ಇದೇನಪ್ಪ ಶೀರ್ಷಿಕೆ ವಿಚಿತ್ರವಾಗಿದೆ ಎನಿಸಬಹುದು. ಓದುತ್ತಾ ಹೋಗಿ ತಿಳಿಯುತ್ತದೆ. ಭಾವನೆ ಯಾರಿಗಿರಲ್ಲ ಹೇಳಿ. ಕೆಲವರು ತೋರಿಸಿಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮೊಳಗೆ ಅದುಮಿಟ್ಟುಕೊಂಡಿರುತ್ತಾರೆ. ಮನಸ್ಸಿನ ಚಿಂತನೆಯೇ ಭಾವನೆಯಂತೆ. ಭಾವನೆಗಳ ಕೇಂದ್ರವೇ ಮನಸ್ಸಂತೆ. ಮನುಷ್ಯ ಅಂದ ಮೇಲೆ ಅದೆಲ್ಲವೂ ಇರಲೇಬೇಕಲ್ಲವೇ?
ಆದರೆ ನಮ್ಮ ದೇಶದ ಜನ ಅದಕ್ಕೆ ಸ್ವಲ್ಪ ಹೆಚ್ಚೇ ಮಹತ್ವ ಕೊಡುತ್ತಾರನ್ನಿ. ಮಗ ಮನೆ ಬಿಟ್ಟು ಕೆಲಸಕ್ಕೆ ಹೋಗುವಾಗ ಚುರ್ರೆನ್ನೋ ಹೆತ್ತ ಕರುಳು, ಮಗಳನ್ನು ಮದುವೆ ಮಾಡಿ ಕೊಡುವಾಗ ಅತೀ ನೋವು ಪಡುವ ಜನ್ಮ ಕೊಟ್ಟ ತಂದೆ, ಸ್ನೇಹ ಕೈ ಕೊಟ್ಟಿತ್ತೆಂದು ಮರುಗುವ, ಕೆಲವೊಮ್ಮೆ ಆತ್ಮಹತ್ಯೆಗೂ ಯತ್ನಿಸುವ ಮೂರ್ಖ ಯುವಜನ, ಪ್ರೀತೀಲಿ ಹಿಂಸೆ ಪಡುತ್ತಿದ್ದರೂ ಅದೇ ಬೇಕು ಎಂದು ನೋವ ನುಂಗಿ ಬದುಕು ಕಲಿಯೋ ಪ್ರೇಮಿ ಅಯ್ಯೋ ಒಂದೇ ಎರಡೇ. ಕುಟುಂಬ ಪ್ರಧಾನ ವ್ಯವಸ್ಥೆಯಿರುವ ನಮ್ಮ ದೇಶದಲ್ಲಿ ಸಂಬಂಧಕ್ಕೆ ಮುಖ್ಯ ಸ್ಥಾನ. ಭಾವನೆಗಳಿಗೂ ಸೇರಿ. .
ಅದೇ ವಿದೇಶಿಗರನ್ನು ನೋಡಿ. ಮಗಳು/ ಮಗ ವಯಸ್ಸಿಗೆ ಬಂದರೆಂದು ಸ್ವತಂತ್ರವಾಗಿ ತಮ್ಮಿಂದ ದೂರ ಬಿಟ್ಟು ಬಿಡುವ ಪೋಷಕರು, ಮನರಂಜನೆಗೆ ಒಂದು ರಾಶಿ ಫ್ರೆಂಡ್ಸ್, "ಲಿವಿಂಗ್ ಟುಗೆದರ್" ರಿಲೇಶನ್ಶಿಪ್ ಗಳು....ಉಫ್ ಹೇಳಿದಷ್ಟು ಮುಗಿಯದು ಬಿಡಿ.
ಮದುವೆ ಎಂಬ ಬಂಧವಿಲ್ಲ, ಮಕ್ಕಳೆಂಬ ನಾಜೂಕತೆಯ ಕಲ್ಪನೆಯೇ ಇಲ್ಲ. ಎಲ್ಲ ಆಸೆಗೆ ತಕ್ಕ ತಾತ್ಕಾಲಿಕ ಸುಖಕ್ಕೆ ತಕ್ಕ ಬದುಕಿದರೆ ಅದು ಅಲ್ಲಿಯ ಜೀವನ. ಮನಸ್ಸು, ಚಿಂತೆ, ಮೂಡ್, ಫೀಲಿಂಗ್ ಎಂದು ಅದೇನು ನಾವು ಗೊಣಗುತ್ತೇವಲ್ಲ ಅದು ಬರೀ ನಮ್ಮ ಮಾತೃಭೂಮೀಲಿ ಮಾತ್ರ ಅನಿಸುತ್ತೆ.
ಆದರೆ ಭಾವನೆಯ ಏರುಪೇರಾದಾಗ ಬದುಕಲ್ಲಿ ಭರವಸೆಯೇ ಹೊರಟು ಬಿಡುತ್ತದೆ ನೋಡಿ ಆಗ ಅವರಂತೆ ದೃಢವಾಗಬೇಕೆಂಬ ಆಸೆಯಾಗುತ್ತದೆ. ಒಬ್ಬರೇ ಬದುಕಬೇಕೆಂಬ ಹಂಬಲ ಇಮ್ಮಡಿಯಾಗುತ್ತದೆ. ಅದೇನೇ ಅನ್ನಿ. ಭಾರತದಷ್ಟು ಭಾವನೆಗೆಲ್ಲೆಲ್ಲಿದೆ ಬೆಲೆ ಅಲ್ಲವೆ...?
Post a Comment