ವಕ್ರತುಂಡ ಮಹಾಕಾಯ
ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ
ಸರ್ವ ಕಾರ್ಯೇಷು ಸರ್ವದಾ
ಹೌದು ವಕ್ರತುಂಡನೂ ಮಹಾಕಾಯನೂ ಕೋಟಿಕೋಟಿ ಸೂರ್ಯರ ಪ್ರಕಾಶವನ್ನೂ ಹೊಂದಿರುವ ವಿಘ್ನ ನಿವಾರಕನೂ ವಿನಾಯಕನೂ ನಮ್ಮೆಲ್ಲರ ಇಷ್ಟಾರ್ಥಗಳ ನೆರವೇರಿಸಿ ಸುಖ ಶಾಂತಿ ಸಮೃದ್ಧಿ ನೆಮ್ಮದಿ ಕರುಣಿಸುವ ಎಲ್ಲರಿಂದಲೂ ಮೊದಲ ಪೂಜೆಯನ್ನು ಸ್ವೀಕರಿಸುವ ಸರ್ವಾದರಣೀಯ ಶ್ರೀ ಗಣೇಶ ಜನನಾಯಕ... ಜಗನಾಯಕ ... ವಿಶ್ವವಂದಿತ ನಮ್ಮೆಲ್ಲರ ಅಭಿಮಾನದ ದೇವರು.ಗಜವದನ...ಹೇರಂಭ...
ಬೆಟ್ಟ ಗುಡ್ಡ ಕಲ್ಲು ಮಣ್ಣು ನೀರು ಆಕಾಶ ಗಾಳಿ ಬೆಂಕಿ,ಹೂವು ಕಾಯಿ ಹಣ್ಣು ಇತ್ಯಾದಿಗಳಲ್ಲಿ ದೇವರಿದ್ದಾನೆ ಎಂಬ ನಂಬಿಕೆ ನಮ್ಮೆಲ್ಲರದು.
ನಂಬಿಕೆಯೇ ಬದುಕಿಗೆ ಜೀವಾಳ. ಶ್ರೀ ಗಣೇಶ ಚತುರ್ಥಿಯ ಈ ಶುಭವಸರದಲ್ಲಿ ನಮ್ಮ ಗಣೇಶ ಹಾಲು ಕುಡಿದ ,ಕಲ್ಲು ಗೆಡ್ಡೆಗೆಣಸುಗಳಲ್ಲಿ ಮೂಡಿ ಬಂದ ...ಇತ್ಯಾದಿ ವದಂತಿ ಚಿತ್ರಪಟಗಳೂ ಮೂಡಿಬರುವುದು ನಮ್ಮ ನಂಬಿಕೆಗಳಿಗೊಂದು ಸವಾಲೂ ಆಗಿದೆ. ಇರಲಿ .ಕಳೆದ ಎರಡು ವರುಷಗಳ ನಮ್ಮ ಸಂಕಷ್ಟ ಕಾಲಕ್ಕೆ ಆದಷ್ಟು ಬೇಗ ಪರಿಹಾರ ಸೂಚಿಸುವನೋ ಕಾದು ನೋಡಬೇಕಾಗಿದೆ. ಗಣೇಶ ಹಬ್ಬಕ್ಕೂ ಕತ್ತರಿ ಬಿದ್ದಿದೆ. ಸಾರ್ವಜನಿಕ ಹಬ್ಬ ಸೀಮಿತ ಪರಿಸರಸ್ನೇಹಿ ಹಬ್ಬವಾಗಿ ರೂಪಾಂತರಗೊಂಡಿದೆ.
ನಮ್ಮ ಕಲಾವಿದರ ಪಾಲಿಗೆ ಮಾತ್ರ ಶ್ರೀ ಗಣೇಶ ಸ್ಫೂರ್ತಿಯ ಸೆಲೆ.
ನಮ್ಮ ನಾಡಿನ ಖ್ಯಾತ ಚುಕ್ಕಿಚಿತ್ರ ಕಲಾವಿದ ಸೂರ್ಯ ಆಚಾರ್ ವಿಟ್ಲ ಅವರ ಸಾವಿರ ಸಾವಿರ ಚುಕ್ಕಿಗಳಲ್ಲಿ ಗಣೇಶನ ವಿವಿಧ ಆಕಾರಗಳು ಮೂಡಿಬಂದು ನಮ್ಮ ಮನರಂಜಿಸುತ್ತಿವೆ. ಎಳೆಯ ಮಕ್ಕಳೂ ಬ್ರೆಷ್ ಹಿಡಿದು ಗಣೇಶನ ಚಿತ್ರ ಎಳೆದೇ ಬಿಡುತ್ತಾರೆ. ಆವೆ ಮಣ್ಣಿನಲ್ಲಿ ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರಿಸಿ ಪರಿಸರ ಪ್ರೇಮ ಹಾಗೂ ಭಕ್ತಿಯ ಪ್ರತಪಾದಕರಾಗುತ್ತಾರೆ.
ನಮ್ಮ ವ್ಯಂಗ್ಯ ಚಿತ್ರಕಲಾವಿದರ ಚಿತ್ರ ವಿಚಿತ್ರ ವ್ಯಂಗ್ಯಚಿತ್ರಗಳು ನಮ್ಮ ಮೋಡಿ ಮಾಡಿ ಬಿಡುತ್ತವೆ. ಹೀಗೆ ನಮ್ಮ ಗಣೇಶ ಕಲೆ ಭಕ್ತಿ ಆರಾಧನಾ ಮೂರ್ತಿಯಾಗಿ ಎಲ್ಲರ ಗಮನ ಸೆಳೆಯುತ್ತಾನೆ. ಶ್ರೀ ಗಣೇಶ ಸ್ತುತಿಯೊಂದಿಗೆ ನಮ್ಮೆಲ್ಲ ಕಾರ್ಯಗಳ ಶುಭಾರಂಭ.
*✍️ನಾರಾಯಣ ರೈ ಕುಕ್ಕುವಳ್ಳಿ.*
Post a Comment