ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲು ಮುರಿದು ಕಳ್ಳರು ಮನೆಗೆ ನುಗ್ಗಿ ಮನೆಯಲ್ಲಿದ್ದ ಕಪಾಟು ಒಡೆದು ಚಿನ್ನಾಭರಣ ಸಹಿತ ನಗದು ಹಣ ಕಳ್ಳತನ ಮಾಡಿದ ಘಟನೆಯೊಂದು ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಕಕ್ಕಿಂಜೆ ಸಮೀಪದ ಕತ್ತರಿಗುಡ್ಡೆಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಇಕ್ಬಾಲ್ ಎಂಬವರಿಗೆ ಸೇರಿದ ಮನೆಯಲ್ಲಿ ಅವರ ತಂಗಿ ಝರಿನಾ ಮತ್ತು ಇಬ್ಬರು ಮಕ್ಕಳು ಮಾತ್ರ ವಾಸವಾಗಿದ್ದು, ಗಂಡ ಇಸ್ಮಾಯಿಲ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.
ಝರಿನಾ ಮತ್ತು ಮಕ್ಕಳು ಮೂರು ದಿನಗಳ ಹಿಂದೆ ತವರು ಮನೆ ಬದ್ಯಾರಿಗೆ ಹೋಗಿದ್ದಾಗ, ಭಾನುವಾರ ರಾತ್ರಿ ಹಿಂಬಾಗಿಲು ಮುರಿದು ಒಳನುಗ್ಗಿ ಕಪಾಟು ಒಡೆದು ಎರಡು ಪವನ್ ಚಿನ್ನ ಮತ್ತು ಸುಮಾರು 16,000 ರೂ. ಹಣ ಕಳ್ಳತನ ಮಾಡಲಾಗಿದೆ.
ಮನೆಯಲ್ಲಿದ್ದ ಬಟ್ಟೆ ಹಾಗೂ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಹುಡುಕಾಟ ನಡೆಸಿದ್ದಾರೆ. ಸೋಮವಾರ ಬೆಳಿಗ್ಗೆ ಇಕ್ಬಾಲ್ ಮನೆಗೆ ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.
ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.
إرسال تعليق