ಕಾಸರಗೋಡು: ಪೆರ್ಲ ಇಡಿಯಡ್ಕ ಸಮೀಪದ ಕುದ್ವ ಎಂಬಲ್ಲಿನ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಬಣ್ಪುತ್ತಡ್ಕದ ಉಮೇಶ್ (35) ಎಂದು ಗುರುತಿಸಲಾಗಿದೆ.
ಮೂಲತಃ ನಿಡ್ಪಳ್ಳಿ ನಿವಾಸಿಯಾದ ಉಮೇಶ್ ಬಣ್ಪುತ್ತಡ್ಕದಿಂದ ವಿವಾಹವಾಗಿದ್ದು ಬಳಿಕ ಕಳೆದ ಕೆಲವು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದರು.
ಬಣ್ಪುತ್ತಡ್ಕದಲ್ಲಿ ನೂತನ ಮನೆಯೊಂದನ್ನು ನಿರ್ಮಿಸಿ ಕಳೆದ ಒಂದು ತಿಂಗಳ ಹಿಂದೆ ಗೃಹ ಪ್ರವೇಶ ನಡೆಸಿದ್ದರು. ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು.
ಶೇಂದಿ ಸಂಗ್ರಹ ಕಾಯಕ ನಿರ್ವಹಿಸುತ್ತಿದ್ದ ಅವರು ಈ ಪರಿಸರದ ಹಲವು ತೆಂಗಿನ ಮರವೇರಿ ಶೇಂದಿ ಸಂಗ್ರಹಿಸುತ್ತಿದ್ದರು.
ಈ ನಿಟ್ಟಿನಲ್ಲಿ ತೋಟಕ್ಕೆ ಬಂದಿದ್ದ ವೇಳೆ ಕೈಕಾಲು ಮುಖ ತೊಳೆಯಲು ಕೆರೆಯ ಬಳಿ ತಲುಪಿ ಆಯ ತಪ್ಪಿ ಬಿದ್ದಿರಬೇಕೆಂದು ಸ್ಥಳೀಯರು ಸಂಶಯಿಸಿದ್ದಾರೆ.
ಬದಿಯಡ್ಕ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಮೃತದೇಹ ಮೇಲಕ್ಕೆತ್ತಿದ್ದರು.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
إرسال تعليق