ಉಡುಪಿ: ಶ್ರೀ ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ ಕೀರ್ತಿಶೇಷ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸ್ಮರಣಾರ್ಥ ಉಡುಪಿ ಜಿಲ್ಲೆಯ ನೀಲಾವರ ಗ್ರಾಮದಲ್ಲಿ (ಗೋಶಾಲೆ ಸಮೀಪ) ನಿರ್ಮಾಣವಾಗಲಿರುವ ಸ್ಮೃತಿ ವನಕ್ಕೆ ಭೂಮಿ ಪೂಜಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ಸಮಾರಂಭ ನಡೆಯಲಿದ್ದು ರಾಜ್ಯದ ಅರಣ್ಯ ಮಂತ್ರಿಗಳಾದ ಉಮೇಶ ವಿ ಕತ್ತಿಯವರು ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದು ಶಿಲಾನ್ಯಾಸ ನೆರವೇರಿಸಿದರು. ಉಡುಪಿ ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಮಂತ್ರಿ ಶೋಭಾ ಕರಂದ್ಲಾಜೆ, ಸಚಿವರುಗಳಾದ ಎಸ್ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ ಸುನಿಲ್ ಕುಮಾರ್, ರಾಜ್ಯ ಪಶ್ಚಿಮ ಘಟ್ಟ ಮತ್ತು ಜೈವಿಕ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಮಟ್ಟಾರ್ ರತ್ನಾಕರ ಹೆಗ್ಡೆ, ನೀಲಾವರ ಗ್ರಾ ಪಂ ಅಧ್ಯಕ್ಷ ಮಹೇಂದ್ರ ಕುಮಾರ್, ಜಿಲ್ಲಾಧಿಕಾರಿ ಕೂರ್ಮ ರಾವ್ ಸೇರಿಂದಂತೆ ವಿವಿಧ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಭೂಮಿ ಪೂಜೆಯ ಬಳಿಕ ಸಭಾ ಕಾರ್ಯಕ್ರಮವು ಗೋಶಾಲೆಯ ಸಭಾಂಗಣದಲ್ಲಿ ನಡೆಯಿತು.
ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ತುಮಕೂರಿನ ಡಾ ಸಿದ್ಧಗಂಗಾ ಸ್ವಾಮೀಜಿಯವರ ಹೆಸರಲ್ಲಿ ಸ್ಮೃತಿ ವನ ನಿರ್ಮಾಣಕ್ಕಾಗಿ ತಲಾ ಎರಡು ಕೋಟಿ ರೂಗಳನ್ನು ಬಜೆಟ್ ನಲ್ಲಿ ಘೋಷಿಸಿದ್ದರು.
ನಂತರ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು, ಅರಣ್ಯ ಮಂತ್ರಿ ಉಮೇಶ ಕತ್ತಿಯವರು ಹಾಗೂ ಶಾಸಕ ರಘುಪತಿ ಭಟ್ಟರು ವಿಶೇಷ ಮುತುವರ್ಜಿ ವಹಿಸಿದ್ದರಿಂದ ಇದೀಗ ಅರಣ್ಯ ಇಲಾಖೆಯ ಮೂಲಕ ಇದರ ಅನುಷ್ಠಾನವಾಗುತ್ತಿದೆ.
ಗೋಶಾಲೆ ಸಮೀಪವೇ ಭೂಮಿ ಲಭಿಸಿತು: ಬಹಳ ಅಚ್ಚರಿಯ ಸಂಗತಿ ಎಂದರೆ ಇದಕ್ಕೆ ಅವಶ್ಯವಿದ್ದ ಭೂಮಿಗಾಗಿ ಅರಣ್ಯ ಇಲಾಖೆ ಜಿಲ್ಲೆಯ ಕೆಲವೆಡೆ ಸರ್ಕಾರಿ ಭೂಮಿ ಹುಡುಕಾಟದಲ್ಲಿತ್ತು. ಆದರೆ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಇದು ನೀಲಾವರ ಗೋಶಾಲೆಯ ಆಸುಪಾಸಿನಲ್ಲೇ ಆದರೆ ಗೋಶಾಲೆಯನ್ನು ನೋಡಲು ಬರುವವರಿಗೆ ಸ್ಮೃತಿ ವನವೂ ಪ್ರೇಕ್ಷಣೀಯ ಸ್ಥಳವಾಗ್ತದೆ. ಮತ್ತು ನಿರ್ವಹಣೆಯೂ ಸುಲಭವಾಗ್ತದೆ ಎಂಬ ಯೋಚನೆ ಇತ್ತು. ಅಚ್ಚರಿ ಎಂದರೆ ಗುರುಗಳ ಚಿಂತನೆಯಂತೆ ನೀಲಾವರ ಗೋಶಾಲೆಗೆ ತಾಗಿಕೊಂಡೇ ಇರುವ ಎರಡು ಎಕ್ರೆ ಸರ್ಕಾರಿ ಭೂಮಿಯೇ ಒದಗಿ ಬಂತು.
ಈ ಬಗ್ಗೆ ಸುಂದರವಾದ ನೀಲನಕಾಶೆ ಸಿದ್ಧವಾಗಿದ್ದು ಈ ಸ್ಮೃತಿ ವನಕ್ಕೆ ಸುಂದರ ಮುಖದ್ವಾರ ಮಧ್ಯಭಾಗದಲ್ಲಿ ಶ್ರೀ ವಿಶ್ವೇಶತೀರ್ಥರ ಕುಳಿತ ಭಂಗಿಯ ಹತ್ತು ಅಡಿ ಎತ್ತರದ ಕಂಚಿನ ಪ್ರತಿಮೆ, ಅದರ ಮುಂಭಾಗ ಪ್ರವಚನ ವಿಚಾರಗೋಷ್ಠಿ ಇತ್ಯಾದಿ ನಡೆಸಲು ಅನುಕೂಲವಾಗುವಂತೆ ಒಂದು ವೇದಿಕೆ, ಹಿಂಭಾಗದಲ್ಲಿ ಗ್ರೀನ್ ರೂಮ್, ಇದರ ಸುತ್ತಲೂ ಪ್ರೇಕ್ಷಕರು ಕುಳಿತು ಕೊಳ್ಳಲು ಸ್ಟೇಡಿಯಂ ರೀತಿ ಮೆಟ್ಟಿಲುಗಳು, ವಾಕಿಂಗ್ ಟ್ರ್ಯಾಕ್, ಗ್ಯಾಲರಿ ಮತ್ತು ಉಳಿದಂತೆ ಮಕ್ಕಳ ಆಟದ ವಿಭಾಗ, ನಾಲ್ಕು ಕಡೆಗಳಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ಕುಟೀರಗಳು ಮತ್ತು ಔಷಧೀಯ ಸಸ್ಯಗಳು ಹೂವಿನ ಹಾಗೂ ಹಣ್ಣಿನ ಮರಗಳುಳ್ಳ ವನ ನಿರ್ಮಾಣವಾಗಲಿದೆ. ಸ್ವಾಮೀಜಿಯವರ ಸೂಚನೆಯಂತೆ ಈಗ ಇರುವ ಮರಗಳು ಮತ್ತು ಪ್ರಾಕೃತಿಕ ಪರಿಸರವನ್ನು ಗರಿಷ್ಟ ಮಟ್ಡದಲ್ಲಿ ಉಳಿಸಿಕೊಂಡು ಅಕೇಶಿಯಾ ಮೊದಲಾದ ಅನವಶ್ಯಕ ಮರಗಳನ್ನು ತೆರವುಗೊಳಿಸಿ ಅಗತ್ಯ ಇರುವಷ್ಟು ಮಾತ್ರ ನಿರ್ಮಿತಿಗಳನ್ನು ಕರಾವಳಿಯ ಶೈಲಿಯಲ್ಲಿ ನಿರ್ಮಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಉಡುಪಿ ಜಿಲ್ಲೆಯಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಬ್ರಹ್ಮಾವರ ಭಾಗದಲ್ಲಿ ಈ ಸ್ಮೃತಿ ವನ ಒಂದು ಪ್ರೇಕ್ಷಣೀಯ ಸ್ಥಳವಾಗಿ ಮೂಡಿ ಬರಲಿದೆ. ಜಿಲ್ಲೆಯ ಪ್ರವಾಸೋದ್ಯಮದ ನೆಲೆಯಲ್ಲೂ ಸರ್ಕಾರದಿಂದ ಮಹತ್ವದ ಕೊಡುಗೆಯಾಗುತ್ತಿದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق