ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸನ್ಮಾನದಿಂದ ಹೊಣೆಗಾರಿಕೆ ಹೆಚ್ಚಿದೆ: ಡಾ. ಚೂಂತಾರು

ಸನ್ಮಾನದಿಂದ ಹೊಣೆಗಾರಿಕೆ ಹೆಚ್ಚಿದೆ: ಡಾ. ಚೂಂತಾರು


ಬೆಳ್ಳಾರೆ: ನಿಸ್ವಾರ್ಥ ಮತ್ತು ನಿಷ್ಕಾಮ ಸೇವೆಗೆ ಪ್ರತಿಫಲ ಖಂಡಿತವಾಗಿಯೂ ದೊರಕುತ್ತದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯನ್ನು ಜನರು ಗಮನಿಸುತ್ತಾರೆ ಮತ್ತು ಗುರುತಿಸುತ್ತಾರೆ. ಇಂತಹ ಗುರುತಿಸುವಿಕೆ ಮತ್ತು ಗೌರವಿಸುವಿಕೆಯಿಂದ ಸನ್ಮಾನಿತರ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾಮಾಜಿಕ ಬದ್ದತೆ ಇನ್ನಷ್ಟು ಹೆಚ್ಚಾಗುತ್ತದೆ. ಮುಖ್ಯಮಂತ್ರಿಗಳಿಂದ ಚಿನ್ನದ ಪದಕವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪಡೆದಿರುವದಕ್ಕಿಂತಲೂ ಹೆಚ್ಚಿನ ಸಂತಸ, ಸಾರ್ಥಕತೆ, ಊರಿನ ಜನರಿಂದ ಗುರುತಿಸಿಕೊಂಡಾಗ ಆಗುತ್ತದೆ.  ಸನ್ಮಾನವನ್ನು ಅತ್ಯಂತ ವಿನಮ್ರನಾಗಿ, ಗ್ರಾಮದೇವತೆ ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಪಡೆದು ಧನ್ಯತಾ ಭಾವದಲ್ಲಿ ಕೃತಾರ್ಥನಾಗಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ  ಜಿಲ್ಲಾ ಸಮಾದೇಷ್ಟರು ಮತ್ತು ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ. ಮುರಲೀಮೋಹನ್ ಚೂಂತಾರು ನುಡಿದರು.


ಭಾನುವಾರದಂದು (ಅ.10) ಚೊಕ್ಕಾಡಿಯ ಶ್ರೀರಾಮ ದೇವಳದ ದೇಸೀ ಭವನದಲ್ಲಿ ಅಮರಮುಡ್ನೂರು ಗ್ರಾಮ ಪಂಚಾಯತ್, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಜೇಸಿಐ ಸುಳ್ಯ ಪಯಸ್ವಿನಿ (ರಿ) ಸುಳ್ಯ ಇದರ ಆಶ್ರಯದಲ್ಲಿ ಗೃಹರಕ್ಷಕ ದಳದಲ್ಲಿ ನೀಡಿದ ನಿಷ್ಕಾಮ ಸೇವೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಮೂಲತಃ ಚೊಕ್ಕಾಡಿ ಚೂಂತಾರಿನವರಾದ ಡಾ: ಮುರಲೀ ಮೋಹನ್ ಚೂಂತಾರು ಇವರಿಗೆ ಹುಟ್ಟೂರ ಪೌರ ಸನ್ಮಾನ ಕಾರ್ಯಕ್ರಮ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ HGF ಗುರುರಾಜ್ ಅಜ್ಜಾವರ, ಜೇಸಿಐ ಸುಳ್ಯ ಪಯಸ್ವಿನಿ(ರಿ) ಸುಳ್ಯ ಇವರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅವರೇ ನಿರ್ವಹಿಸಿದರು. ಗಣ್ಯರ ಸಮ್ಮುಖದಲ್ಲಿ ಡಾ: ಚೂಂತಾರು ಅವರನ್ನು ಜೇಸಿಐ ಇದರ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆಸಿಐ ಪಿಪಿಪಿ ಮುರಳೀ ಶ್ಯಾಮ್ ಇವರು ನಿರ್ವಹಿಸಿದರು ಒಬ್ಬ ವೈದ್ಯರಾಗಿ, ವೈದ್ಯ ಸಾಹಿತಿಯಾಗಿ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಂಡು, ರೋಗಿಗಳನ್ನು ಗುಣಪಡಿಸುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾಗಿ, ಒಳ್ಳೆಯ ನಾಯಕತ್ವ ಗುಣ ಹೊಂದಿರುವ ಡಾ. ಚೂಂತಾರು ಅವರಿಗೆ ಅರ್ಹವಾಗಿಯೇ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರಕಿದೆ.  ಅವರಿಗೆ ಇನ್ನಷ್ಟು ಹುಮ್ಮಸ್ಸು, ಹುರುಪಿನಿಂದ ಜನ ಸೇವೆ ಮಾಡುವ ಭಾಗ್ಯ ಭಗವಂತ ಕರುಣಿಸಲಿ ಎಂದು ಶ್ರೀ ಮುರಳೀ ಶ್ಯಾಮ್ ಹಾರೈಸಿದರು.


ವಿಶ್ರಾಂತ ಶಿಕ್ಷಕರಾದ, ಶ್ರೀ ಕೆ.ಬಿ.ನಾಯ್ಕ, ಪೊನಡ್ಕ ಅಭಿನಂದನಾ ಮಾತುಗಳನ್ನು ಆಡಿದರು. ಶ್ರೀ ಪ್ರಶಾಂತ್ ನೇಣಾರು ಇವರು ಅಭಿನಂದನಾ ಪತ್ರವನ್ನು ವಾಚಿಸಿದರು. ಮುಖ್ಯ ಅತಿಥಿಗಳಾಗಿದ್ದ ಗ್ರಾಮದ ಮೊದಲ ಪ್ರಜೆ ಶ್ರೀಮತಿ ಪದ್ಮಪ್ರಿಯ ಶುಭವನ್ನು ಹಾರೈಸಿದರು. ಪಂಚಾಯತ್ ಅಭಿವೃಧ್ದಿ ಅಧಿಕಾರಿ ಆಕಾಶ್ ಮತ್ತು ಜಿಸಿಐ ಇದರ ವಲಯ ಸಂಯೋಜಕರಾದ ಜೆ ಎಫ್‍ಎಂ ದೇವರಾಜ್ ಕುದ್ಪಾಜೆ, ಜಿಸಿಐ ಇದರ ಕಾರ್ಯಕ್ರಮ ನಿರ್ದೇಶಕರಾದ ಶ್ರೀಮತಿ ತಾರಾ ಸಮಾರಂಭದಲ್ಲಿ ಉಪಸ್ಥತರಿದ್ದರು.


ಕಾರ್ಯಕ್ರಮದ ಸಂಯೋಜಕರಾದ ಮತ್ತು ಅಮರಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಜಿಸಿಐ ಪಿಪಿಪಿ ಅಶೋಕ್ ಚೂಂತಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಊರಿನ ಸಾಧಕರನ್ನು ಗುರುತಿಸಿ ಗೌರವಿಸುವುದು ನಮ್ಮ ಊರಿನ ಕರ್ತವ್ಯವಾಗಿರುತ್ತದೆ. ಈ ಗೌರವದಿಂದ ಇತರರಿಗೂ ಸ್ಪೂರ್ತಿ ದೊರೆತು ನಮ್ಮೂರಿನ ಯುವಕ/ಯುವತಿಯರು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.


ಇನ್ನೋರ್ವ ಅತಿಥಿ ಊರಿನ ಗಣ್ಯರಾದ ಶ್ರೀ ಆನೆಕಾರ ಗಣಪಯ್ಯ ಅವರು ಮಾತನಾಡಿ, ಚೊಕ್ಕಾಡಿಯ ಪುಣ್ಯಭೂಮಿಯಲ್ಲಿ ಹಲವಾರು ಸಾಧಕರು ಮೂಡಿಬಂದಿದ್ದಾರೆ. ಈ ಮಣ್ಣಿನ ಗುಣವೇ ಹಾಗಿದೆ. ಡಾ. ಚೂಂತಾರು ಅವರ ಸಾಧನೆ ಮತ್ತು ಜನಾನುರಾಗಿ ಕೆಲಸಗಳಿಂದಾಗಿ ಪ್ರಶಸ್ತಿ ಅವರಿಗೆ ಒಲಿದು ಬಂದಿದೆ. ಅವರ ಸಾಧನೆ ಇತರರಿಗೆ ಮಾದರಿಯಾಗಲಿ ಎಂದು ಶುಭ ನುಡಿದರು. ಜಿಸಿ ರವಿಕುಮಾರ್ ಅಕ್ಕೋಜಿಪಾಲ್ ವಂದನಾರ್ಪಣೆ ಮಾಡಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم