ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡಿನಲ್ಲಿ ಕನ್ನಡದ ಕತ್ತು ಹಿಸುಕಲು ಮತ್ತೆ ಕೇರಳ ಯತ್ನ: ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕನ್ನಡೇತರರ ನೇಮಕ

ಕಾಸರಗೋಡಿನಲ್ಲಿ ಕನ್ನಡದ ಕತ್ತು ಹಿಸುಕಲು ಮತ್ತೆ ಕೇರಳ ಯತ್ನ: ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕನ್ನಡೇತರರ ನೇಮಕ

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದಿಂದ ಧರಣಿ


ಕಾಸರಗೋಡು: "ಕನ್ನಡ ಸಂಸ್ಕೃತಿ ಉಳಿಸಲು ಸಾಧ್ಯವಿರುವ ಬಹುದೊಡ್ಡ ವಿಶ್ವಸನೀಯ ವರ್ಗ ಅಧ್ಯಾಪಕರಾಗಿದ್ದಾರೆ. ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ಕನ್ನಡಿಗರಿಗಿರುವ ಸವಲತ್ತನ್ನು ಉಳಿಸಿಕೊಳ್ಳಲು, ಕನ್ನಡ ಜಿಲ್ಲಾ ವಿದ್ಯಾಧಿಕಾರಿಯನ್ನು ಆಯ್ಕೆ ಮಾಡಲು ಸಾಂಕೇತಿಕ ಧರಣಿ ಮುಷ್ಕರ ಅತ್ಯಗತ್ಯವಾಗಿದೆ. ಇದು ಫಲಪ್ರದವಾಗದೆ ಹೋದರೆ ಉಗ್ರ ಹೋರಾಟಕ್ಕೂ ಸಿದ್ದರಾಗಬೇಕು" ಎಂದು ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ ಭಟ್ ನುಡಿದರು.


ಇವರು ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕನ್ನಡೇತರರನ್ನು ನೇಮಿಸಿದ ಸರಕಾರದ ಕ್ರಮವನ್ನು ಪ್ರತಿಭಟಿಸಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಆಶ್ರಯದಲ್ಲಿ ನಡೆದ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು.


ಮಂಜೇಶ್ವರ, ಕುಂಬಳೆ ಹಾಗೂ ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿಗಳು ಕನ್ನಡದವರೇ ಆಗಬೇಕೆಂಬ ನಿಯಮ ಇರುವಂತೆ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಕನ್ನಡ ಮಾಧ್ಯಮದವರೇ ಆಗಬೇಕೆಂಬ ನಿಯಮವಿದ್ದರೂ, ಇದೀಗ ಕನ್ನಡೇತರ ಜಿಲ್ಲಾ ಶಿಕ್ಷಣಾಧಿಕಾರಿ ಯನ್ನು ನೇಮಿಸುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ನೇತಾರರು ಸಂಬಂಧಿತ ಇಲಾಖೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿ, ಮನವಿ ಸಲ್ಲಿಸಿದರೂ ನೇಮಕವನ್ನು ಹಿಂತೆಗೆದು ಕೊಳ್ಳದೇ ಇರುವುದರಿಂದ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು. ಕನ್ನಡ ಅಧ್ಯಾಪಕ ಸಂಘಟನೆಯ ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ. ಬಿ ಅಧ್ಯಕ್ಷತೆ ವಹಿಸಿದ್ದರು. ಹೋರಾಟ ಸಮಿತಿ ಕಾರ್ಯದರ್ಶಿ ಬಾಸ್ಕರ ಕುಂಬಳೆ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಕೇಂದ್ರ ಸಮಿತಿಯ ಅಧಿಕೃತ ವಕ್ತಾರ ರವೀಂದ್ರನಾಥ ಕೆ.ಆರ್, ಉಪಾಧ್ಯಕ್ಷೆ ಪ್ರಭಾವತಿ ಕೆದಿಲಾಯ, ಕೇರಳ ರಾಜ್ಯ ಕನ್ನಡ ಬರಹಗಾರರ ಸಂಘದ ಅಧ್ಯಕ್ಷ, ಕನ್ನಡಪರ ಹೋರಾಟಗಾರ ಜಿ. ವೀರೇಶ್ವರ ಭಟ್, ಕನ್ನಡ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್ ಎಸ್, ಮಂಜೇಶ್ವರ ಉಪಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಕೆ, ಮಂಗಲ್ಪಾಡಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಗೋಪಾಲಕೃಷ್ಣ ನಾಯಕ್ ಮೊದಲಾದವರು ಮಾತನಾಡಿದರು.


ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿದರು. ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕೇಂದ್ರ ಸಮಿತಿ ಕೋಶಾಧಿಕಾರಿ ಪದ್ಮಾವತಿ ಎಂ ನಿರೂಪಿಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷ ಸುಕೇಶ್ ಎ, ಜತೆ ಕೋಶಾಧಿಕಾರಿ ಶರತ್ ಕುಮಾರ್ ಕುಂಟಿಕಾನ, ಕಾಸರಗೋಡು ಉಪಜಿಲ್ಲಾ ಘಟಕದ ಅಧ್ಯಕ್ಷ ವಿನೋದ್ ರಾಜ್ ಪಿ. ಕೆ, ಮಂಜೇಶ್ವರ ಉಪಜಿಲ್ಲಾ ಘಟಕದ ಕೋಶಾಧಿಕಾರಿ ಜೀವನ್ ಕುಮಾರ್, ಸದಸ್ಯರಾದ ಶರತ್ ಕುಮಾರ್ ಆರ್, ಅಬ್ದುಲ್ ರಹಿಮಾನ್ ಮೊದಲಾದವರು ನೇತೃತ್ವ ವಹಿಸಿದರು. ಕಾಸರಗೋಡು ಉಪಜಿಲ್ಲಾ ಕಾರ್ಯದರ್ಶಿ ಬಾಬು ಕೆ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 تعليقات

إرسال تعليق

Post a Comment (0)

أحدث أقدم