ಕಾಸರಗೋಡು: ಸತ್ಯದ ಮಹತ್ವದ ನೆಲೆಯನ್ನು ಕೇವಲ ಕಾವ್ಯಗಳಲ್ಲಿ ಓದದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವ ತಲೆಮಾರು ಕೇವಲ ಆಧುನಿಕ ಮಾಧ್ಯಮಗಳಿಗೆ ಮೊರೆ ಹೋಗದೆ ಸಮಾಜ, ಓದು ಮುಂತಾದ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದು ಒಳಿತು. `ಸತ್ಯವೆಂಬುದೆ ಹರನು, ಹರನೆಂಬುದೇ ಸತ್ಯ’ ಎಂಬ ಮಾತು `ಸತ್ಯ ಮತ್ತು ಭಗವಂತ’ ಎರಡೂ ಬೇರೆ ಬೇರೆಯಲ್ಲ ಎಂಬುದನ್ನು ಸಾರಿ ಹೇಳುತ್ತದೆ. ಸತ್ಯದ ಮಹತ್ವ ಮತ್ತು ಸತ್ಯ-ಸುಳ್ಳುಗಳ ನೆಲೆಯನ್ನು ತಿಳಿದುಕೊಳ್ಳುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಬಹಳ ಮುಖ್ಯ ಎನ್ನುವುದನ್ನು `ಹರಿಶ್ಚಂದ್ರ ಕಾವ್ಯ’ದ ಆಧಾರದ ಮೇಲೆ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಪಿ.ಎನ್ ಮೂಡಿತ್ತಾಯ ಅವರು ತಿಳಿಸಿಕೊಟ್ಟರು.
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ನೇತೃತ್ವದಲ್ಲಿ ಕಾಸರಗೋಡು ಕನ್ನಡ ಬಳಗ ಇದರ ಸಹಯೋಗದೊಂದಿಗೆ ನಡೆದ ಮಾನಸೋಲ್ಲಾಸ ಸರಣಿಯ ಐದನೆಯ ಜಾಲಗೋಷ್ಠಿ ಕಾರ್ಯಕ್ರಮದಲ್ಲಿ `ಹರಿಶ್ಚಂದ್ರ ಕಾವ್ಯದಲ್ಲಿ ಸತ್ಯ ಮತ್ತು ಸುಳ್ಳಿನ ನೆಲೆ’ ಎಂಬ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಭಾಗದ ಪ್ರಭಾರ ಮುಖ್ಯಸ್ಥ ಡಾ. ರತ್ನಾಕರ ಮಲ್ಲಮೂಲೆ ಮಾತನಾಡಿ, `ಹರಿಶ್ಚಂದ್ರ ಕಾವ್ಯ’ದಲ್ಲಿ ರಾಘವಾಂಕ ಕವಿ ತನ್ನ ಸ್ವಂತಿಕೆಯನ್ನು ಮೆರೆದಿದ್ದಾನೆ. ಈ ಕಾವ್ಯ ಸಾರ್ವಕಾಲಿಕವಾದ ಮೌಲ್ಯದ ಸಂದೇಶವನ್ನು ಸಾರುತ್ತದೆ ಎಂದರು.
ಕನ್ನಡ ವಿಭಾಗದ ಪ್ರಾಧ್ಯಾಪಿಕೆಯಾದ ವೇದಾವತಿ ಎಸ್ ಸ್ವಾಗತಿಸಿ, ದ್ವಿತೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾದ ಗಿರೀಶ್ ಕೃಷ್ಣ ವಂದಿಸಿದರು. ತೃತೀಯ ಪದವಿ ವಿದ್ಯಾರ್ಥಿನಿಯಾದ ಅನನ್ಯಾ ಬಿ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು, ನಾಡಿನ ಬೇರೆ ಬೇರೆ ಭಾಗದ ಸಾಹಿತ್ಯಾಸಕ್ತ ಬಂಧುಗಳು, ಸಹೃದಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Post a Comment