ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ: ಜ್ಯೋತಿಷಿ ರಾಜಗೋಪಾಲ ಭಟ್ ನಿಧನ

ಉಡುಪಿ: ಜ್ಯೋತಿಷಿ ರಾಜಗೋಪಾಲ ಭಟ್ ನಿಧನ

ಬಜಗೋಳಿಯನ್ನು ಯಾಗಭೂಮಿಯನ್ನಾಗಿಸಿದ ಧೀಮಂತ ಅಸ್ತಂಗತ


ಉಡುಪಿ: ಕಾರ್ಕಳದ ಪುಟ್ಟಗ್ರಾಮ ಬಜಗೋಳಿಯಲ್ಲಿ ಯಾರೊಬ್ಬರಿಂದಲೂ ದೇಣಿಗೆ ಪಡೆಯದೇ ಸ್ವಯಂ ತನ್ನ ತಪಸ್ಸು ಮತ್ತು ಮುತುವರ್ಜಿಯಿಂದಲೇ ಚಂಡೀಹವನ, ದಶ- ಶತ- ಸಹಸ್ರ- ಅಯುತ ಚಂಡಿಕಾಯಾಗ, ಮಹಾಮೃತ್ಯುಂಜಯ ಯಾಗವೇ ಮೊದಲಾಗಿ ಬೃಹತ್ ಯಾಗಗಳನ್ನು ಲೋಕದೊಳಿತಿಗಾಗಿ ಸಂಕಲ್ಪಿಸಿ ಯಶಸ್ವೊಯಾಗಿ ಸಾಕಾರಗೊಳಿಸಿ ನಿಜಾರ್ಥದಲ್ಲಿ ಪುರದ ಹಿತ ಬಯಸಿದ (ಪುರೋಹಿತ) ಈ ಗ್ರಾಮವನ್ನು ಯಾಗಭೂಮಿಯಾಗಿಸಿದ್ದ ಹಿರಿಯ ಜ್ಯೋತಿಷಿ ರಾಜಗೋಪಾಲ ಭಟ್ಟರು ಅಲ್ಪಕಾಲದ ಅಸ್ವಾಸ್ಥ್ಯದ ಬಳಿಕ ಉಡುಪಿ ಕೊಳಂಬೆಯ ಸ್ವಗೃಹದಲ್ಲಿ ಇಂದು ಸೋಮವಾರ ಮುಂಜಾನೆ ಹೃದಯಾಘಾತದಿಂದ ತೀರಿಕೊಂಡರು.  


ಕಲಿಯುಗದಲ್ಲಿ ಬೃಹತ್ ಯಜ್ಞ ಯಾಗಾದಿಗಳನ್ನು ಸಂಕಲ್ಪಿಸುವುದು ಅಸಾಧ್ಯವಾದೀತು ಎಂಬ ಮಾತನ್ನು ಸುಳ್ಳಾಗಿಸಿದವರು ಶ್ರೀಯುತ ಭಟ್ಟರು. ನಿಸ್ಪೃಹ ದೇವೀ ಆರಾಧಕರಾಗಿದ್ದ ಭಟ್ಟರು ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದರು  ಅನ್ನೋದಕ್ಕೆ ಅವರು ನಡೆಸಿದ ಯಜ್ಞ ಯಾಗಾದಿಗಳೇ ಸಾಕ್ಷಿ.


ಉತ್ತಮ‌ ಜ್ಯೋತಿಷಿಯೂ ಆಗಿದ್ದ ಅವರು ಯಾವುದೇ ಡಿಮ್ಯಾಂಡ್ ಇಲ್ಲದೇ ಕೇವಲ ಶ್ರದ್ಧೆಯಿಂದ ಜಿಜ್ಞಾಸುಗಳು ನೀಡುತ್ತಿದ್ದ ಸಂಭಾವನೆ ಸ್ವೀಕರಿಸಿ ಜ್ಯೋತಿಷ್ಯದ ಮೂಲಕ ಸಮಾಧಾನ ಸಾಂತ್ವನ ಹೇಳಿ ಅಸಂಖ್ಯ ಬಡ ಬಗ್ಗರ ಅಭಿಮಾನ ಭಕ್ತಿ ಪ್ರೀತಿಗೆ ಪಾತ್ರರಾದವರು.


ಗುಣಕ್ಕೆ ಮಣೆ: ಭಟ್ಟರ ಇನ್ನೊಂದು ವಿಶೇಷವೆಂದರೆ ಯಾರೇ ಅಧಿಕಾರಸ್ಥರು, ಶ್ರೀಮಂತರು ಮಂತ್ರಿ ಮಹನೀಯರಿಗೆ ತಮ್ಮಲ್ಲಿ ಪ್ರತ್ಯೇಕ ವಿಶೇಷಾದರ ಮಾಡಿದವರೇ ಅಲ್ಲ ಬಡವ ಶ್ರೀಮಂತ ಎಲ್ಲರಿಗೂ ಸಮಾನ ಗೌರವ ಸಮಾನ ಸತ್ಕಾರ ನೀಡಿದವರು. ಗುಣವಂತರನ್ನು ಆದರಿಸಿದರು. ಆದ್ದರಿಂದಲೇ ಅವರಲ್ಲಿ ನಡೆದ ಯಾವ ಕಾರ್ಯಕ್ರಮಗಳಿಗೂ ಸಭಾ ಕಾರ್ಯಕ್ರಮವಾಗಲೀ ಸಾಂಸ್ಕೃತಿಕ ಕಾರ್ಯಕ್ರಮಗಳಾಗಲೀ ಇರಲೇ ಇಲ್ಲ. ಕೇವಲ ಹೋಮ ಹವನ ಯಾಗ ಯಜ್ಞಾದಿಗಳು ಮತ್ತು ಸಹಸ್ರಾರು ಜನರಿಗೆ ಸುಗ್ರಾಸ ಅನ್ನಾರಾಧನೆಗಷ್ಟೇ ಒತ್ತು ನೀಡಿ ಆಯೋಜಿಸುತ್ತಿದ್ದುದು ಇವತ್ತಿನ ಕಾಲಕ್ಕೆ ಅತೀ ವಿಶೇಷ ಹಾಗೂ ಸೋಜಿಗ ಎನಿಸಿದರೂ ಸತ್ಯ.

-ಪೆರಂಪಳ್ಳಿ ವಾಸುದೇವ ಭಟ್


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم