ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿದ್ಯಾರ್ಥಿ ಕೋವಿಡ್ ಯೋಧರಿಗೆ ಗಣ್ಯರಿಂದ ಗೌರವ

ವಿದ್ಯಾರ್ಥಿ ಕೋವಿಡ್ ಯೋಧರಿಗೆ ಗಣ್ಯರಿಂದ ಗೌರವ


ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಜಿಲೆನ್ಸ್ ಘಟಕ, ಜಿಲ್ಲಾ ಕೊವಿಡ್ ವಾರ್ ರೂಂ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಕೋವಿಡ್ ಸಾಂಕ್ರಾಮಿಕದ ವೇಳೆ ವಾರ್ ರೂಮ್ನಲ್ಲಿ ಸೇವೆ ಸಲ್ಲಿಸಿದ ವಿವಿಧ ಕಾಲೇಜುಗಳ ಯುವ ರೆಡ್ ಕ್ರಾಸ್ ಸ್ವಯಂಸೇವಕರನ್ನು ಇತ್ತೀಚೆಗೆ ಪಾಲಿಕೆಯ ಸಭಾಂಗಣದಲ್ಲಿ ಗೌರವಿಸಲಾಯಿತು.


ಮುಖ್ಯ ಅತಿಥಿ ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ನ  ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದಾಗ ಜನರ ಸಮಸ್ಯೆಗಳನ್ನು ಆಲಿಸಲು ಮಾನವೀಯ ಹೃದಯ ಮುಖ್ಯವಾಗಿತ್ತು. ಈ ದಿಶೆಯಲ್ಲಿ ವಿದ್ಯಾರ್ಥಿಗಳು ತಮ್ಮ ಓದಿನ ಸಂದರ್ಭದಲ್ಲಿ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಸಾಮಾಜಿಕ ಸೇವೆಗೆ ತೊಡಗಿಸಿಕೊಂಡಿರುವುದು ಅವರ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ, ಎಂದರು.


ಜಿಲ್ಲಾ ಕಣ್ಗಾವಲು ಘಟಕದ ನಿರ್ದೇಶಕ ಡಾ.ಜಗದೀಶ್, ಕೊವಿಡ್ ವಾರ್ ರೂಂ ಸಿಬ್ಬಂದಿಯೊಂದಿಗೆ ಸಾಂಕ್ರಾಮಿಕ ರೋಗವನ್ನು ನಿರ್ವಹಿಸುವಲ್ಲಿ ಸಹಾಯ ಹಸ್ತ ಚಾಚಿದ ಸ್ವಯಂಸೇವಕರ ಪರಿಶ್ರಮ ಮತ್ತು ದಣಿವರಿಯದ ಪ್ರಯತ್ನಕ್ಕೆ ಧನ್ಯವಾದ ಅರ್ಪಿಸಿದರಲ್ಲದೆ, ಸ್ವಯಂ ಸೇವಕರು ರೋಗಿಗಳ ದೈಹಿಕ ಆರೋಗ್ಯದ ಬಗ್ಗೆ ಗಮನಹರಿಸುವುದರ ಜೊತೆಗೆ ಅವರ ಮಾನಸಿಕ ಸ್ಥೈರ್ಯ ಹೆಚ್ಚಾಗುವಂತೆ ನೋಡಿಕೊಂಡಿರುವುದು ಶ್ಲಾಘನೀಯ, ಎಂದರು. ಜಿಲ್ಲಾ ರೆಡ್ ಕ್ರಾಸ್ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ಮಾತನಾಡಿ ಯುವಕರು ಸಂಕಷ್ಟದ ಸಮಯದಲ್ಲಿ ನಮ್ಮೊಂದಿಗೆ ಕೈಜೋಡಿಸುತ್ತಿರುವುದರಿಂದ ತುರ್ತು ಸೇವೆ ನಿರ್ವಹಿಸಲು ರೆಡ್ ಕ್ರಾಸ್ಗೆ ಸಾಧ್ಯವಾಗಿದೆ, ಎಂದರು.

 

ಮಂಗಳೂರು ವಿಶ್ವವಿದ್ಯಾಲಯದ ರೆಡ್ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಮಾತನಾಡಿ, ಜಿಲ್ಲೆಯಲ್ಲಿ  ಕೋವಿಡ್ ತೀವ್ರಗತಿಯಲ್ಲಿದ್ದಾಗ ಶೈಕ್ಷಣಿಕ-ಸಂಸ್ಥೆಗಳು ಮುಚ್ಚಿದ್ದವು. ಸ್ವಯಂಸೇವೆ ಮಾಡಬೇಕೆಂಬ ಇಚ್ಛೆಯಿದ್ದರೂ ಸಾರಿಗೆ ಸಂಪರ್ಕದ ಕೊರತೆ ಮತ್ತು ಕೋವಿಡ್ ಭಯದಿಂದ ಯಾರೂ ವಾರ್ ರೂಮ್ಗೆ ಬಂದು ಕೆಲಸ ನಿರ್ವಹಿಸಲು ಹಿಂಜರಿಯುತ್ತಿದ್ದರು. ಇದ್ಯಾವುದನ್ನೂ ಲೆಕ್ಕಿಸದೆ ಸ್ವಯಂ ಪ್ರೇರಣೆಯಿಂದ  ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಸೇವೆ ಸಲ್ಲಿಸಿರುವ ವಿದ್ಯಾರ್ಥಿಗಳು ಯುವ ರೆಡ್ ಕ್ರಾಸ್ ನ ಘನತೆ ಹೆಚ್ಚಿಸಿದ್ದಾರೆ, ಎಂದರು.


ರೆಡ್ ಕ್ರಾಸ್ ನ ವಿಪತ್ತು ನಿರ್ವಹಣ ಸಮಿತಿಯ ನಿರ್ದೇಶಕ ಯತೀಶ್ ಬೈಕಂಪಾಡಿ ಮಾತನಾಡಿ ವಿದ್ಯಾರ್ಥಿಗಳು ಲಸಿಕೆ ವಿತರಣಾ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯಕ್ರಮಗಳು ಜನರಿಗೆ ತಲುಪುವಂತೆ ಮಾಡಿದ್ದಾರೆ, ಎಂದು ಶ್ಲಾಘಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ಅಶೋಕ್ ಕಾರ್ಯಕ್ರಮ ಸಂಯೋಜಿಸಿ ಸ್ವಾಗತಿಸಿದರು. ಎಲ್ಲಾ ಸ್ವಯಂಸೇವಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم