ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ದೇಶ ಮತ್ತು ರಾಜ್ಯದಾದ್ಯಂತ ಸರಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಬರುತ್ತಿರುವ ವಿದ್ಯಾರ್ಥಿಗಳೆಲ್ಲರೂ ಆಯಾ ಶಿಕ್ಷಣ ಸಂಸ್ಥೆಗಳು ನಿಗದಿ ಪಡಿಸಿದ ಸಮವಸ್ತ್ರ ಧರಿಸಿಕೊಂಡು ಬರುತ್ತಿರುವುದು ಹಿಂದಿನಿಂದ ಬಂದ ರೂಢಿಯಾಗಿದ್ದು, ಈ ಸಂಬಂಧವಾಗಿ ವಿನಾ: ಕಾರಣ ಮತಭೇದವನ್ನು ಮೈಮೇಲೆ ಎಳೆದುಕೊಂಡು ಸಮವಸ್ತ್ರ ಧರಿಸದೆ ವಿಭಿನ್ನವಾಗಿ ವರ್ತಿಸಿ ನಿಯಮ ಮೀರಿ ಧರ್ಮಕ್ಕೆ ಸಂಬಂಧಿತ ವಸ್ತ್ರ ಹಾಕಿಕೊಂಡು ವಿದ್ಯಾ ಸಂಸ್ಥೆಯೊಳಗೆ ಬರುವುದು ಸರಿಯಾದ ಕ್ರಮವಲ್ಲ. ಇಂತಹ ಕ್ಷುಲ್ಲಕ ಪ್ರಕ್ರಿಯೆಯಿಂದಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದ್ವೇಷದ ಬೀಜ ಬಿತ್ತಿದಂತಾಗುತ್ತದೆ.
ವಿದ್ಯಾ ಕ್ಷೇತ್ರದಲ್ಲಿ ಧರ್ಮ ರಾಜಕೀಯ ಸಲ್ಲದು. ಇದರಿಂದ ರಾಷ್ಟ್ರಪ್ರೇಮ ಕಡಿಮೆಯಾಗಿ, ವಿದ್ಯಾರ್ಥಿಗಳಲ್ಲಿ ಧರ್ಮದ ವ್ಯಾಮೋಹ ಪ್ರಾರಂಭಗೊಂಡು ಮುಂದೆ ಇಂತಹ ವಿದ್ಯಾರ್ಥಿಗಳೆಲ್ಲರೂ ಭಯೋತ್ಪಾದಕರಾಗುವ ಸಾಧ್ಯತೆವಿರುತ್ತದೆ. ಶಿಕ್ಷಣ ಸಂಸ್ಥೆಗಳು ಎಲ್ಲಾ ಧರ್ಮದವರಿಗೂ ಸಮಾನವಾಗಿರಬೇಕು. ವಿದ್ಯಾರ್ಥಿಗಳಿಗೆ ಧಾರ್ಮಿಕ ಸಂಬಂಧ ಚಟುವಟಿಕೆಗಳನ್ನು ಶಾಲಾ ಆವರಣ ಹೊರಗಡೆ ಮಾಡಲು ಮುಕ್ತ ಅವಕಾಶವನ್ನು ಈಗಾಗಲೇ ಭಾರತೀಯ ಸಂವಿಧಾನದಲ್ಲಿ ಉಲ್ಲೇಖಸಲಾಗಿದೆ. ವಿದ್ಯಾ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳ ಸಮವಸ್ತ್ರಗಳು ಧರ್ಮ ಮತ್ತು ಜಾತಿಯನ್ನು ಬಿಂಬಿಸದೇ ಸರಿ ಸಮಾನವಾಗಿರಬೇಕು.
ಕೆಲವೇ ಕೆಲವು ವ್ಯಕ್ತಿಗಳಿಂದ ಪ್ರೇರೇಪಿತರಾಗಿಕೊಂಡು ವಿದ್ಯಾರ್ಥಿಗಳಲ್ಲಿ ಹುಟ್ಟಿರುವ ಈ ವಿಷ ಬೀಜವನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವುದರೊಂದಿಗೆ ನಾಡಿನ ಎಲ್ಲೆಡೆ ಪಸರುವುದನ್ನು ತಡೆಯಬೇಕು.
ಈ ವಿಷಯಕ್ಕೆ ಸಂಬಂಧಿಸಿದಂತೆ ಪದೇ ಪದೇ ವಿದ್ಯಾರ್ಥಿಗಳ ಪೋಷಕರೊಂದಿಗೆ ರಾಜಿ ಸಂಧಾನಗಳನ್ನು ಏರ್ಪಡಿಸದೆ ಪರಿಸ್ಥಿತಿ ಬಿಗಡಾಯಿಸುವ ಮುನ್ನ ಸರಕಾರದ ವತಿಯಿಂದ ಕಟ್ಟು- ನಿಟ್ಟಿನ ಆದೇಶ ಹೊರಡಿಸುವ ಮೂಲಕ ಶಾಲಾ -ಕಾಲೇಜುಗಳ ನಿಯಮ ಮೀರಿ ಅಶಿಸ್ತು ತೋರ್ಪಡಿಸುವ ಯಾವುದೇ ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ತಕ್ಷಣವೇ ಡಿಬಾರ್ ಮಾಡಿಸಿ ಮುಂದೆ ಸರಕಾರಿ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕೆ ಅನರ್ಹರು ಎಂದು ಶಾಲಾ ವರ್ಗಾವಣೆ ಪತ್ರದಲ್ಲಿ ನಮೂದಿಸಬೇಕು.
ಈ ಸಂಬಂಧ ಅತೀ ಶೀಘ್ರವಾಗಿ ಕಾರ್ಯ ಪ್ರವೃತ್ತರಾಗಿ ಸಡಿಲಿಕೆ ಮನೋಭಾವನೆ ಬಿಟ್ಟು ಅಶಿಸ್ತು ಗೈಯುವ ವಿದ್ಯಾರ್ಥಿಗಳ ಬಗ್ಗೆ ಕಾನೂನು ಕ್ರಮಕ್ಕೆ ಆಯಾ ಜಿಲ್ಲಾಧಿಕಾರಿಗಳನ್ನು ಮುಖ್ಯ ಹೊಣೆಗಾರನ್ನಾಗಿ ನೇಮಿಸಿ ಸೂಕ್ತ ಆದೇಶ ಹೊರಡಿಸುವಂತೆ ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಮೂಲಕ ವಿನಂತಿ.
-ಪ್ರಭಾಕರ ಪ್ರಭು, ಮಾಜಿ ಸದಸ್ಯರು
ಬಂಟ್ವಾಳ ತಾಲೂಕು ಪಂಚಾಯತ್
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment