ಮೂಡುಬಿದಿರೆ: ಯಕ್ಷಗಾನ ಕಲಾವಿದ ಪ್ರದರ್ಶನವನ್ನು ಮುಗಿಸಿ ಮನೆ ಕಡೆಗೆ ಹಿಂತಿರುಗುವ ವೇಳೆ ಅಪಘಾತ ಸಂಭವಿಸಿ ಕಲಾವಿದ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ವೇಣೂರು ವಾಮನಕುಮಾರ್ (46) ಮೃತ ಯಕ್ಷಗಾನ ಕಲಾವಿದ.
ಇವರು ಹಿರಿಯಡ್ಕ ಮೇಳ ಕಲಾವಿದರಾಗಿದ್ದು, ಸ್ತ್ರೀವೇಷ, ಕಥಾ ನಾಯಕನ ಪಾತ್ರ ಮಾಡುತ್ತಿದ್ದರು. ಹಿರಿಯ ಕಲಾವಿದರಾಗಿರುವ ಇವರು, ನಿನ್ನೆ ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನ ಪ್ರದರ್ಶನ ನಡೆಸಿದ್ದರು. ಯಕ್ಷಗಾನ ಪ್ರದರ್ಶನ ಮುಗಿಸಿ ಮನೆಗೆ ಬೈಕ್ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿದೆ.
ಬೆಳಗ್ಗೆ 6.30 ಸಂದರ್ಭದಲ್ಲಿ ಮೂಡಬಿದಿರೆಯ ಗಂಟಾಲ್ ಕಟ್ಟೆ ಎಂಬಲ್ಲಿ ಇವರ ಬೈಕ್ಗೆ ಓಮ್ನಿ ಕಾರು ಡಿಕ್ಕಿ ಹೊಡೆದಿದ್ದು, ವಾಮನಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಮನ ಕುಮಾರರು ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಗೋಳಿತ್ಯಾರು ಎಂಬಲ್ಲಿ ಶ್ರೀ ಅಣ್ಣು ದೇವಾಡಿಗ ಮತ್ತು ಶ್ರೀಮತಿ ಮೋನಮ್ಮ ದಂಪತಿಗಳ ಪುತ್ರನಾಗಿ 1974 ಎಪ್ರಿಲ್ 18ರಂದು ಜನಿಸಿದರು. ಅವರ ಮನೆಯವರು (ಹಿರಿಯರಿಂದಲೂ) ವೇಣೂರು ಅಜಿಲ ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪದಾರ್ಥಿಗಳಾಗಿ ಸೇವೆ ಸಲ್ಲಿಸುತ್ತಾ ಬಂದವರು.
ವಾಮನಕುಮಾರರು ಓದಿದ್ದು ವೇಣೂರು ವಿದ್ಯೋದಯ ಶಾಲೆಯಲ್ಲಿ. ಎಂಟನೇ ತರಗತಿ ವರೆಗೆ. ಇವರೂ ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರೂ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು.
1989ರಲ್ಲಿ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು.ಕಲಿಕಾ ಕೇಂದ್ರದಲ್ಲಿ ಶಂಭಯ್ಯ ಭಟ್, ಮಹೇಶ ಮಣಿಯಾಣಿ. ಪಂಜ ಕಿರಣ್ ಕುಮಾರ್, ಸುಜಯ ಹೆಗ್ಡೆ ಕುತ್ಲೂರು ಇವರ ಸಹಪಾಠಿಗಳಾಗಿದ್ದರು. ಕಲಿಕಾ ಕೇಂದ್ರದ ಮೊದಲ ಪ್ರದರ್ಶನ ಪಂಚವಟಿ ಪ್ರಸಂಗದಲ್ಲಿ ಸೀತೆಯಾಗಿ ರಂಗಪ್ರವೇಶ. ಬಳಿಕ ರತಿಕಲ್ಯಾಣ ಪ್ರಸಂಗದ ಮನ್ಮಥ. ಬಾಲಲೀಲೆ ಪ್ರಸಂಗದ ಶ್ರೀಕೃಷ್ಣನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು.
ಶ್ರೀ ವಾಮನ ಕುಮಾರರ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ. ಕಲಿಕಾ ಕೇಂದ್ರದ ಸಹಪಾಠಿ ಪಂಜ ಕಿರಣ್ ಕುಮಾರರ ಜತೆ ಬಾಲಗೋಪಾಲರಾಗಿ ವ್ಯವಸಾಯ ಆರಂಭ. ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ. ಹಿರಿಯ ಹೆಸರಾಂತ ಕಲಾವಿದರ ಒಡನಾಟ ಕಲಿಕೆಗೆ ಅವಕಾಶವಾಗಿತ್ತು.
ಹಿರಿಯ ಕಲಾವಿದ ಡಿ. ಮನೋಹರ ಕುಮಾರರ ಸಂಚಾಲಕತ್ವದ ಕದ್ರಿ ಮೇಳದಲ್ಲಿ 4 ವರ್ಷಗಳ ವ್ಯವಸಾಯ ಮಾಡಿದ್ದರು. ಪುರಾಣ ಪ್ರಸಂಗಗಳಲ್ಲಿ ಸಿದ್ದಕಟ್ಟೆ ಶ್ರೀ ವಿಶ್ವನಾಥ ಶೆಟ್ಟರ ನಿರ್ದೇಶನ, ಸಹಕಾರಗಳು ವಾಮನ ಕುಮಾರರಿಗೆ ದೊರಕಿತ್ತು. ಅವರ ಜತೆ, ಜತೆಪಾತ್ರಗಳಲ್ಲಿ ರಂಜಿಸಿದರು. (ವಿಷ್ಣು-ಸುದರ್ಶನ, ಶ್ರೀರಾಮ-ತರಣಿಸೇನ ಮೊದಲಾದವುಗಳು). ಕದ್ರಿ ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ. ಬಳಿಕ ಶ್ರೀ ಕಿಶನ್ ಹೆಗ್ಡೆ ಅವರ ಸಂಚಾಲಕತ್ವದ ಮಂಗಳಾದೇವಿ ಮೇಳದಲ್ಲಿ. ಆರಂಭದಿಂದ ಕೊನೆ ತನಕ ಹದಿನೈದು ವರ್ಷ ಸದ್ರಿ ಮೇಳದಲ್ಲಿ ವ್ಯವಸಾಯ. ಖ್ಯಾತ ಕಲಾವಿದರ ಒಡನಾಟ ದೊರಕಿತ್ತು. ಖ್ಯಾತ ಪುಂಡುವೇಷಧಾರಿಯಾಗಿದ್ದ ಶ್ರೀ ಉದಯ ನಾವಡರೊಂದಿಗೆ ಜತೆ ವೇಷಗಳಲ್ಲಿ ರಂಜಿಸಿದ್ದರು.
ಪುರಾಣ ಪ್ರಸಂಗದ ಹೆಚ್ಚಿನ ಎಲ್ಲಾ ಪುಂಡುವೇಷ ಮತ್ತು ಸ್ತ್ರೀ ಪಾತ್ರಗಳಲ್ಲಿ ವಾಮನ ಕುಮಾರರು ಅಭಿನಯಿಸಿದ್ದಾರೆ. ಚಂಡಮುಂಡರು, ಬಬ್ರುವಾಹನ, ವಿಷ್ಣು, ಶ್ರೀಕೃಷ್ಣ, ಭಾರ್ಗವ, ಶ್ರೀರಾಮ, ಲಕ್ಷ್ಮಣ, ಶ್ವೇತಕುಮಾರ, ತ್ರಿಲೋಕಸುಂದರಿ, ಪದ್ಮಾವತಿ, ಲಕ್ಷ್ಮಿ ಅಲ್ಲದೆ ಅನೇಕ ಶೃಂಗಾರಕ್ಕೆ ಸಂಬಂಧಿಸಿದ ಸ್ತ್ರೀ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಶ್ವೇತಕುಮಾರ, ತ್ರಿಲೋಕಸುಂದರಿ, ಸಿತಕೇತ, ರಂಭೆ ಈ ನಾಲ್ಕೂ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ ಕಲ್ಯಾಣ ಪ್ರಸಂಗದಲ್ಲಿ ಕಿರಾತನ ಪಾತ್ರವನ್ನೂ, ಪದ್ಮಾವತಿಯ ಪಾತ್ರವನ್ನೂ ಮಾಡಿದ್ದಾರೆ.
ಕಸೆ ಸ್ತ್ರೀ ವೇಷಗಳಲ್ಲೂ ವಾಮನ ಕುಮಾರರು ಕಾಣಿಸಿಕೊಂಡರು. ಮೀನಾಕ್ಷಿ, ಶಶಿಪ್ರಭೆ, ಭ್ರಮರಕುಂತಳೆ, ಪ್ರಮೀಳೆ, ಸ್ವಯಂಪ್ರಭೆ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದರು. ಶ್ರೀ ವಾಮನ ಕುಮಾರರು ಕಳೆದ ಎಂಟು ವರ್ಷಗಳಿಂದ ಹಿರಿಯಡಕ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು. ಈಗ ಸದ್ರಿ ಮೇಳದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق