ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶಾಲಾ ಪ್ರವೇಶೋತ್ಸವದ ಸಂಭ್ರಮದೊಂದಿಗೆ ನವಾಗತ ವಿದ್ಯಾರ್ಥಿಗಳನ್ನು ಆದರದಿಂದ ಬರಮಾಡಿಕೊಳ್ಳಲಾಯಿತು. ಧ್ವಜಾರೋಹಣ, ಶಂಖನಾದ ಹಾಗೂ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭಾಕಾರ್ಯಕ್ರಮದಲ್ಲಿ ವಿದ್ಯಾಲಯದ ಅಧ್ಯಕ್ಷ ಎಸ್.ಎನ್.ರಾವ್ ಮನ್ನಿಪ್ಪಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ದೀಪ ಬೆಳಗಿಸಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಜವಾಬ್ದಾರಿಯಿಂದ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ. ಅವರಿಗೆ ಉತ್ತಮವಾದ ತಿಳುವಳಿಕೆಯನ್ನು ನೀಡಿ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪ್ರತಿಯೊಬ್ಬ ಹೆತ್ತವರೂ ಮುತುವರ್ಜಿಯಿಂದ ಮುನ್ನಡೆಯಬೇಕಾಗಿದೆ ಎಂದರು.
ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಲಯಕ್ಕೆ ಹೊಸದಾಗಿ ಸೇರ್ಪಡೆಗೊಂಡ ಪುಟಾಣಿಗಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೂ ಪುಸ್ತಕ ಹಾಗೂ ಪೆನ್ನುಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಶ್ರೀರಾಮಚಂದ್ರಾಪುರ ಮಠದ ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಶ್ರೀಗಳ ಪೂರ್ಣ ಆಶೀರ್ವಾದಗಳನ್ನು ಬೇಡಿಕೊಳ್ಳುತ್ತಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ ಮಾರ್ಗ ಶುಭಹಾರೈಸಿದರು. ಶಾಲಾ ಶಿಕ್ಷಕಿಯರಾದ ವಿದ್ಯಾಲಕ್ಷ್ಮಿ ಸ್ವಾಗತಿಸಿ, ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯಾ ವಂದಿಸಿದರು.
إرسال تعليق