'ಹಾಜಬ್ಬರ ಸರಳತೆ ಸಮಾಜಕ್ಕೆ ಮಾದರಿ': ಎ.ಕೆ. ಜಯರಾಮ ಶೇಖ
ಬಂಟ್ವಾಳ: ಫರಂಗಿಪೇಟೆ ಅರ್ಕುಳ ಶ್ರೀರಾಮ ವಿದ್ಯಾಸಂಸ್ಥೆ ಹಾಗೂ ಫರಂಗಿಪೇಟೆ ರೋಟರಿ ಕ್ಲಬ್ ಸಹಯೋಗದೊಂದಿಗೆ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಶಾಲೆಯ ಜಯಪದ್ಮಾ ಸಭಾಂಗಣದಲ್ಲಿ ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿದ ಹರೇಕಳ ಹಾಜಬ್ಬ ಅವರು ಎಲ್ಲರಿಗೂ ಕೃತಜ್ಞತೆ ಅರ್ಪಿಸಿ 'ತನ್ನಂತ ಸಾಮಾನ್ಯ ವ್ಯಕ್ತಿಗೂ ದೇಶದ ಉನ್ನತ ಗೌರವ ಪ್ರದ್ಮಶ್ರೀ ಲಭಿಸಿರುವುದಕ್ಕೆ ನಿಮ್ಮಂತವರು ತೋರಿದ ಪ್ರೀತಿ ವಿಶ್ವಾಸವೇ ಕಾರಣ. ಮಾಧ್ಯಮಗಳು ತನ್ನನ್ನು ಗುರುತಿಸಿ ಗೌರವ ಸಿಗುವಂತೆ ಮಾಡಿದೆ' ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಹಾಗೂ ಸಾರಿಗೆ ಉದ್ಯಮಿ ಎ.ಕೆ. ಜಯರಾಮ ಶೇಖ ಅವರು ಮಾತನಾಡಿ 'ಕಳೆದ 30 ವರ್ಷಗಳಿಂದ ತಾನು ಹಾಜಬ್ಬ ಅವರನ್ನು ಬಹಳ ಹತ್ತಿರದಿಂದ ಕಂಡಿದ್ದು, ಅವರ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅವರು ಕಿತ್ತಳೆ ಮಾರುವ ಸಂದರ್ಭದಲ್ಲಿ ಕಿತ್ತಳೆಯನ್ನು ಖರೀಸಿದ ನೆನಪು ಅವರಿಗೂ ಇದೆ, ನನಗೂ ಇದೆ. ಅದೇ ಸರಳ ಹಾಜಬ್ಬರನ್ನು ಈಗಲೂ ಕಾಣುತ್ತಿರುವುದೇ ಹೆಮ್ಮೆ. ಅವರ ಸರಳತೆ ಸಮಾಜಕ್ಕೆ ಮಾದರಿ' ಎಂದರು.
ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ. ಬಾಳೆಪುಣಿ ಅವರು ಹಾಜಬ್ಬರ ಸಾಧನೆಯನ್ನು ವಿವರಿಸಿದರು. ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ರಮೇಶ್ ತುಂಬೆ ಮತ್ತು ಸಂಸ್ಕಾರ ಭಾರತಿಯ ಅಡ್ಯಾರ್ ಪುರುಷೋತ್ತಮ ಭಂಡಾರಿ ಹಾಜಬ್ಬ ಅವರ ಅಭಿನಂದನಾ ಭಾಷಣ ಮಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಸುರೇಂದ್ರ ಕಂಬಳಿ, ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಜಿ.ಪಂ. ಮಾಜಿ ಸದಸ್ಯ ರವೀಂದ್ರ ಕಂಬಳಿ, ಸಂಚಾಲಕ ಗೋವಿಂದ ಶೆಣೈ, ಕರ್ನಾಟಕ ಯಕ್ಷಗಾನ ಮತ್ತು ತುಳು ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ಸತ್ತಾರ್ ಅತಿಥಿಗಳಾಗಿದ್ದರು. ಪ್ರಮುಖರಾದ ಯೂಸುಫ್ ಆಲಂಕಾರ್, ನಾರಾಯಣ ಹೆಗ್ಡೆ, ದಾಮೋದರ್ ಶೆಣೈ, ಸುಂದರ ಶೆಟ್ಟಿ, ರಮೇಶ್ ಶೆಟ್ಟಿ, ಝಫ್ರುಲ್ ಒಡೆಯರ್, ಮಾಧವ ನಾಯ್ಕ ಅಡ್ಯಾರ್, ನೋರ್ಬಟ್ ಡಿಸೋಜಾ, ರೋಟರಿ ಕ್ಲಬ್ ಫರಂಗಿಪೇಟೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಕಾರ ಭಾರತಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ತಾರಾನಾಥ ಕೊಟ್ಟಾರಿ ಅವರು ಸಮ್ಮಾನ ಪತ್ರ ವಾಚಿಸಿದರು. ನಿವೃತ್ತ ಮುಖ್ಯಶಿಕ್ಷಕ ದೇವದಾಸ್ ಕೆ.ಆರ್.ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸುಮಲತಾ ಸುರೇಂದ್ರ ಕಂಬಳಿ ವಂದಿಸಿದರು.
******
ಸಂತ - ಮಹಾತ್ಮ
ಅಕ್ಷರ ಲೋಕದ ಹಸಿವಿನ ಕಣ್ಣು
ಮೋಡಿಯ ಮಾಡಿತು ಕಿತ್ತಳೆ ಹಣ್ಣು|
ಸಂತನ ಜೋಳಿಗೆ ಬರಿದಾದರೇನು
ಹಾಜಬ್ಬರ ಬೆವರಲಿ ಹೊಳೆಯಿತು ಹೊನ್ನು||
ಅಕ್ಷರ ಸಂತನ ಮಕ್ಕಳ ದೇಗುಲ
ಶಿಕ್ಷಣ ರಂಗದಿ ವಿಸ್ಮಯದಂಗಳ |
ನಾಡಿನ ಬಡವನ ಮುಡಿಯಲಿ ಪದ್ಮ
ನೋಡಿರಿ ಬೆರಗಲಿ ಈತ ಮಹಾತ್ಮ||
-ಭಾಸ್ಕರ ರೈ ಕುಕ್ಕುವಳ್ಳಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق