ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಂಗಳೂರು-ಮಂಗಳೂರು ವಿಸ್ಟಾಡೋಮ್‌ ಬೋಗಿ ಪ್ರಯಾಣಕ್ಕೆ ಬುಕಿಂಗ್‌ ಆರಂಭ: ಜು.7ರಿಂದ ಸಂಚಾರ ಶುರು

ಬೆಂಗಳೂರು-ಮಂಗಳೂರು ವಿಸ್ಟಾಡೋಮ್‌ ಬೋಗಿ ಪ್ರಯಾಣಕ್ಕೆ ಬುಕಿಂಗ್‌ ಆರಂಭ: ಜು.7ರಿಂದ ಸಂಚಾರ ಶುರು



ಮಂಗಳೂರು: ಯಶವಂತಪುರ- ಮಂಗಳೂರು ವಿಶೇಷ ರೈಲಿಗೆ ಉದ್ದೇಶಿತ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್‌ ಬೋಗಿಗಳು ಜು. 7ರಿಂದ ಸೇರ್ಪಡೆಗೊಳ್ಳಲಿದ್ದು, ಶನಿವಾರದಿಂದ (ಜು.3) ಬುಕಿಂಗ್‌ ಆರಂಭವಾಗಿದೆ. ಯಶವಂತಪುರದಿಂದ ಮಂಗಳೂರಿಗೆ 1,470 ರೂ. ದರ ನಿಗದಿಪಡಿಸಲಾಗಿದೆ.


ಪ್ರಕೃತಿ ಹಾಗೂ ಕಡಲತೀರದ ಸೌಂದರ್ಯದಿಂದಲೇ ಹೆಸರುವಾಸಿಯಾಗಿರುವ ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗದಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್‌ ಕೋಚ್‌ಗಳನ್ನು ಜೋಡಿಸಲಾಗುತ್ತಿದೆ. ಬೆಂಗಳೂರು-ಮಂಗಳೂರು ನಡುವೆ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರ ಪಾಲಿಗೆ ಸ್ವರ್ಗ. ಕಳೆದ ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಛಾವಣಿ, ಕಿಟಕಿಗಳನ್ನು ಅಳವಡಿಸುವಂತೆ ಸಾಕಷ್ಟು ಮಂದಿ ಮನವಿ ಮಾಡಿದ್ದರು. ಅದರ ಪ್ರತಿಫಲದಿಂದ ವಿಸ್ಟಾಡೋಮ್‌ ರೈಲು ಸಂಚಾರ ಆರಂಭಿಸುತ್ತಿದೆ.


ಪ್ರಾಕೃತಿಕ ಸೌಂದರ್ಯ

ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಹೋಗುವ ಈ ರೈಲುಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ. ಮಾರ್ಗಮಧ್ಯದಲ್ಲಿಅರಣ್ಯ, ಜಲಪಾತ, ಸುರಂಗ, ಸೇತುವೆಗಳ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು. ಸದ್ಯ ಮಳೆಗಾಲ ಕೂಡ ಆರಂಭವಾಗಿರುವುದರಿಂದ ಪ್ರಯಾಣ ಅಹ್ಲಾದವನ್ನು ಉಂಟುಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.


ಯಾವ ರೈಲುಗಳಲ್ಲಿ ಈ ವ್ಯವಸ್ಥೆ?

ವಾರಕ್ಕೆ 3 ಬಾರಿ ಚಲಿಸುವ ಯಶವಂತಪುರ- ಕಾರವಾರ ವಿಶೇಷ ರೈಲು (ರೈಲ್ವೆ ನಂ. 06211 /06212), ವಾರಕ್ಕೆ 3 ಬಾರಿ ಚಲಿಸುವ ಯಶವಂತಪುರ- ಮಂಗಳೂರು ಜಂಕ್ಷನ್‌ ವಿಶೇಷ ರೈಲು (ರೈಲ್ವೆ ನಂ. 06575/06576), ಯಶವಂತಪುರ -ಮಂಗಳೂರು (ರೈಲ್ವೆ ನಂ. 06539) ಹಾಗೂ ಮಂಗಳೂರು ಜಂಕ್ಷನ್‌-ಯಶವಂತಪುರ ಎಕ್ಸ್‌ಪ್ರೆಸ್‌ನಲ್ಲಿ (ರೈಲ್ವೆ ನಂ. 06540) ವಿಸ್ಟಾಡೋಮ್‌ ಬೋಗಿ ಸೇರ್ಪಡೆಯಾಗಲಿವೆ.


ಪ್ರಯಾಣಿಕರ ಕಣ್ಣಿಗೆ ಹಬ್ಬ: ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗದಲ್ಲಿ ಸುಬ್ರಹ್ಮಣ್ಯ ರಸ್ತೆ- ಸಕಲೇಶಪುರ ಘಟ್ಟಪ್ರದೇಶ ನಡುವಿನ 55 ಕಿ.ಮೀ. ವ್ಯಾಪ್ತಿ ಹಸಿರುಮಯ ಅರಣ್ಯ, ಜಲಪಾತಗಳು, ಸೇತುವೆಗಳ ವಿಹಂಗಮ ನೋಟವನ್ನು ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು.


ಕೋಚ್‌ ಹೇಗಿದೆ?

ವಿಸ್ಟಾಡೋಮ್‌ ಕೋಚ್‌ ಗಾಜಿನ ದೊಡ್ಡ ಚಾವಣಿ ಒಳಗೊಂಡಿದೆ. 180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳು ಇರಲಿವೆ. ಜಿಪಿಎಸ್‌ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋವೇವ್ ಓವನ್‌, ಪುಟ್ಟ ರೆಫ್ರಿಜರೇಟರ್‌ಗಳು ಸೇರಿದಂತೆ ಹಲವು ಸೌಲಭ್ಯಗಳಿವೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم