ಉಜಿರೆ: ಶ್ರೀ ಧ. ಮಂ ಕಾಲೇಜು (ಸ್ವಾಯತ್ತ) ಇದರ ವಾರ್ಷಿಕ ಸಂಚಿಕೆ ‘ಮನೀಷಾ’ಕ್ಕೆ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಮೊದಲ ಸ್ಥಾನದ ಹೆಗ್ಗಳಿಕೆ ಲಭಿಸಿದೆ.
ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಗೆ ಅತ್ಯುತ್ತಮ ವೇದಿಕೆಯಾದ ಪ್ರಶಸ್ತಿ ವಿಜೇತ 500 ಪುಟಗಳ ಈ ಸಂಚಿಕೆಯಲ್ಲಿ ಸ್ಥಳೀಯ ವೈವಿಧ್ಯತೆ, ಕ್ಷೇತ್ರಾಧ್ಯಯನ, ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳ ಮಾಹಿತಿ, ಬರಹ, ಕಥೆ, ಕವನ, ಲೇಖನ, ಚುಟುಕು, ವ್ಯಂಗ್ಯಚಿತ್ರ, ವಾರ್ಷಿಕ ವರದಿ, ಛಾಯಾಚಿತ್ರ, ನುಡಿಚಿತ್ರ, ಸ್ಥಳೀಯ ಕಲೆ ಸಂಸ್ಕøತಿ ಆಚಾರ ವಿಚಾರ ಪರಂಪರೆಗಳನ್ನು ಒಳಗೊಂಡಿದೆ.
ಕನ್ನಡ, ಸಂಸ್ಕೃತ, ಹಿಂದಿ, ತುಳು, ಕೊಡವ, ಮಲೆಯಾಳಂ, ಕೊಂಕಣಿ, ಇಂಗ್ಲೀಷ್ ಮೊದಲಾದ ಭಾಷೆಗಳಲ್ಲಿ ವಿದ್ಯಾರ್ಥಿಗಳ ಬರವಣಿಗೆಗಳನ್ನು ಈ ಸಂಚಿಕೆ ಒಳಗೊಂಡಿದೆ. ಕೊರೋನಾ ಸಮಯದಲ್ಲಿ ಮನೆಯಲ್ಲಿ ಖಾಲಿ ಕೂರದೇ ವಿದ್ಯಾರ್ಥಿಗಳು ಕ್ರಿಯಾತ್ಮಕ ಬರವಣಿಗೆ ಮೂಲಕ ಕಾಲೇಜಿನ ವಾರ್ಷಿಕ ಸಂಚಿಕೆಗೆ ಬರಹಗಳನ್ನು ನೀಡಿರುವುದು ಪ್ರಶಂಸನೀಯವಾಗಿದೆ.
ಮಂಗಳೂರು ವಿ.ವಿ.ಯಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ಚಂದ್ರ ಹಾಗೂ ಸಂಪಾದಕ ಮಂಡಳಿಯ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು. ಕೊರೋನಾ ಸವಾಲಿನ ನಡುವೆಯೂ ವಾರ್ಷಿಕ ಸಂಚಿಕೆಗೆ 38 ಕಾಲೇಜುಗಳು ಭಾಗವಹಿಸಿರುವುದಾಗಿ ವಿಶ್ವವಿದ್ಯಾಲಯ ತಿಳಿಸಿದೆ.
ಇದುವರೆಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಡೆದ ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜು ನಿರಂತರವಾಗಿ ಮೊದಲ ಮೂರರೊಳಗೆ ಸ್ಥಾನ ಕಾಯ್ದುಕೊಂಡಿದ್ದು, ಮನೀಷಾ ಗುಣಮಟ್ಟದ ಸಂಚಿಕೆ ರೂಪಿಸುವಲ್ಲಿ ಶ್ರಮಿಸುತ್ತಿರುವುದಲ್ಲದೇ ಹಲವಾರು ಬಾರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. 2019-20 ರ ಸಾಲಿನ ಈ ಸಂಚಿಕೆಗೆ ಮತ್ತೊಮ್ಮೆ ಪ್ರಥಮ ಸ್ಥಾನ ದೊರಕಿರುವುದಕ್ಕೆ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಹಾಗೂ ಡಾ. ಬಿ. ಯಶೋವರ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment