ಭುವನೇಶ್ವರ್ (ಒಡಿಶಾ): ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಶತಾಯುಷಿ ನಂದ ಪ್ರಸ್ತಿ (ನಂದ ಸರ್ ಎಂದೇ ಜನಪ್ರಿಯರು) ಇಂದು ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 104 ವರ್ಷ ವಯಸ್ಸಾಗಿತ್ತು.
ಇಂದು ಮಧ್ಯಾಹ್ನ 1.28ರ ವೇಳೆಗೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸುಕಿಂಡಾ ಬ್ಲಾಕ್‌ನ ಕಂತಿರಾ ಗ್ರಾಮದ ನಿವಾಸಿಯಾಗಿದ್ದ ನಂದ ಪ್ರಸ್ತಿ ಅವರು, ನವೆಂಬರ್ 30ರಂದು ತೀವ್ರ ಸುಸ್ತು, ಅಸ್ವಸ್ಥತೆಗೆ ಒಳಗಾದ ಬಳಿಕ ಕಳಿಂಗ ನಗರದ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯ ಬಳಿಕ ಅವರಿಗೆ ಕೋವಿಡ್ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಅನಂತರ ಕುಟುಂಬದವರು ಅವರನ್ನು ಜಜ್‌ಪುರ್ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಹಾಗೂ ಟಾಟಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ಅವರ ಆರೋಗ್ಯ ಸ್ಥಿತಿ ಇನ್ನೂ ಹದಗೆಟ್ಟಾಗ ಭುವನೇಶ್ವರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದರು.
ಪ್ರಸ್ತಿ ಅವರಿಗೆ ಕಳೆದ ತಿಂಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಶಿಕ್ಷಣ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರದಲ್ಲಿ ಅವರ ಏಳು ದಶಕಗಳ ಕೊಡುಗೆಗಳನ್ನು ಪರಿಗಣಿಸಿ ಪದ್ಮಶ್ರೀ ಪ್ರದಾನ ಮಾಡಲಾಗಿತ್ತು.
ಬಡತನದಿಂದಾಗಿ ಅವರು ಸ್ವತಃ 7ನೇ ತರಗತಿ ವರೆಗೆ ಮಾತ್ರ ಓದಿದ್ದರು. ತಮ್ಮ ಊರಿನ ಉಚಿತ ಶಿಕ್ಷಣ ಸಂಸ್ಥೆ 'ಚಾತಶಾಲಿ'ಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪಡೆದಿದ್ದರು.
ಆಸ್ಪತ್ರೆಗೆ ದಾಖಲಾಗುವ ಎರಡು ದಿನಗಳ ಮೊದಲು, ಭೂ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮದೇ ಊರಿನ ಗ್ರಾಮಸ್ಥರು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ನಂದ ಸರ್ ಹೇಳಿಕೊಂಡಿದ್ದರು. ಅವರ ಪುತ್ರನ ಮೇಲೆ ಕೆಲವರು ಹಲ್ಲೆಯನ್ನೂ ಮಾಡಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment