ಮಂಗಳೂರು: ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಹಬ್ಬಗಳೆಂದರೆ ಪ್ರಕೃತಿ ಪೂಜೆ. ತುಳುವರು ಪ್ರಕೃತಿಯ ಆರಾಧಕರು. ಪ್ರಕೃತಿಯನ್ನು ಬಿಟ್ಟು ತುಳುವರನ್ನು ಕಲ್ಪನೆ ಕಷ್ಟ' ಎಂದು ಎಂಆರ್‌ಪಿಎಲ್ ಉಪ ಮಹಾಪ್ರಬಂಧಕರಾದ ವೀಣಾ ಟಿ.ಶೆಟ್ಟಿ ಅವರು ಹೇಳಿದರು.
ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆಯ 5ನೇ ಕಾರ್ಯಕ್ರಮದಲ್ಲಿ 'ತುಳುವ ಮಣ್ಣ್'ದ ಕಮ್ಮೆನ' ಎಂಬ ವಿಷಯದಲ್ಲಿ ತುಳು ಉಪನ್ಯಾಸ ನೀಡಿ ಮಾತನಾಡುದರು.
ತುಳುವರು ಹೆಣ್ಣನ್ನು ಪೂಜಿಸುವವರು. ತುಳುನಾಡಿನಲ್ಲಿ ಅವಿಭಕ್ತ ಕುಟುಂಬ ಪದ್ಧತಿ ಪ್ರಮುಖವಾಗಿದ್ದು ಜಾತ್ರೆಗಳು, ಯಕ್ಷಗಾನ, ಕೋಲ, ಕಂಬಳ, ಆಯನಗಳು ಸಂಭ್ರಮದ ಕೊಂಡಿಗಳಾಗುತ್ತವೆ. ತುಳುವರ ಆಚರಣೆ, ಸಂಪ್ರದಾಯ ಮತ್ತು ಸಂಸ್ಕಾರಗಳು ಯಾರಾದರೂ ಮೆಚ್ಚಿಕೊಳ್ಳುವಂತಹದ್ದು. ಹಾಗಾಗಿ ತುಳುವರಿಗೆ ಜಗತ್ತಿನಲ್ಲಿ ದೊಡ್ಡ ಗೌರವವಿದೆ ಎಂದರು.
'ಕೊರೊನಾ ಪ್ರಭಾವದಿಂದ ಯುವಜನತೆ ತುಳುನಾಡಿನ ಹಳ್ಳಿ ಕಡೆಗಳಿಗೆ ಮುಖ ಮಾಡುತ್ತಿದ್ದಾರೆ. ಹಿಂದೆ ನಮ್ಮಲ್ಲಿ ಹಣವೊಂದಿರಲಿಲ್ಲ ಆದರೆ ಜೀವನಕ್ಕೆ ಮತ್ತು ಸಂಸ್ಕಾರಕ್ಕೆ ಬೇಕಾದ ಎಲ್ಲವೂ ಇರುತ್ತಿತ್ತು. ಈಗ ಹಣವಿದೆ ಬೇರೇನೂ ಉಳಿದಿಲ್ಲ' ಎಂದು ಖೇದ ವ್ಯಕ್ತ ಪಡಿಸಿದರು.
ಉಪನ್ಯಾಸ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ತುಳು ಸ್ನಾತಕ್ಕೋತರ ವಿಭಾಗದ ಸಂಯೋಜಕರಾದ ಡಾ.ಮಾಧವ ಎಂ.ಕೆ ಅವರು ಮಾತನಾಡಿ 'ತುಳುನಾಡಿನ ಪ್ರತಿ ಸಾರವನ್ನು ಉಣಬಡಿಸಿದ ಉಪನ್ಯಾಸ ಔತಣದಂತೆ ಔಚಿತ್ಯಪೂರ್ಣವಾಗಿತ್ತು. ಅತ್ಯಂತ ಪವಿತ್ರ ವೃತ್ತಿ ಶಿಕ್ಷಕ ವೃತ್ತಿ.ಶಿಕ್ಷಕರ ದಿನಾಚರಣೆ ಸ್ಮರಣೆಗಾಗಿ ಶಿಕ್ಷಕರಿಗಾಗಿಯೇ ಚುಟುಕು ಸಾಹಿತ್ಯ ಪರಿಷತ್ತು 'ಕಲಿಸುವ ಮನಸಿನ ಕವಿತೆ' ಎಂಬ ಕವಿಗೋಷ್ಠಿಯನ್ನು ಏರ್ಪಡಿಸಿರುವುದು ಪ್ರಶಂಸನೀಯ ಕಾರ್ಯ ಮತ್ತು ಆಹ್ವಾನಿತ ಹನ್ನೊಂದೂ ಶಿಕ್ಷಕರೂ ಅದ್ಭುತವಾದ ಕವನಗಳನ್ನು ತುಂಬಾ ಕಾಳಜಿಯಿಂದ ಬರೆದು ಪ್ರಸ್ತುತ ಪಡಿಸಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಗುರುಪ್ರಸಾದ್ ಕಡಂಬಾರ್ ಅವರು ಮಾತನಾಡಿ 'ತುಳು ಭಾಷೆ ಎಂಬುದೇ ರೋಮಾಂಚನ. 2500 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಭಾಷೆ ತುಳು. ಹಾಗಾಗಿ ತುಳುನಾಡಿನಲ್ಲಿ ಭಾಷೆಯನ್ನು ಮೇಲೆತ್ತುವ ಮತ್ತಷ್ಟು ಕಾರ್ಯಕ್ರಮಗಳು ನಡೆಯಬೇಕು. ಜೊತೆಗೆ ತನ್ನದೇ ಲಿಪಿ ಹೊಂದಿರುವುದು ಹೆಮ್ಮೆ ಪಡುವಂತಹದ್ದು. ಹಾಗಾಗಿ ತುಳು ಲಿಪಿಯನ್ನು ವ್ಯಾಪಾರಾದಿ ಕ್ಷೇತ್ರಗಳ ಫಲಕಗಳಲ್ಲಿ ತುಳು ಲಿಪಿಯ ಬಳಕೆ ಮಾಡುವ ಬಗ್ಗೆ ತುಳುವರು ಹೆಚ್ಚಿನ ಆಸಕ್ತಿ ತೋರಿಸಬೇಕು' ಎಂದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ಪ್ರಾಸ್ತಾವಿಕ ಭಾಷಣ ಮಾಡಿ 'ತುಳು ಭಾಷೆಯಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ಅನೇಕರ ನಿರೀಕ್ಷೆ ಆಗಿತ್ತು ಮತ್ತು ಪರಿಷತ್ತು ತುಳುನಾಡು ಮತ್ತು ತುಳು ಭಾಷೆಯನ್ನು ಅಭಿಮಾನದಿಂದ ಗೌರವಿಸುತ್ತದೆ. ಆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಚೌಕಟ್ಟು ಮತ್ತು ಗುಣಮಟ್ಟದ ಕಾರ್ಯಕ್ರಮಗಳನ್ನು ಪರಿಷತ್ತು ನಿರಂತರ ಮಾಡುತ್ತಾ ಬಂದಿದೆ' ಎಂದರು.
ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು ಇದರ ಶಿಕ್ಷಕಿ ಚಿತ್ರಾಶ್ರೀ ಕೆ.ಎಸ್, ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ತುಳು ಎಂ.ಎ ಉಪನ್ಯಾಸಕಿ ಪ್ರಶಾಂತಿ ಶೆಟ್ಟಿ ಇರುವೈಲು, ಬಿ.ಎಂ.ಪ್ರೌಢಶಾಲೆ, ಉಳ್ಳಾಲ ಇದರ ಶಿಕ್ಷಕಿ ಶ್ರೀಮತಿ ಉಷಾ ಎಂ, ಕಲ್ಮಂಜ ಸ.ಹಿ.ಪ್ರಾ.ಶಾಲೆ ಕಲ್ಮಂಜ, ಬಂಟ್ವಾಳ ಇದರ ಶಿಕ್ಷಕ ನಾಗರಾಜ ಖಾರ್ವಿ, ಕೆನರಾ ಪ್ರೌಢಶಾಲೆ ಉರ್ವ ಇದರ ಕನ್ನಡ ಶಿಕ್ಷಕಿ ಲಕ್ಷ್ಮೀ ವಿ. ಭಟ್, ಸರಕಾರಿ ಪ್ರೌಢಶಾಲೆ, ನಾರ್ಶ ಮೈದಾನ, ಬಂಟ್ವಾಳ ಇದರ ಶಿಕ್ಷಕಿ ತುಳಸಿ ಕೈರಂಗಳ, ಬೆಸೆಂಟ್ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲಬೈಲು ಇದರ ಶಿಕ್ಷಕಿ ಸುಮಾ ಬಾರ್ಕೂರು, ಶಾರದಾ ವಿದ್ಯಾ ನಿಕೇತನ ಪದವಿ ಪೂರ್ವ ಕಾಲೇಜು, ತಲಪಾಡಿ ಇದರ ಉಪನ್ಯಾಸಕ ಸುರೇಶ್ ರಾವ್ ಅತ್ತೂರು, ನವಜೀವನ ಪ್ರೌಢ ಶಾಲೆ, ಪೆರಡಾಲ, ಬದಿಯಡ್ಕದ ಶಿಕ್ಷಕಿ ಸುಶೀಲಾ ಕೆ.ಪದ್ಯಾಣ, ನಿವೃತ್ತ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಉದಯರಾಜ್ ಬೆಂಗಳೂರು, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಹಮೀದ ಬೇಗಂ ದೇಸಾಯಿ ಬೆಳಗಾವಿ ಮುಂತಾದ ಆಹ್ವಾನಿತ 11 ಮಂದಿ ಶಿಕ್ಷಕರು ಕವಿಗೋಷ್ಠಿಯಲ್ಲಿ ತಮ್ಮ ಕವಿತೆಗಳನ್ನು ವಾಚಿಸಿಸರು.
ವಿಘ್ನೇಶ್ ಭಿಡೆ ಸಂಪನ್ಮೂಲ ವ್ಯಕ್ತಿಯವರನ್ನು ಮತ್ತು ಸಮಾರಂಭದ ಅಧ್ಯಕ್ಷರನ್ನು ಪರಿಚಯಿಸಿದರು. ಆಕೃತಿ ಐ ಎಸ್ ಭಟ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಅಂತರ್ಜಲ ಕಾರ್ಯಕ್ರಮದಲ್ಲಿ ಶಿಕ್ಷಕಿ, ಕವಯಿತ್ರಿ ಪರಿಷತ್ತಿನ ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಸಮನ್ವಯಕಾರರಾಗಿ ಕಾರ್ಯಕ್ರಮ ನಿರೂಪಿಸಿದರು.
****
ವರದಿ: ಕಾ.ವೀ.ಕೃಷ್ಣದಾಸ್
8310388415
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق