ಉಡುಪಿ ಶ್ರೀ ಸೋದೆ ಮಠಾಧೀಶರ ಮತ್ತೊಂದು ಕ್ರಾಂತಿಕಾರ್ಯದ ತ್ರಿವಿಕ್ರಮ ಹೆಜ್ಜೆ
ಉಡುಪಿ ಅಷ್ಟಮಠಗಳ ತರುಣ ಯತಿಗಳಲ್ಲಿ ಓರ್ವರಾಗಿರುವ, ಅತ್ಯಂತ ತಾರುಣ್ಯದಲ್ಲೇ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಮೂಲಕ ಸಮಸ್ತ ಕೃಷ್ಣ ಭಕ್ತರೂ ಹುಬ್ಬೇರಿಸುವಂತೆ ಮಾಡಿದ ಶ್ರೀ ಸೋದೆ ಮಠಾಧೀಶರಾದ ಪರಮಪೂಜ್ಯ ಶ್ರೀಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮತ್ತೊಂದು ಕ್ರಾಂತಿ ಕಾರ್ಯದ ಹೆಜ್ಜೆ ಇಡುವ ಮೂಲಕ ಮತ್ತೊಮ್ಮೆ ನಾಡಿನ ಗಮನಸೆಳೆದಿದ್ದಾರೆ.
ಕುಂದಾಪುರ ತಾಲೂಕಿನ ಹೂವಿನಕೆರೆಯಲ್ಲಿ (ಪ್ರಾತಃ ಸ್ಮರಣೀಯರಾದ ಶ್ರೀ ವಾದಿರಾಜ ಗುರು ಸಾರ್ವಭೌಮರ ಜನ್ಮಭೂಮಿ) ಶ್ರೀ ಮಠದ ಅಧೀನದಲ್ಲಿರುವ 116 ಎಕ್ರೆ ಅಮೂಲ್ಯ ಜಮೀನಿನಲ್ಲಿ ಭವಿಷ್ಯದ ಉದ್ದೇಶಗಳಿಗಾಗಿ ಶ್ರೀಗಂಧ ಸಾಗುವಾಗಿ ಹೆಬ್ಬಲಸು ಹಲಸು ಮೊದಲಾದ ವೃಕ್ಷಸಂಕುಲಗಳನ್ನು ಪೋಷಿಸಿ ಬೆಳೆಸುವ ಮಹತ್ವದ ಕೆಲಸಕ್ಕೆ ಶ್ರೀಪಾದರು ನಿನ್ನೆ (ಶುಕ್ರವಾರ 16/7/2021) ನಾಂದಿ ಹಾಕಿದ್ದಾರೆ. ಪ್ರಕೃತಿ ಪ್ರಿಯರು, ಸಸ್ಯಪ್ರೇಮಿಗಳಿಗೆ ಇದೊಂದು ಹೆಚ್ಚು ಸಂತೋಷ ಕೊಡುವ ಸುದ್ದಿ. ಅದೇರೀತಿ ನಾಡಿನ ಎಲ್ಲ ಮಠ ಮಾನ್ಯರಿಗೂ ಅನುಕರಣೀಯವಾದ ಕಾರ್ಯಕ್ರಮ.
ಭಾರತವನ್ನು ಆತ್ಮನಿರ್ಭರಮಾಡಬೇಕೆಂಬುದು ಹೆಮ್ಮೆಯ ಪ್ರಧಾನಿ ಶ್ರೀ ಮೋದಿಯವರ ಸಂಕಲ್ಪ. ಆ ಹೊತ್ತಲ್ಲಿ ನಮ್ಮ ಮಠಗಳೂ ಆತ್ಮನಿರ್ಭರವಾಗಲೇಬೇಕು.
ಇವತ್ತು ನಾಡಿನಲ್ಲಿ ನೂರಾರು ಮಠಗಳು ಸಾವಿರಾರು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡು ಕೆಲಸಮಾಡುತ್ತಿವೆ. ಬಹುಕಾಲ ಇಂತಹ ಲೋಕೋತ್ತರ ಕಾರ್ಯಗಳು ನಡೆಯಬೇಕು. ಆದರೆ ಅವುಗಳಿಗಾಗಿ ಆರ್ಥಿಕ ಸಂಪನ್ಮೂಲಗಳನ್ನೂ ಹೊಂದಿಸಿಕೊಳ್ಳಬೇಕು. ಆ ಹಿನ್ನೆಲೆಯಲ್ಲಿ ಇಂಥಾ ದೂರಗಾಮಿ ಕಾರ್ಯಗಳು ಅತೀ ಅವಶ್ಯವಾಗ್ತವೆ.
ನಮ್ಮಲ್ಲಿ ಅನೇಕ ಪ್ರಾಚೀನ ಮಠಗಳಲ್ಲಿ ಇನ್ನೂ ಒಂದಷ್ಟು ಭೂಮಿಗಳು ಉಳಿದಿರುವುದು ಸಮಾಧಾನದ ಸಂಗತಿ (ಭೂ ಮಸೂದೆ ಕಾನೂನಿನಿಂದಾಗಿ ಉಡುಪಿಯ ಮಠಗಳೂ ಸೇರಿದಂತೆ ನಾಡಿನ ನೂರಾರು ಮಠಗಳ ಸಾವಿರಾರು ಎಕರೆಗಟ್ಟಲೆ ಭೂಮಿ ಪರಭಾರೆ ಆಯಿತು. ಇರಲಿ ಬಿಡಿ ಅದರಿಂದ ಒಂದಿಷ್ಟು ಕುಟುಂಬಗಳಿಗೆ ಬದುಕು ಲಭಿಸಿದೆ) ಹಾಗೆ ಉಳಿದ ಭೂಮಿಯಲ್ಲಿ ಈ ರೀತಿ ಕಾಡು ಬೆಳೆಸುವುದರಿಂದ ಪ್ರಕೃತಿಗೂ ಒಂದಷ್ಟು ಶಕ್ತಿ ತುಂಬಿದಂತಾಗುತ್ತದೆ; ಹಾಗೂ ಮಠಗಳ ಭವಿಷ್ಯಕ್ಕೆ ಒಂದಷ್ಟು ಆರ್ಥಿಕ ಸಂಪನ್ಮೂಲಗಳೂ ದೊರೆಯುತ್ತವೆ. ವಾಣಿಜ್ಯದ (ಆರ್ಥಿಕ) ಉದ್ದೇಶಕಾಗಿ ಹಲಸು ಹೆಬ್ಬಲಸು ಸಾಗುವಾನಿ, ರಕ್ತಚಂದನ, ಶ್ರೀಗಂಧದಂಥಹ ಮರಗಳನ್ನು ಬೆಳೆಸುವುದರಿಂದ ಬೇರೆ ಯಾವ ಹೂಡಿಕೆಗಿಂತಲೂ ಹೆಚ್ಚು ಆದಾಯ ದೊರೆಯುವುದರಲ್ಲಿ ಸಂದೇಹವೇ ಇಲ್ಲ. ಜೊತೆಗೆ ಪ್ರಕೃತಿಯ ಪೋಷಣೆ ಮಾಡಿದ ಆತ್ಮ ಸಂತೋಷ, ಅದು ಬೆಲೆಕಟ್ಟಲಾಗದ್ದು. ಅದರೆ ಜೊತೆಗೆ ಒಂದಷ್ಟು ಹಣ್ಣುಕೊಡುವ ಇತರೆ ಮರಗಳನ್ನೂ ಆ ಪ್ರದೇಶಗಳಲ್ಲಿ ಬೆಳೆಸಿದರೆ ಅಸಂಖ್ಯ ಪಕ್ಷಿ ಪ್ರಾಣಿ ಸಂಕುಲಗಳಿಗೆ ಜೀವಪೋಷಣೆ ಕೊಟ್ಟ ಪಾರಮಾರ್ಥಿಕ ಮಹಾಪುಣ್ಯವೂ ಲಭ್ಯ (ಇಂದ್ರದ್ಯುಮ್ನ ರಾಜನ ಕಥೆ ನೆನಪಾಗ್ತದೆ)
ಇಂಥ ಎಲ್ಲ ಅಮೂಲ್ಯ ಕಾರಣಗಳಿಂದ ಶ್ರೀ ಸೋದೆ ಮಠಾಧೀಶರು ನಡೆಸಿದ ಚಿಂತನೆ ಹಾಗೂ ಮಠದ ಲಭ್ಯ ಜಮೀನಿನಲ್ಲಿ ಕಾಡುಬೆಳೆಸುವ ಕೆಲಸಕ್ಕೆ ಎಷ್ಟು ಅಭಿವಂದನೆ ಹೇಳಿದರೂ ಕಡಿಮೆ.
ಕಳಕೊಂಡ ಭೂಮಿ ಬಹಳ ಇರಬಹುದು. ಆದರೆ ಉಳಿದದ್ದನ್ನು ಉಳಿಸಿಕೊಳ್ಳುವ ಮತ್ತು ಅದನ್ನು ಹಾಗೇ ಪಾಳುಬಿಡದೇ ಹೆಚ್ಚು ಸದ್ಬಳಕೆ ಮಾಡಿಕೊಳ್ಳುವ ಕಾರ್ಯಗಳಿಗೆ ಹೆಚ್ಚುಗಾರಿಕೆ ಇದೆ.
ನಾಡಿನ ಎಲ್ಲ ಮಠಗಳೂ ಇಂಥಹ ಆತ್ಮನಿರ್ಭರೋಪಾಯಗಳನ್ನು ಮಾಡಿಕೊಂಡು ತಾವು ಸುದೃಢ, ಸಶಕ್ತ ಸ್ವಾವಲಂಬಿ ಆಗುವುದರ ಜೊತೆಗೆ ದೇಶವನ್ನೂ ಸಮೃದ್ಧಗೊಳಿಸುವ ಇಂಥಹ ಮಹತ್ವದ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಹಾರೈಸುತ್ತಾ, ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಗೆ ಅಭಿನಂದನಾಪೂರ್ವಕ ಅಭಿವಂದನೆಗಳನ್ನು ಸಲ್ಲಿಸುತ್ತೇನೆ. ಶ್ರೀಗಳು ಈಗ ಹಮ್ಮಿಕೊಂಡ ಕಾರ್ಯದಲ್ಲಿ ಅತ್ಯಪೂರ್ವ ಯಶಸ್ಸು ದೊರೆಯಲಿ. ಸದ್ಯದಲ್ಲೇ ಆ ಭೂಮಿಯಲ್ಲಿ ಸುಂದರ ಸಮೃದ್ಧ ವನ ಮೂಡಿಬರಲಿ.
-ಜಿ ವಾಸುದೇವ ಭಟ್ ಪೆರಂಪಳ್ಳಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق