ಪೌರಾಣಿಕ ನೆಲೆಗಟ್ಟಿನಲ್ಲಿ ಪ್ರಸ್ತುತದ ಪ್ರಕೃತಿಯ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಲ್ಲಿ, ಯಕ್ಷಗಾನೀಯವಾಗಿ ಸಂದೇಶವೊಂದನ್ನು ಕೊಡುವ ಒಳ್ಳೆಯ ಕೆಲಸವನ್ನು ಸಿರಿಬಾಗಿಲು ಪ್ರತಿಷ್ಠಾನ ಮಾಡುತ್ತಿದೆ. ಪ್ರಕೃತಿ ನಾಶದಿಂದಾಗುವ ಪರಿಣಾಮ ಮತ್ತು ಸಂರಕ್ಷಣೆಯ ಬಗ್ಗೆ ಸಂದೇಶವನ್ನು ಸಾರುವ ಪ್ರೊ. ಅಮೃತ ಸೋಮೇಶ್ವರ ವಿರಚಿತ ಮಾರಿಷಾ ಕಲ್ಯಾಣ ಇಂದು ಸಿರಿಬಾಗಿಲು ಪ್ರತಿಷ್ಠಾನದ ಶ್ರೀ ಎಡನೀರು ಮಠದ ಪೂಜ್ಯರ ಚಾತುರ್ಮಾಸ ಸಂದರ್ಭದ ಯಕ್ಷಪಂಚಕ ಕಾರ್ಯಕ್ರಮದ ಐದನೇ ದಿನದ ಯಕ್ಷಗಾನ ಬಯಲಾಟವಾಗಿ ಪ್ರಸ್ತುತಗೊಳ್ಳುತ್ತಿದೆ.
ಪ್ರಚೇತಸನು ಪ್ರಜಾಪತಿ ಪಟ್ಟ ಬೇಕೆಂದು ಶಿವನಲ್ಲಿ ತಪಸ್ಸನ್ನು ಮಾಡುತ್ತಾನೆ ಶಿವನು ಆ ಯೋಗ ಪ್ರಚೇತಸನ ಮಗನಿಗಿದೆ ಎಂದು ಸಮಾಧಾನ ಹೇಳುತ್ತಾನೆ. ಪ್ರಚೇತಸನು ದುಷ್ಠ ಪ್ರಾಣಿಗಳ ಉಪಟಳ ಹೆಚ್ಚಾದಾಗ ಅವ್ಯಾಹತವಾಗಿ ಸಸ್ಯ ಸಂಕುಲವನ್ನು ನಾಶ ಮಾಡಲು ಹೊರಡುತ್ತಾನೆ ಆಗ ವನದೇವಿ ಪ್ರಚೇತಸನಿಗೆ ವನನಾಶದಿಂದ ಕೆಡುಕಾದಿತೆಂದು ಎಚ್ಚರಿಕೆ ಕೊಡುತ್ತಾಳೆ ಆದರೂ ಪ್ರಕೃತಿ ನಾಶ ಮಾಡುತ್ತಾನೆ. ಆಗ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತದೆ.
ಇತ್ತ ವಸುಪುರದ ರಾಜ ಪದ್ಮಕನಿಗೆ ಪ್ರಜೆಗಳು ಅಳಲು ತೋಡಿಕೊಳ್ಳುತ್ತಾರೆ. ಮಳೆಯಿಲ್ಲ ಬರಗಾಲ ಬಂತೆಂದು ದೂರುಕೊಡುತ್ತಾರೆ. ರಾಜ್ಯದಲ್ಲಿ ಬರಗಾಲ ಮತ್ತು ರೋಗಬಾಧೆಗೆ ಪ್ರಕ್ರತಿಯನ್ನು ನಾಶ ಮಾಡಿದ್ದೆ ಕಾರಣ ಎಂದು ತಿಳಿದು ಸಸ್ಯ ಪೋಷಣೆಗೆ ಕ್ರಮ ಕೈಗೊಳ್ಳುತ್ತಾನೆ. ಸಕಲ ಸಸ್ಯಗಳ ನಾಶಕ್ಕೆ ಪ್ರಚೇತಸ ಕಾರಣನೆಂದು ಪಧ್ಮಕನು ಪ್ರಚೇತಸ ನೊಂದಿಗೆ ಯುದ್ದ ಮಾಡುತ್ತಾನೆ ಮತ್ತು ಪರಾಜಯ ಹೊಂದುತ್ತಾನೆ. ಪ್ರಚೇತಸನ ವೃಕ್ಷ ಸಂಹಾರ ಮುಂದುವರಿಸುತ್ತಾನೆ.
ಆಗ ವೃಕ್ಷ ವಾಸಿ ಚಿತ್ರಮುಖ ಯಕ್ಷ ಪ್ರಚೇತಸನೊಂದಿಗೆ ಯುದ್ದ ಮಾಡಿ ಸೋಲುತ್ತಾನೆ. ಆಗ ಚಂದ್ರನು ಬಂದು ಪ್ರಚೇತಸನಿಗೆ ಪ್ರಕೃತಿ ನಾಶ ಸರಿಯಲ್ಲ ಪ್ರಕೃತಿ ಅಸಮತೋಲನವಾದರೆ ಸರ್ವನಾಶವಾಗುತ್ತದೆ ಎಂದು ಹಿತವಚನ ಹೇಳುತ್ತಾನೆ. ಕೇಳದೆ ಇದ್ದಾಗ ಚಂದ್ರ ಯುದ್ಧಕ್ಕೆ ಸಿದ್ಧನಾಗುತ್ತಾನೆ. ಆಗ ಆಕಾಶದಿಂದ ಯುದ್ಧ ತರವಲ್ಲ ಎಂದು ಶಿವವಾಣಿ ಮೊಳಗುತ್ತದೆ.
ಆಗ ಚಂದ್ರನು ಕನ್ಯೆಯಾದ ತನ್ನ ಪಾಲಿತ ಪುತ್ರಿ ಮಾರಿಷೆಯನ್ನು ಪ್ರಚೇತಸನಿಗೆ ಲಗ್ನ ಮಾಡಿ ಕೊಡುವ ಇಂಗಿತ ವ್ಯಕ್ತ ಪಡಿಸಿದಾಗ ಇವಳ್ಯಾರೆಂದು ತಿಳಿಸುವ ಭಾಗ (Flash back) ರಂಗದಲ್ಲಿ ಪ್ರಸ್ತುತಗೊಳ್ಳಲಿದೆ.
ಇದು ಪುರುಷೋತ್ತಮ ಪೂಂಜರ ಮಾನಿಷಾದ ಪ್ರಸಂಗದ ಮೊದಲ ಭಾಗವಾಗಿದೆ.
ಕಂದ ಋಷಿಯ ತಪಸ್ಸನ್ನು ಕೆಡಿಸಲು ದೇವೇಂದ್ರನ ಆಣತಿಯಂತೆ ಅಪ್ಸರೆ ಪ್ಲಮೋಚನೆ ನೃತ್ಯವನ್ನು ಮಾಡುತ್ತಾಳೆ. ನಂತರ ಕಂದ ಋಷಿ ಮತ್ತು ಪ್ಲಮೋಚನೆಯ ಮದುವೆಯಾಗುತ್ತದೆ.
ಕಾಲಾಂತರದಲ್ಲಿ ಗರ್ಭಿಣಿಯಾದ ಪ್ಲಮೋಚನೆ, ಕಂದ ಋಷಿಯ ಅನುಷ್ಠಾನಕ್ಕೆ ಹೀಗಳೆಯುತ್ತಾಳೆ. ಋಷಿಯು ಸಿಟ್ಟಿಗೊಳಗಾಗುತ್ತಾನೆ. ಋಷಿಯ ಸಿಟ್ಟು ನೋಡಿದ ಪ್ಲಮೋಚನೆ ಭಯದಿಂದ ಪ್ರಸವಿಸುತ್ತಾಳೆ, ಪ್ರಸವದ ನಂತರ ಪ್ಲಮೋಚನೆ ಸ್ವರ್ಗಕ್ಕೆ ನಿರ್ಗಮಿಸುತ್ತಾಳೆ. ಕರುಣೆಗೊಂಡ ಋಷಿ ಮಗುವನ್ನು ವನದಲ್ಲಿರಿಸಿ ತಪಸ್ಸಿಗೆ ಹೋಗುತ್ತಾನೆ. ಆಗ ವನದೇವಿಯು ಮಾರೀಷಾ ಎಂದು ಹೆಸರಿಸಿ ಸಲಹುತ್ತಾಳೆ.
ಈ ಹುಟ್ಟಿನ ರಹಸ್ಯವನ್ನು ಚಂದ್ರನು ಪ್ರಚೇತಸನಿಗೆ ಹೇಳಿ ಅವಳನ್ನು ಲಗ್ನ ಮಾಡಿ ಕೊಡುತ್ತಾನೆ. ಪ್ರಚೇತಸನು ಮುಂದೆ ಪ್ರಕೃತಿಯ ರಕ್ಷಣೆ ಮಾಡಿ ಬೆಳೆಸುವಲ್ಲಿ ಕಟಿ ಬದ್ಧನಾಗಿರುತ್ತೇನೆ ಎಂದು ಚಂದ್ರನಿಗೆ ಭರವಸೆ ನೀಡುತ್ತಾನೆ. ಲೋಕಕ್ಕೆ ಕಲ್ಯಾಣವಾಗಲಿ ಎಂದು ಚಂದ್ರನು ನಿರ್ಗಮಿಸುತ್ತಾನೆ.
ಒಳ್ಳೆಯ ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರಿಂದ ತುಸು ವಿಭಿನ್ನವಾದ ಮತ್ತು ಒಂದು ಒಳ್ಳೆಯ ಸಂದೇಶ ಸಾರುವ ಯಕ್ಷಗಾನ ಕಾರ್ಯಕ್ರಮವೊಂದು ಪ್ರಸ್ತುತವಾಗುತ್ತಿರುವುದಕ್ಕೆ ಆಯೋಜಕರು ಅಭಿನಂದನೀಯರು.
ಆಶಯವರಿತು ಪ್ರಸ್ತುತ ಪಡಿಸುವ ಗುರುತರ ಜವಾಬ್ಧಾರಿ ಕಲಾವಿದರಿಗಿದೆ. ಇಂತಹ, ವಿಶಿಷ್ಥ ಮತ್ತು ವಿನೂತನ ಜನಪರ ಆಶಯದ ಕಾರ್ಯಕ್ರಮ ಕೇವಲ ಸೀಮಿತ ಸಂಖ್ಯೆಯ ಒ೦ದಿಬ್ಬರಿಗಲ್ಲದೆ ಆನ್ ಲೈನ್ ಮೂಲಕ ಕರೋನಾ ಸಂಕಷ್ಠ ಸಮಯದಲ್ಲಿ ಲಕ್ಷಾಂತರ ವೀಕ್ಷಕರಿಗೆ ಲಭ್ಯವಾಗುತ್ತಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment