ಬಂಟ್ವಾಳ: ಮಹಿಳಾ ಪ್ರಾಧ್ಯಾಪಕಿ ಅವರ ಬಗ್ಗೆ ಅಶ್ಲೀಲ, ಮಾನಹಾನಿಕರ ಪತ್ರ ಬರೆದು ಮಾನಸಿಕ ಕಿರುಕುಳ ನೀಡಿ ಬಂಧನವಾಗಿರುವ ಖಾಸಗಿ ಕಾಲೇಜಿನ ಸಂಚಾಲಕ ಪ್ರಕಾಶ್ ಶೆಣೈ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರದೀಪ್ ಪೂಜಾರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ತಾರನಾಥ ಶೆಟ್ಟಿ ಅವರನ್ನು ಕೂಡಲೇ ಅವರ ಸ್ಥಾನದಿಂದ ವಜಾಗೊಳಿಸಿ ಕಾಲೇಜಿನಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ಬಂಟ್ವಾಳದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದ ಮಹಿಳೆಯೊಬ್ಬರ ವಿರುದ್ಧ ಕಾಲೇಜು ಸಂಚಾಲಕರು ಸೇರಿ ಶಿಕ್ಷಕರಿಂದ ಅಶ್ಲೀಲವಾಗಿ ಪತ್ರ ಬರೆದು ಮಹಿಳೆಯ ಫೋನ್ ನಂಬರ್ ಅನ್ನು ನಮೂದಿಸಿದ್ದು ಮಹಿಳೆಗೆ ನಡುರಾತ್ರಿ ಅನಾಮಧೇಯ ಕರೆ ಬರುತ್ತಿದ್ದು ಹಾಗೂ ಮಹಿಳೆಯ ಬಗ್ಗೆ ಅಸಭ್ಯವಾಗಿ ಬರೆದು ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗಿತ್ತು. ಈ ಘಟನೆಗಳಿಂದ ಅವರ ಕುಟುಂಬ ತತ್ತರಿಸಿ ಹೋಗಿದೆ.
ಮಹಿಳೆ ತಡವಾಗಿ ಮಂಗಳೂರು ಮಹಾನಗರ ಕಮಿಷನರ್ ಅವರಿಗೆ ನೇರವಾಗಿ ದೂರು ನೀಡಿದ್ದಾರೆ, ದೂರು ದಾಖಲಿಸಿ ಕೊಂಡು ತನಿಖೆ ನಡೆಸಿದಾಗ ಮಹಿಳೆ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಬಂಟ್ವಾಳದ ಕಾಲೇಜಿನ ಸಂಚಾಲಕ ಪ್ರಕಾಶ್ ಶೆಣೈ, ಅರ್ಥಶಾಸ್ತ್ರ ಪ್ರಾಧ್ಯಾಪಕರು ಪ್ರದೀಪ್ ಪೂಜಾರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ತಾರನಾಥ ಶೆಟ್ಟಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ ಹಾಗೂ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಹಲವಾರು ನಿಜಾಂಶಗಳು ಹೊರಬಂದಿವೆ. ಆರೋಪಿಗಳಿಂದ ಶಿಕ್ಷಕಿಗೆ ಮಾತ್ರವಲ್ಲದೆ ಕಾಲೇಜಿನ ವಿದ್ಯಾರ್ಥಿನಿಯರಿಗೂ ತೊಂದರೆ ಉಂಟಾಗಿದೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಈ ರೀತಿಯಾದ ಪ್ರಕರಣಗಳು ಕಾಲೇಜಿನಲ್ಲಿ ಈ ಹಿಂದೆಯೂ ಹಲವಾರು ಬಾರಿ ನಡೆದಿದೆ ಈ ವಿಚಾರವಾಗಿ ಕಾಲೇಜಿನ ಆಡಳಿತ ಸಮಿತಿ, ಉನ್ನತ ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಗಳ ಗಮನವನ್ನು ಸೆಳೆಯುವ ಪ್ರಯತ್ನವನ್ನು ಕಾಲೇಜಿನ ವಿದ್ಯಾರ್ಥಿಗಳು ಮಾಡಿದ್ದರು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ ಕಾಲೇಜಿನಲ್ಲಿ ಈ ರೀತಿಯ ಹಲವಾರು ಘಟನೆಗಳು ಕಾಲೇಜಿನಲ್ಲಿ ಆಗಿರುವುದರಿಂದ ಕಾಲೇಜಿನಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಇಲ್ಲ, ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅತ್ಯಂತ ನಿಷ್ಠೆಯಿಂದ ತನಿಖೆಯನ್ನು ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ.
ಕಾಲೇಜನ್ನು ವಿದ್ಯಾದೇಗುಲ ಎಂದು ಕರೆಯುತ್ತಾರೆ. ಇಂತಹ ಪವಿತ್ರ ಜಾಗದಲ್ಲಿ ಶಿಕ್ಷಕಿಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಈ ರೀತಿಯ ಸಮಸ್ಯೆ ಆಗುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಈ ಪ್ರಕರಣದ ಆರೋಪಿಗಳಾದ ಖಾಯಂ ನೌಕರಿಯನ್ನು ಪಡೆದಿರುವ ಕಾಲೇಜಿನ ಸಂಚಾಲಕ ಪ್ರಕಾಶ್ ಶೆಣೈ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರದೀಪ್ ಪೂಜಾರಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ತಾರನಾಥ ಶೆಟ್ಟಿ ಅವರನ್ನು ಕೂಡಲೇ ಅವರ ಸ್ಥಾನದಿಂದ ವಜಾಗೊಳಿಸಿ ಕಾಲೇಜಿನಲ್ಲಿ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕೆಂದು ಕಾಲೇಜಿನ ಆಡಳಿತ ಸಮಿತಿ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದು ಎಬಿವಿಪಿ ಬಂಟ್ವಾಳ ನಗರ ಪರಿಷತ್ ಅಧ್ಯಕ್ಷ ಪ್ರತೀಕ್ ಬಂಟ್ವಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق