ಮುಂಗಾರಿನ ಈ ತುಂತುರು ಮಳೆ
ಜುಳು _ಜುಳು ಹರಿಯುವ ನೀರಿನ ಸಂಗೀತದ ಸೆಳೆ
ಹಚ್ಚ ಹಸುರಾಗಿ ಬೆಳೆದು ನಿಂತಿರುವ ಭತ್ತದ ಕಳೆ
ಕರುನಾಡಿಗೆ ಬಂದಿದೆ ಮುಂಗಾರು ಕಳೆ||
ಕಾರ್ಮುಗಿಲು ಕರಗಿ ಧೋ....
ಆಗಮಿಸಿತು ವರ್ಷಧಾರೆಯು
ಜೀವಸಂಕುಲ ಸಂಭ್ರಮದಿ ಬೆರಗಾದವು
ಮಳೆಹನಿಯ ತಲ್ಲಣಕ್ಕೆ ಮರಗಿಡಗಳು ಚಿಗುರಿದವು
ಈಗ ಎಲ್ಲವೂ ತನ್ಮಯ
ಹಸಿರುಡುಗೆಯಲ್ಲಿ ಮಿಂಚಿ
ಒಡಲು ತುಂಬಿಕೊಂಡ ಧರಣಿ
ರಂಗಿನೋಕುಳಿ ಬರೆದ ಸುಮಗಳ ಮೇಳ||
ಖಾಜಾಣ ಕೋಗಿಲೆಗಳ ಝೇಂಗಾರ
ಸೌಂದರ್ಯದಿ ಜಗ ಬೆರಗಾಗುವ
ಗರಿಬಿಚ್ಚಿ ನಲಿಯುವ ನವಿಲುಗಳ ನರ್ತನ
ಎಲ್ಲೆಂದರಲ್ಲಿ ಹೊಸತನ , ಚೈತನ್ಯ
ಬಿರುಗಾಳಿಗೆ ನರ್ತಿಸುವ ದಟ್ಟವಾದ ಮರಗಳು
ಧುಮ್ಮಿಕ್ಕಿ ಹರಿಯುವ ನದಿ, ಜಲಪಾತಗಳು||
ಭುವಿತುಂಬ ನಿಟ್ಟುಸಿರ ಮೂಕಮಾಯೆ
ಕಂಗಳು ತಣಿಯುವ ಸಂಭ್ರಮದ ಛಾಯೆ
ಅಮೃತಧಾರೆಯ ಸ್ಪರ್ಶದಿ ಇಳೆ ಆಗುವುದು ಧನ್ಯ
ಮುಂಗಾರಿನ ಸೊಬಗು ಕವಿತೆಯಲ್ಲಿ ವರ್ಣಿಸಲಾಗದಷ್ಟು ಅನನ್ಯ....!!||
✍️ ಕು/ಸಂಧ್ಯಾ ಕುಮಾರಿ ಎಸ್, ವಿಟ್ಲ .
Post a Comment