ಬಾಂಧವ್ಯಗಳು ಸಂಸ್ಥೆಯನ್ನು ಬೆಳೆಸುತ್ತವೆ: ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ. ಖಂಡಿಗೆ
ಬದಿಯಡ್ಕ: ದುಡಿಯುವ ಅಧಿಕಾರಿಗಳು, ಕಾರ್ಮಿಕರು ಒಗ್ಗಟ್ಟಿನಿಂದ ಸೇರಿಕೊಂಡಾಗ ಸಂಸ್ಥೆಯು ಮಹೋನ್ನತ ಸ್ಥಾನದತ್ತ ತಲುಪುತ್ತದೆ. ಬಾಂಧವ್ಯಗಳು ಸಂಸ್ಥೆಯನ್ನು ಬೆಳೆಸುತ್ತದೆ ಎಂದು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಹೇಳಿದರು.
ಕ್ಯಾಂಪ್ಕೋ ಬದಿಯಡ್ಕ ಶಾಖೆಯಿಂದ ಮಾರ್ಚ್ 31ರಂದು ನಿವೃತ್ತರಾಗಲಿರುವ ಕಾರ್ಮಿಕ ಈಶ್ವರ ಬಿ. ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. 33 ವರ್ಷಗಳ ಕಾಲ ಸಂಸ್ಥೆಯೊಂದಿಗೆ ಬೆವರು ಸುರಿಸಿ ದುಡಿದ ಈಶ್ವರ ಅವರ ಸೇವೆ ಸದಾ ಶ್ಲಾಘನೀಯ. ಗ್ರಾಹಕರು ಹಾಗೂ ಸಂಸ್ಥೆಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸುವಲ್ಲಿ ಅವರು ದುಡಿದಿದ್ದಾರೆ ಎಂದರು.
ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ ಮಾತನಾಡಿ, ಗ್ರಾಹಕರೊಂದಿಗೆ ಯಾವ ರೀತಿಯಲ್ಲಿ ವ್ಯವಹರಿಸಬೇಕೆಂಬುದನ್ನು ತೋರಿಸಿಕೊಟ್ಟ ಈಶ್ವರ ಅವರ ಆತ್ಮೀಯತೆಯ ಸೇವೆಯು ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲವೆಂದರು.
ಪ್ರಾಂತೀಯ ಪ್ರಬಂಧಕ ಗಿರೀಶ್ ಇ., ರಾಘವೇಂದ್ರ ಬದಿಯಡ್ಕ, ಕಾರ್ಮಿಕ ಸುರೇಶ್ ಮಾತನಾಡಿದರು. ಕ್ಯಾಂಪ್ಕೋ ಸಂಸ್ಥೆಯ ನಿವೃತ್ತ ಅಧಿಕಾರಿಗಳಾದ ಬಾಬು, ಶ್ಯಾಮ ಭಟ್ ಉಪಸ್ಥಿತರಿದ್ದರು. ಸನ್ಮಾನವನ್ನು ಸ್ವೀಕರಿಸಿ ಈಶ್ವರ ಬಿ. ಅವರು ಮಾತನಾಡಿದರು. ಬದಿಯಡ್ಕ ಶಾಖಾ ಪ್ರಬಂಧಕ ದಿನೇಶ್ ಕುಮಾರ್ ಸ್ವಾಗತಿಸಿ, ಮನೋಜ್ ವಂದಿಸಿದರು. ಪ್ರಸಾದ್ ಕೆ.ಎಸ್. ನಿರೂಪಿಸಿದರು. ಮಧುರಾ ವೈ ಪ್ರಾರ್ಥನೆ ಹಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق