ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸುಳ್ಯ ಘಟಕದ ನೂತನ ಕಛೇರಿ ಉದ್ಘಾಟನೆಯು ಭಾನುವಾರ (ಆ.29) ಸುಳ್ಯದ ತಾಲೂಕು ಪಂಚಾಯತ್ ಕಟ್ಟಡದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರಾದ ಎಸ್. ಅಂಗಾರ ಕಛೇರಿಯನ್ನು ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿ ಮಾತನಾಡಿದರು.
'ವಿಶ್ವಾಸವಿಲ್ಲದ ವ್ಯವಸ್ಥೆಯ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು. ಮಾದಕ ದ್ರವ್ಯಜಾಲ ಹಾಗೂ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಂತಹ ಕೃತ್ಯಗಳನ್ನು ನಾವು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಇದನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ನುಡಿದರು.
ಗೃಹರಕ್ಷಕ ಸಿಬ್ಬಂದಿಯ ಸೇವೆಯು ಪೊಲೀಸರಂತೆ ಗುರುತಿಸುವಂತಹದ್ದು. ತುರ್ತು ಪರಿಸ್ಥಿತಿಯಲ್ಲಿ ಸಮಾಜ ರಕ್ಷಕರಾಗಿ ದುಡಿಯುವ ಈ ಸಿಬ್ಬಂದಿಯ ಶ್ರಮವನ್ನು ಸರ್ಕಾರ ಪರಿಗಣಿಸಲಿದೆ. ಅವರಿಗೆ ಸಮಾನ ವೇತನ ನೀಡುವ ಬಗ್ಗೆ ಗೃಹಮಂತ್ರಿ ಮತ್ತು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಪ್ರಯತ್ನಿಸುತ್ತೇನೆ ಎಂದು ಇವರು ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹರಕ್ಷಕರ ಒಟ್ಟು ಸಂಖ್ಯಾಬಲ 1000 ಆಗಿದ್ದು, ಪ್ರಸ್ತುತ 900 ಮಂದಿ ಸಕ್ರಿಯ ಗೃಹರಕ್ಷಕರು ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಜನರ ಹಾಗೂ ಆಸ್ತಿಪಾಸ್ತಿ ರಕ್ಷಣೆ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರವೊಂದರಲ್ಲಿ, ಸುಳ್ಯ, ಬೆಳ್ಳಾರೆ, ಕಡಬ ಮತ್ತು ಸುಬ್ರಹ್ಮಣ್ಯ ಹೀಗೆ ಒಟ್ಟು 4 ಘಟಕ ಇದೆ. ಸುಮಾರು 250ಕ್ಕೂ ಹೆಚ್ಚು ಗೃಹರಕ್ಷಕರು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ 15 ಘಟಕಗಳಲ್ಲಿ ಸುಳ್ಯ ಘಟಕ ಅತ್ಯಂತ ಕ್ರಿಯಾಶೀಲ ಘಟಕವಾಗಿದ್ದು, ಈಗ ಈ ಘಟಕಕ್ಕೆ ಸ್ವಂತ ಸೂರು ದೊರೆತಿರುವುದು ಸಂತಸ ತಂದಿದೆ ಎಂದು ನುಡಿದರು.
1979ರಲ್ಲಿ ಆರಂಭವಾದ ಸುಳ್ಯ ಘಟಕಕ್ಕೆ 42 ವರ್ಷಗಳ ಇತಿಹಾಸವಿದ್ದು, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ನೆರೆ ಸಂರಕ್ಷಣೆ, ಪೊಲೀಸ್ ಬಂದೋಬಸ್ತ್ ಮತ್ತು ಚುನಾವಣೆ ಕರ್ತವ್ಯಗಳಲ್ಲಿ ನಿರಂತರವಾಗಿ ಗೃಹರಕ್ಷಕರು ತೊಡಗಿಸಿಕೊಂಡಿರುತ್ತಾರೆ. ಕಡಬ, ಬೆಳ್ಳಾರೆ, ಸುಬ್ರಹ್ಮಣ್ಯ ಘಟಕಕ್ಕೆ ಕೂಡಾ ಸ್ವಂತ ಕಟ್ಟಡದ ಅವಶ್ಯಕತೆ ಇದ್ದು, ಮಾನ್ಯ ಉಸ್ತುವಾರಿ ಸಚಿವರು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ಹಗಲಿರುಳು ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ ಕಟ್ಟಡದ ವ್ಯವಸ್ಥೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಡಾ|| ಗಿರೀಶ್ ಭಾರದ್ವಾಜ್ ಅವರು ಮಾತನಾಡಿ, ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಪೊಲೀಸರ ನಿರ್ದೇಶನದ ಪ್ರಕಾರ, ಗೃಹರಕ್ಷಕ ದಳ ಕಾರ್ಯ ನಿರ್ವಹಿಸುತ್ತದೆ. ನಿಷ್ಕಾಮ ಸೇವೆಯೇ ಗೃಹರಕ್ಷಕದಳದ ಧ್ಯೇಯವಾಗಿದೆ. ಇವರ ಈ ಸೇವೆ ಸ್ಮರಣೀಯ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್‍ಚಂದ್ರ ಜೋಗಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಭವಾನಿ ಶಂಕರ್, ಗೃಹರಕ್ಷಕ ದಳದ ನಿವೃತ್ತ ಕಂಪೆನಿ ಘಟಕಾಧಿಕಾರಿ ಪದ್ಮಶ್ರೀ ಪುರಸ್ಕøತರಾದ ಡಾ|| ಗಿರೀಶ್ ಭಾರಧ್ವಾಜ್ ಇವರುಗಳು ಭಾಗವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಪ ಸಮಾದೇಷ್ಟರಾದ ರಮೇಶ್ ಇವರು ಸ್ವಾಗತಿಸಿದರು. ಅಚ್ಯುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್ ಶೆಟ್ಟಿ ಇವರು ವಂದಿಸಿದರು, ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸುಳ್ಯ ಘಟಕದ ಮಾಜಿ ಘಟಕಾಧಿಕಾರಿ ಎಚ್. ಉಮ್ಮರ್ ಮತ್ತು ರಾಮಕೃಷ್ಣ, ಹಾಗೂ ಗೃಹರಕ್ಷಕರು ಮತ್ತು ಗೃಹರಕ್ಷಕಿಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಳ್ಯ ಘಟಕಕ್ಕೆ ಮತ್ತು ಸುಬ್ರಹ್ಮಣ್ಯ ಘಟಕಕ್ಕೆ ಇನ್‍ಫೋಸಿಸ್ ವತಿಯಿಂದ ದೊರೆತ ಕಂಪ್ಯೂಟರನ್ನು ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್ ಶೆಟ್ಟಿ ಮತ್ತು ಸುಬ್ರಹ್ಮಣ್ಯ ಘಟಕದ ಹಿರಿಯ ಗೃಹರಕ್ಷಕ ಹರೀಶ್ಚಂದ್ರ ಇವರಿಗೆ ಹಸ್ತಾಂತರಿಸಲಾಯಿತು.
Post a Comment