ಗೀತಾ ದೇವಿ, ವಿವಾಹಿತರಾಗಿ ಮಂಗಳೂರಿನಲ್ಲಿದ್ದಾರೆ. ಹಿರಿಯ ಮಗ ತಂದೆಯಂತೆ ವೇದ ವಿದ್ವಾಂಸರಾಗಿ, ತಂದೆಯ ವೃತ್ತಿಯಾದ ಪೌರೋಹಿತ್ಯವನ್ನು ಮುನ್ನಡೆಸುತ್ತಿದ್ದಾರೆ. ಜೊತೆಗೆ ಸಮಾಜಿಕವಾಗಿಯೂ ತೊಡಗಿಸಿಕೊಂಡಿದ್ದಾರೆ. ಎರಡನೆಯ ಮಗ ಡಾ|| ಮುರಲೀ ಮೋಹನ್ ಚೂಂತಾರು. ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರಾಗಿದ್ದು, ಹೊಸಂಗಡಿಯಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ನಡೆಸುತ್ತಿದ್ದಾರೆ. ಜೊತೆಗೆ ದಕ್ಷಿಣ ಕನ್ನಡ ಜೆಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಆಗಿ, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ವೈದ್ಯಕೀಯ ಸಾಹಿತ್ಯದ ಪ್ರಸಿದ್ಧ ಬರಹಗಾರರಾಗಿ ಸಮಾಜಮುಖಿಯಾಗಿ ತೊಡಗಿಕೊಂಡಿದ್ದಾರೆ. ಕೊನೆಯ ಮಗ ನಾಕೇಶ ಇಂಜಿನಿಯರಿಂಗ್ ಪದವೀಧರರಾಗಿದ್ದು ಸದ್ಯ ಅಮೇರಿಕಾದಲ್ಲಿ ವೃತ್ತಿ ನಿರತರಾಗಿರುತ್ತಾರೆ. ಮಕ್ಕಳೆಲ್ಲರೂ ಸೇರಿ ತಾಯಿಯ ನೆನಪಿನಲ್ಲಿ ಚೂಂತಾರು ಸರೋಜಿನಿ ಪ್ರತಿಷ್ಠಾನವೆಂಬ ಸಂಸ್ಥೆಯನ್ನು ನಡೆಸುತ್ತಿದ್ದು, ಲಕ್ಷ್ಮೀನಾರಾಯಣ ಭಟ್ಟರು ಗೌರವ ಅಧ್ಯಕ್ಷರಾಗಿ ಅದರ ಮಾರ್ಗದರ್ಶಕರೂ ಆಗಿದ್ದರು. ಶ್ರೀಯುತರ 80ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಮಕ್ಕಳು "ಆಶೀತಿ " ಎಂಬ ಸ್ಮರಣ ಸಂಚಿಕೆಯನ್ನು ಸಮರ್ಪಸಿರುವುದು ಲಕ್ಷ್ಮೀನಾರಾಯಣ ಭಟ್ಟರ ಹೆಸರನ್ನು ಶಾಶ್ವತವಾಗಿರಿಸಿದ ಕಾರ್ಯವಾಗಿದೆ.

     

ಸಮಾಜದ ಸಂಸ್ಕೃತಿಯನ್ನು ಅಲ್ಲಿನ ಜನ ವಾಸಿಗಳ ಸಂಸ್ಕಾರದಲ್ಲಿ ಕಾಣಬೇಕಂತೆ. ಒಂದು ಕುಟುಂಬದ ಸಂಸ್ಕೃತಿಯನ್ನು ಅದರ ಸದಸ್ಯರಲ್ಲಿ ಕಾಣಬಹುದಂತೆ. ಅಂತೆಯೇ ತಂದೆ-ತಾಯಿಯವರ ಸಂಸ್ಕಾರ- ಸಂಸ್ಕೃತಿಯನ್ನು ಮಕ್ಕಳಲ್ಲಿ ಕಾಣಬೇಕಂತೆ. ಈ ಮಾತಿನಂತೆ ಚೂಂತಾರು ಲಕ್ಷ್ಮೀನಾರಾಯಣ ಭಟ್ಟರು ಮತ್ತು ಅವರ ಕುಟುಂಬ ಬೆಳೆದಿದೆ, ವಿಸ್ತರಣೆಗೊಂಡಿದೆ.


1941 ರಲ್ಲಿ ಮಾರ್ಚ್ 1 ರಂದು ಜನಿಸಿದ ಇವರು, 14/10/2022ನೇ ಶುಕ್ರವಾರದಂದು 82 ವರ್ಷಗಳ ತುಂಬು ಬದುಕಿಗೆ ವಿದಾಯ ಹೇಳಿದ್ದಾರೆ. ಅವರ ಬದುಕಿನ ಮೌಲ್ಯಗಳು, ಸಾಮಾಜಿಕ ಕೊಡುಗೆಗಳು ಪ್ರಚಾರ ಪಡೆಯದಿದ್ದರೂ, ಶಾಶ್ವತ ಸ್ಮಾರಕಗಳ ರೂಪದಲ್ಲಿ ಕಾಣಿಸಿಗದಿದ್ದರೂ, ಜನ ಜೀವನದಲ್ಲಿ ಸದಾ ಜೀವಂತವಾಗಿರುವುದು ಸಣ್ಣ ಸಂಗತಿಯಲ್ಲ. ಜೀವಂತಿಕೆಯ ಬದುಕಿಗೆ ಜೀವದ್ರವ್ಯದಂತೆ, ಹವಿಸ್ಸಿನಂತೆ ಬದುಕಿದ ಲಕ್ಷ್ಮೀನಾರಾಯಣ ಭಟ್ಟರು. ಎಂದೂ ಮರೆಯಾಗದ ಮರೆಯಬಾರದ ವ್ಯಕ್ತಿತ್ವ ವಿಶೇಷದವರು.

ಈ ಸಂದರ್ಭದಲ್ಲಿ ಡಾ ರಾಜಾರಾಂ, ಅಶೋಕ್ ಚೂಂತಾರು, ಮಹೇಶ್ ಚೂಂತಾರು, ನಾಕೇಶ ಚೂಂತಾರು,  ರಾಮಕೃಷ್ಣ ಭಟ್ ಬೆಳಾಲು, ಶ್ರೀಮತಿ ಗೀತಾ ಗಣೇಶ ಮುಂತಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 تعليقات

إرسال تعليق

Post a Comment (0)

أحدث أقدم