ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೇರಿಹಿಲ್‌ನಲ್ಲಿ ಭಾನುವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ|| ಮುರಲೀಮೋಹನ ಚೂಂತಾರು ಇವರು ಧ್ವಜಾರೋಹಣ ನೆರವೇರಿಸಿ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಮಹಾತ್ಮಾಗಾಂಧಿ, ಸರ್ದಾರ್ ಪಟೇಲ್, ಸುಭಾಸ್‍ಚಂದ್ರ ಬೋಸ್ ಮುಂತಾದ ಮಹನೀಯರ ತ್ಯಾಗ ಬಲಿದಾನದಿಂದ ನಮಗೆ 74 ವರ್ಷಗಳ ಹಿಂದೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದೆ. ನಮಗೆ ದೊರೆತ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರ ಎಂದು ಯುವಜನರು ತಿಳಿದುಕೊಂಡು ತಪ್ಪು ದಾರಿ ಹಿಡಿಯಬಾರದು. ಕೊರೋನ ಸಂಕಷ್ಟದ ಸಮಯದಲ್ಲೂ ಗೃಹರಕ್ಷಕರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಮಾದೇಷ್ಟರು ನುಡಿದರು.
75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಜೊತೆಗೆ ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ಅರಿತು ನಿಭಾಯಿಸಿದಲ್ಲಿ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರೊ. ಸುರೇಶ್‌ನಾಥ್ ಅವರು ಮಾತನಾಡಿ, ನಮಗೆ ಸ್ವಾತಂತ್ರ್ಯ ತಂದು ಕೊಟ್ಟ ಹಿರಿಯರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗೃಹರಕ್ಷಕದಳದ ಸದಸ್ಯರು ಪ್ರ್ರಾಮಾಣಿಕವಾಗಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್., ಗೃಹರಕ್ಷಕ ದಳ ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೈರ್, ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿ ಪಿ.ವಸಂತ್ ಕುಮಾರ್, ಹಾಗೂ ಎಲ್ಲಾ ಗೃಹರಕ್ಷಕ/ ಗೃಹರಕ್ಷಕಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق