2019ರ ಡಿಸೆಂಬರಿನಿಂದ ಆರಂಭವಾದ ಅಲೆ ಈ ಕ್ಷಣ ತನಕ ಅಲೆದಾಡುತ್ತಲೇ ಇದೆ.ಭಯ ಆತಂಕ ತಲ್ಲಣ ಇನ್ನು ಏನೇನೋ ಆಗುತ್ತಲೇ ಇದೆ. ನಮ್ಮ ಸರಕಾರಗಳು ಜೀವ-ಜೀವನಕ್ಕಾಗಿ ಅನೇಕ ಮುಂಜಾಗರೂಕತೆ ಕ್ರಮ ಕೈಗೊಂಡರೂ ಬುದ್ಧಿ ಜೀವಿಗಳಾದ ನಾವು ಭಯಭೀತರಾಗಿ ಅಂತೆ-ಕಂತೆಗಳ ಅಲೆಯಲ್ಲೇ ನಾಳೆ ಯಾವ ಅಲೆಯೋ ಎಂಬ ಭಯದಲ್ಲೇ ಇದ್ದೇವೆ.
ನಮ್ಮ ಶಾಲಾ ಕಾಲೇಜಿನ ಮಕ್ಕಳು ಅಂದರೆ ಭವಿಷ್ಯತ್ತಿನ ಶಿಲ್ಪಿಗಳು ಶಾಲಾ ಕಾಲೇಜುಗಳ ದಾರಿಯನ್ನೇ ಮರೆತು ಆನ್ಲೈನ್ ಶಿಕ್ಷಣದ ಅಲೆಯಲ್ಲಿ ಓಲಾಡುತ್ತಿರುವರು. ಕೆಲವರಿಗಂತೂ ಸಂತೋಷ....ಪರೀಕ್ಷೆ ಇಲ್ಲ...ನಾವು ಪಾಸ್...ಕೆಲವರು ಪರೀಕ್ಷೆ ಇದ್ದರೂ ನಪಾಸು ಇಲ್ಲ....ನಾ ಪಾಸು ಎಂಬ ಖುಷಿ.ಇದರ ಪರಿಣಾಮ ಏನು ?ಕಾದು ನೋಡಬೇಕಾಗಿದೆ.
ಯಾವ ಅಲೆ ಬರುತ್ತದೆ ಎಂಬ ಆತಂಕದಲ್ಲಿ ಶಾಲೆ ಆರಂಭವನ್ನು ತಡೆಹಿಡಿಯಬಾರದು. ಒಂದು ವೇಳೆ ಯಾವುದೋ ಅಲೆಯಿಂದ ಮಕ್ಕಳಿಗೆ ತೊಂದರೆ ಉಂಟಾಗುತ್ತದೆ ಎಂದಾದರೆ ಆಗ ಶಾಲೆಗಳ ಮುಚ್ಚಬಹುದು. ಜಾಗೃತಿ ಕ್ರಮ ಕೈಗೊಳ್ಳಲೇ ಬೇಕು. ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿ ಸರಕಾರಕ್ಕೆ ಜೂನ್ 22/2021 ಮಂಗಳವಾರ ಮಧ್ಯಂತರ ವರದಿಯನ್ನು ಸಲ್ಲಿಸಿದೆ ಎಂಬ ವಿಚಾರ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.
ಹೌದು ಶಾಲೆ ಆರಂಭ ಆಗಲೇ ಬೇಕು. ದೇಶದ ಭವಿಷ್ಯ ರೂಪುಗೊಳ್ಳುವುದು ತರಗತಿಗಳ ಕೊಠಡಿಗಳಲ್ಲಿ. ಏನೇ ತಂತ್ರ ಜ್ಞಾನವಿದ್ದರೂ ಗುರು ಕಲಿಸುವ ಪಾಠವೇ ಜೀವಂತವಾದುದು. ಆ ಅನುಸಂಧಾನದ ಶ್ರೇಷ್ಠತೆಯೇ ಬೇರೆ.
ಭೌತಿಕವಾಗಿ ಶಾಲೆಗಳ ಆರಂಭಿಸದೇ ಇದ್ದರೆ ಏನಾಗಬಹುದೆಂಬ ಆಲೋಚನೆ ನಾವು ಶಾಲಾ ಕಾಲೇಜುಗಳ ಮುಚ್ಚಿದಂದಿನ ಆ ದಿನದಿಂದ ಈ ಕ್ಷಣದವರೆಗೆ ಹಾಗೆ-ಹೀಗೆ ಅಲೆಗಳ ಹೊಡೆತದಲ್ಲೇ ಓಲಾಡುತ್ತಿದ್ದೇವೆ.
ಈಗಾಗಲೇ ಮಕ್ಕಳ ಬದುಕಿನ ಹೆಜ್ಜೆ ತಪ್ಪಿದೆ. ಮಾನಸಿಕ, ದೈಹಿಕ, ಸಾಮಾಜಿಕ ದುಷ್ಪರಿಣಾಮಗಳು ಮಿತಿ ಮೀರಿರುವುದನ್ನು ಸಮಿತಿ ಉಲ್ಲೇಖಿಸಿದೆ. ಶಾಲೆ ಆರಂಭದ ಬಗ್ಗೆ ರಾಜ್ಯಮಟ್ಟದಲ್ಲಿ ಒಂದು ತೀರ್ಮಾನ ಕೈಗೊಳ್ಳುವ ಬದಲು ಜಿಲ್ಲೆ, ತಾಲೂಕು ಮಾತ್ರವಲ್ಲದೆ ಗ್ರಾಮಮಟ್ಟದ ತೀರ್ಮಾನಕ್ಕೂ ಅವಕಾಶ ನೀಡಲೇ ಬೇಕೆಂದು ವರದಿ ಸಲಹೆ ನೀಡಿರುವುದು ಅಭಿನಂದನೀಯ.
ಪ್ರಮುಖ ಸಲಹೆಗಳತ್ತ ಗಮನ ಹರಿಸಿದಾಗ -
* ದಿನ ಬಿಟ್ಟು ದಿನ ಇಲ್ಲವೇ ಪೂರ್ವಾಹ್ನ,ಅಪರಾಹ್ನ ಹೀಗೆ ಪಾಳಿಯಲ್ಲಿ ತರಗತಿಗಳ ನಡೆಸ ಬಹುದು.
* ಹಾಜರಾಗುವ ಪ್ರತಿ ಮಗುವಿಗೆ ಎರಡುಲಕ್ಷ ರೂಗಳ ಆರೋಗ್ಯ ವಿಮೆ ಮಾಡಿಸ ಬೇಕು
* ಶಿಕ್ಷಕರು ಸಿಬ್ಬಂದಿ, ಶಾಲಾ ವಾಹನ ಚಾಲಕರಿಗೆ ಕಡ್ಡಾಯ ಲಸಿಕೆ,
* ಜಿಲ್ಲಾಮಟ್ಟದಲ್ಲಿ ಶಾಲಾ ಸುರಕ್ಷತಾ ಪರಿಶೀಲನಾ ಸಮಿತಿ ರಚಿಸುವುದು....ಹೀಗೆ ಹತ್ತುಹಲವು ಮುಂಜಾಗರೂಕತಾ ಸಲಹೆಗಳು ಇಂದು ಸರಕಾರದ ಮುಂದಿದೆ.
ಆಸ್ಪತ್ರೆಗಳಲ್ಲಿ ಲಸಿಕೆ ಬೇಡ ಎಂದ ತಜ್ಞರ ಸಮಿತಿ ಶಾಲೆ, ಕಲ್ಯಾಣ ಮಂಟಪ ಹಾಗೂ ಮೊಬೈಲ್ ಕೇಂದ್ರ ಬಳಸಲು ಕೂಡಾ ಸಲಹೆ ನೀಡಿರುವುದು ಸಕಾಲಿಕ ಸಕಾರಾತ್ಮಕವೂ ಆಗಿದೆ. ಎಲ್ಲಾ ವಯೋಮಾನದವರಿಗೂ ನಾಲ್ಕು ತಿಂಗಳ ಒಳಗೆ ಲಸಿಕೆ ಸಿಗುವಂತೆ ಮಾಡಬೇಕೆಂದು ಸಮಿತಿ ಶಿಫಾರಸ್ಸು ಮಾಡುವ ಮೂಲಕ ಮುಂದಿನ ಯಾವುದೇ ಅಲೆಗಳಿಗೆ ನಾವು ಸನ್ನದ್ಧರಾಗಬೇಕೆಂಬ ಮಾರ್ಗದರ್ಶನವನ್ನೂ ನೀಡಿರುವುದು ಉಲ್ಲೇಖನೀಯ.
ಬಾಲ ಆರೈಕೆ ಸುರಕ್ಷಾ ಕೇಂದ್ರಗಳ ಸ್ಥಾಪನೆಯ ಮೂಲಕ ಪಾಸಿಟಿವ್ ತಾಯಿ ಹಾಗೂ ಆರೈಕೆ ಮಾಡುವವರು ಬಂದು ಉಳಿದುಕೊಳ್ಳುವುದಕ್ಕೆ ಅನುಕೂಲ ಕಲ್ಪಿಸಬೇಕು... ಮಕ್ಕಳನ್ನು ಕೋಣೆಯೊಳಗೆ ತಡೆಯಲು ಸಾಧ್ಯವಿಲ್ಲದ ಕಾರಣ ಈ ಕೇಂದ್ರಗಳಲ್ಲಿ ಮಗುವಿನ ಓಡಾಟಕ್ಕೆ ಸಾಕಷ್ಟು ಮುಕ್ತ ಸ್ಥಳ ಹಾಗೂ ಆಟವಾಡಲು ಅವಕಾಶ ಲಭ್ಯವಿರಬೇಕೆಂದು ಸಮಿತಿ ವಿಶೇಷವಾಗಿ ಉಲ್ಲೇಖಿಸಿದೆ.
ಒಟ್ಟಿನಲ್ಲಿ ಸಮಿತಿ ನೀಡಿದ ಅನೇಕ ಸಲಹೆಗಳು ಮೌಲಿಕವಾಗಿವೆ. ಶಾಲೆ ಆರಂಭದ ಬಗ್ಗೆ ಆದಷ್ಟು ಶೀಘ್ರವಾಗಿ ಹಾಗೂ ಎಚ್ಚರಿಕೆಯಿಂದ ಒಂದು ನಿರ್ಧಾರಕ್ಕೆ ಬರಲೇ ಬೇಕಾಗಿದೆ. ಯಾವತ್ತೋ ಈ ಕಾರ್ಯ ಆಗಬೇಕಾಗಿತ್ತು.ಯಾವುದೇ ದೃಢನಿರ್ಧಾರ ಹಾಗೂ ಆತ್ಮವಿಶ್ವಾಸಕ್ಕೆ ಕೀಲಿ ಗೈ ಶಿಕ್ಷಣ, ಶಾಲೆ, ಗುರುಗಳು ಹೆತ್ತವರು ಪೋಷಕರು ಹಾಗೂ ಸಮಾಜ.
ಒಬ್ಬ ನಿವೃತ್ತ ಶಿಕ್ಷಕನಾಗಿ ಮಕ್ಕಳೊಂದಿಗೆ ಈಗಲೂ ಮುಖಾಮುಖಿ ಸಂಪರ್ಕ ಇಟ್ಟು ಕೊಂಡವನಾಗಿ ನಾನು ಹೇಳುವುದೇನೆಂದರೆ ಸರಕಾರದ ಕಾನೂನು ಆದೇಶ ಎಚ್ಚರಿಕೆಯ ಕ್ರಮಗಳು ಮಾನ್ಯವೇ. ಆದರೆ ಶಾಲಾ ಕಾಲೇಜು, ದೇವಾಲಯ ಆರಾಧನಾ ಕೇಂದ್ರಗಳನ್ನು ಬಂದ್ ಮಾಡದೇ ಪರ್ಯಾಯ ವ್ಯವಸ್ಥೆಗಳನ್ನು ಆದಿಯಲ್ಲೇ ಮಾಡಬೇಕಾಗಿತ್ತು.
ಕಾಲ ಮಿಂಚಿ ಹೋದರೂ ಮಂಡಿಸಲಾದ ಸಮಿತಿಯ ವರದಿಗಳ ಅನುಷ್ಠಾನ ಶೀಘ್ರ ಆಗಲೇ ಬೇಕಾಗಿದೆ.ಮಕ್ಕಳ ಕಲಿಕೆಯ ಹೊರೆ ತಗ್ಗಿಸಿ ಸಂತೋಷಮಯ ಸೃಜನ ಶೀಲ ಕಲಿಕೆ ಕಡೆಗೆ ಮುಖ ಮಾಡಲೇ ಬೇಕು. ಸಾಹಿತ್ಯ,ಕಲೆ,ಸಂಸ್ಕೃತಿ,ಮೌಲ್ಯ, ಪರಿಸರ ಪ್ರೇಮ, ದೇಶಪ್ರೇಮ, ಯೋಗಾಭ್ಯಾಸ, ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಲೇ ಬೇಕು. ಹೊಸ ಶಿಕ್ಷಣ ನೀತಿ ಈ ನಿಟ್ಟಿನಲ್ಲಿ ಬೆಳಕು ಚೆಲ್ಲ ಬಹುದೇನೋ ....ಕಾದು ನೋಡಬೇಕಾಗಿದೆ.
ಮುಚ್ಚಿರುವ ಶಾಲಾ ಕಾಲೇಜುಗಳು ಹೊಸರೂಪದೊಂದಿಗೆ ಬೆಳಕಿಗೆ ಬರಲಿ. ಈಗಾಗಲೇ ಸಂಕಷ್ಟಕ್ಕೊಳಗಾಗಿರುವ ಶಿಕ್ಷಕರ ಸಿಬ್ಬಂದಿಗಳ ಮಖದಲಿ ಮಂದಹಾಸ ಮೂಡಲಿ. ಕೆಲಸ ಕಳೆದುಕೊಂಡು ಖಿನ್ನರಾಗಿರುವ ಅದೆಷ್ಟೋ ಶಿಕ್ಷಕರ ಬದುಕಲ್ಲಿ ಮತ್ತೆ ಉದ್ಯೋಗ ದೊರೆತು ವಸಂತಾಗಮನವಾಗಲಿ.
ಮಕ್ಕಳು ನಮ್ಮ ಬದುಕು ಭವಿಷ್ಯ ಆಸ್ತಿ. ನಾವು ನಮ್ಮ ಮಕ್ಕಳನ್ನು ಈ ಸಮಾಜದಿಂದ ಶಿಕ್ಷಣದಿಂದ ಬಚ್ಚಿಡಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಒಂದು ದಿಟ್ಟ ನಿರ್ಧಾರ ಕೈಗೊಳ್ಳಲೇ ಬೇಕಾದ ಸಮಯ ಒದಗಿ ಬಂದಿದೆ. ಮಗು ಪಾಠ ಕಲಿಯಬೇಕಾದ್ದು ಮೊದಲು ಮನೆಯಲ್ಲಿ,ನಂತರ ಶಾಲಾ-ಕಾಲೇಜು ಅಂಗಳ ಮತ್ತು ಸಮಾಜದಲ್ಲಿ. ಆತಂಕ ಭಾವಬಿಟ್ಟು ದೃಢ ನಿರ್ಧಾರದ ಆಶಯದೊಂದಿಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗೋಣ. ಹಣತೆ ಹಚ್ಚುವ ಕಲಿಕೆ ಕಾಯಕಕೆ ಮುಂದಾಗೋಣ.
-ನಾರಾಯಣ ರೈ ಕುಕ್ಕುವಳ್ಳಿ.
ಪ್ರಧಾನ ಸಂಪಾದಕರು
ಮಧುಪ್ರಪಂಚ ಮಾಧುರಿ ಪುತ್ತೂರು.ದಕ
إرسال تعليق