ಬ್ರಹ್ಮಾವರ: ನಾಟಕಗಳು ಒಂದು ಘಟನೆಯನ್ನು ಆಧರಿಸಿ, ಅದರ ಪರಿಣಾಮಗಳನ್ನು ಪ್ರೇಕ್ಷಕರ ಮುಂದಿಡುತ್ತದೆ. ಬಡತನ ಅನುಭವ ಇಲ್ಲದವನಿಗೂ ಬಡತನದ ಕರಾಳತೆಯ ತೋರಿಸುವ ಸಾಮರ್ಥ್ಯ ಇರುವುದು ನಾಟಕಕ್ಕೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಜ್ಞಾನ ವಸಂತ ಶೆಟ್ಟಿ ಹೇಳಿದರು.
ಅವರು ಬ್ರಹ್ಮಾವರದ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಮಕ್ಕಳ ಮಂಟಪದಲ್ಲಿ ನಡೆದ ಬಣ್ಣ ಪಂಚದಿನ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ, ಸುಪ್ರಸಾದ್ ಶೆಟ್ಟಿ ಮಾತನಾಡಿ, ಫೋಕ್ಸೋ, ಸೈಬರ್ ಕ್ರೈಂ, ಮಾದಕದೃವ್ಯ ಈ ಎಲ್ಲಾ ಪ್ರಕರಣದಲ್ಲಿ ಉಡುಪಿ ಜಿಲ್ಲೆ ಮುಂದಿದೆ. ಜಿಲ್ಲೆಯಲ್ಲಿ ನಡೆದ ಹಲವಾರು ಘಟನೆಗಳು ಜಿಲ್ಲೆಗೆ ಅಪಕೀರ್ತಿ ತಂದಿದೆ. ಈ ಘಟನೆಗಳು ಜಿಲ್ಲೆ ನೈತಿಕವಾಗಿ, ಸಾಮಾಜಿಕವಾಗಿ ವಿಘಟನೆ ಹೊಂದಿದೆ ಎನ್ನುವುದನ್ನು ಹೇಳುತ್ತದೆ. ಈ ಎಲ್ಲಾ ಘಟನೆಗಳು ಮತ್ತು ಪ್ರಕರಣಗಳಿಗೆ ಮುಖ್ಯ ಕಾರಣ ಸೂಕ್ತ ಮಾರ್ಗದರ್ಶನದ ಕೊರತೆ. ಯುವಕರಿಗೆ ನಾಟಕಗಳು ಸೂಕ್ತ ಮಾರ್ಗದರ್ಶನ ನೀಡುತ್ತದೆ. ಭೂಮಿಕಾ ರಂಗ ತಂಡವೂ ಕೂಡ ಇದೆ ಉದ್ದೇಶವನ್ನು ಹೊಂದಿದೆ. ಎಲ್ಲೋ ಕಳೆದುಹೋಗುವ ಯುವಕರನ್ನು ಸಂಘಟಿಸಿ ನಾಟಕಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ ಎಂದರು.
ಎಸ್.ಎಂ.ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಐವನ್ ಸುವಾರಿಸ್, ರಾಯಲ್ ರೋಟರಿ ಬ್ರಹ್ಮಾವರ ಇದರ ಮಾಜಿ ಅಧ್ಯಕ್ಷ ಆರ್.ಎಂ ಸಾಮಗ, ಸಂಸ್ಥೆಯ ಅಧ್ಯಕ್ಷ ಹರೀಶ್ ಕಿರಣ್ ತುಂಗ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ಬಿ.ಎಸ್ ರಾಮ್ ಶೆಟ್ಟಿ ಅಗಲಿದ ಚೇತನ ಪುನೀತ್ ರಾಜ್ ಕುಮಾರ್ ಮತ್ತು ಸಂಸ್ಥೆಯ ಪೋಷಕರಾದ ಸಾಲ್ವಾದರ್ ನರೋಹ್ನಾ ಅವರಿಗೆ ನುಡಿನಮನ ಸಲ್ಲಿಸಿದರು. ಕಾರ್ಯದರ್ಶಿ ಸುನೀಲ್ ಪಾಂಡೇಶ್ವರ್ ಸ್ವಾಗತಿಸಿದರು, ಅಲ್ತಾರು ನಾಗರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق