ಮಂಗಳೂರು: ಪುತ್ತೂರು ಕಬಕದಲ್ಲಿ ಇಂದು ಬೆಳಗ್ಗೆ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತಮಾತೆ ಮತ್ತು ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರರ ಭಾವಚಿತ್ರವಿದ್ದ ಸ್ವಾತಂತ್ರ್ಯ ರಥದ ಚಾಲನೆಗೆ ಅಡ್ಡಿಪಡಿಸಿ ಧಿಕ್ಕಾರದ ಘೋಷಣೆ ಕೂಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಬಕ ಗ್ರಾಮ ಪಂಚಾಯತ್ ಎದುರುಗಡೆ ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಈ ಘಟನೆ ನಡೆದಿತ್ತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಾದ ಅಜೀಜ್, ಅಬ್ದುಲ್ ರಹಮಾನ್, ಶಮೀರ್‌ನನ್ನು ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದಾರೆ.
ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಹಾರೀಸ್, ಅದ್ದು, ತೌಸೀಫ್ ಮತ್ತು ಶಾಫಿ ಎಂದು ಗುರುತಿಸಲಾಗಿದೆ. ಇವರ ಜತೆಗೆ ಇನ್ನೂ ಹಲವರು ಸಮಾನ ಉದ್ದೇಶದಿಂದ ಗುಂಪು ಸೇರಿಕೊಂಡು ಕೋವಿಡ್ 19 ನಿಯಮಾವಳಿ ಉಲ್ಲಂಘಿಸಿದ್ದಲ್ಲದೆ, 75ನೇ ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿಪಡಿಸಿದ್ದಾರೆ.
ಸಾರ್ವಜನಿಕ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪಂಚಾಯತ್ ಅಧ್ಯಕ್ಷರನ್ನು ಕೈಯ್ಯಿಂದ ದೂಡಿ ಭಾರತ ಮಾತೆಯ ಭಾವಚಿತ್ರವನ್ನು ಹಾನಿಗೊಳಿಸಿದ್ದಾರೆ. ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق