ಸಕ್ಷಮ ಕೋವಿಡ್ ಆಕ್ಷನ್ ನೆಟ್ವರ್ಕ್ (ಸ್ಕ್ಯಾನ್) ಲೋಕಾರ್ಪಣೆ
ಮಂಗಳೂರು: ಸಕ್ಷಮ-ಕರ್ನಾಟಕದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಸ್ಕ್ಯಾನ್ [SCAN ] -ಸಕ್ಷಮ ಕೋವಿಡ್ ಆಕ್ಷನ್ ನೆಟ್ವರ್ಕ್ ಎಂಬ ವಿಶೇಷ ಚೇತನರಿಗಾಗಿ ರಾಜ್ಯಮಟ್ಟದ ಕೋವಿಡ್ ಸಹಾಯವಾಣಿಯ ಲೋಕಾರ್ಪಣಾ ಕಾರ್ಯಕ್ರಮವು ಸೋಮವಾರ (ಜೂ.21) ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣರಿಂದ ವರ್ಚುಯಲ್ ಮೀಟಿಂಗ್ನಲ್ಲಿ ನೆರವೇರಿತು.
ರಾಷ್ಟ್ರೀಯ ದಿವ್ಯಾಂಗ ಸಹಾಯವಾಣಿಗೆ ತಮ್ಮ ಮೊಬೈಲಿನಿಂದ ಕರೆಮಾಡಿ ಮಾತನಾಡುವ ಮೂಲಕ ಉದ್ಘಾಟಿಸಿದ ಉಪಮುಖ್ಯಮಂತ್ರಿಗಳು, ಸಕ್ಷಮ ಸಂಘಟನೆಯು ಸದ್ದಿಲ್ಲದೇ ಹಾಗೂ ಪ್ರಚಾರ ಬಯಸದೆ ಸೇವಾ ಮನೋಭಾವದಿಂದ ದಿವ್ಯಾಂಗರಿಗಾಗಿ ಮಾಡುತ್ತಿರುವ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಕೋವಿಡ್ ನಂತಹ ಮಾರಕ ರೋಗದಿಂದ ಬಸವಳಿದ ದಿವ್ಯಾಂಗರಿಗೆ ಅರೋಗ್ಯ ಹಾಗು ಲಸಿಕೆ ಕೊಡುವಂತಹ ಸಕಾಲಿಕ ಹಾಗೂ ಸತ್ಕಾರ್ಯವನ್ನು ಪ್ರಶಂಸಿಸಿ ಸರಕಾರವು ಸಕ್ಷಮದೊಂದಿಗೆ ಇಂತಹ ಸೇವಾಕಾರ್ಯಗಳನ್ನು ನೆರವೇರಿಸಲು ಸಂಪೂರ್ಣ ಸಹಕರಿಸುತ್ತದೆ ಎಂದರು.
ಸರಕಾರವು ಈಗಾಗಲೇ ಹಲವಾರು ಕಾರ್ಯಯೋಜನೆಗಳನ್ನು ದಿವ್ಯಾಂಗರಿಗಾಗಿ ರೂಪಿಸಿದೆ. ಸಕ್ಷಮವು ದಿವ್ಯಾಂಗರಿಗಾಗಿ ಬಿ. ಪಿ .ಎಲ್ ಕಾರ್ಡ್ ಮಾಡಿಸಲು ಆದಷ್ಟು ಸಹಕರಿಸಿ ಅವರಿಗೆ ಸರಕಾರದಿಂದ ಸಿಗುವ ಹೆಚ್ಚಿನ ಸವಲತ್ತುಗಳನ್ನು ತಲಪುವಂತೆ ಮಾಡಬಹುದೆಂದು ಮಾರ್ಗದರ್ಶನ ನೀಡಿದರು.
ಉದ್ಘಾಟನೆಯ ನಂತರ ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿಗಳಾದ ಡಾ .ಹರಿಕೃಷ ರೈಗಳು ಕರ್ನಾಟಕ ರಾಜ್ಯದ ದಿವ್ಯಾಂಗರ ಸಮಸ್ಯೆಗಳಾದ ಅವರ ಮಾಶಾಸನ ಸಮಸ್ಯೆ, ಅವರಿಗೆ ವಿಶೇಷ ಕೋವಿಡ್ ಪ್ಯಾಕೇಜ್ ಹಾಗು ದಿವ್ಯಾಂಗ ಆಯುಕ್ತರ ಶೀಘ್ರ ನೇಮಕಾತಿ ಕುರಿತ ಮೂರು ಮನವಿಗಳನ್ನು ಉಪಮುಖ್ಯಮಂತ್ರಿಗಳಿಗೆ ವರ್ಚುಯಲ್ ವೇದಿಕೆಯಲ್ಲಿ ಸಲ್ಲಿಸಿದರು.
ನಂತರ ಮಾತಾನಾಡಿದ ಸಕ್ಷಮ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ವಿನೋದ್ ಪ್ರಕಾಶ್ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಕ್ಷಮದ ಸ್ಕ್ಯಾನ್ ಸಹಾಯವಾಣಿಯು ಕೋವಿಡ್ ಸಂಕಷ್ಟ ಸಮಯದಲ್ಲಿ ದಿವ್ಯಾಂಗರ ಸಮಸ್ಯೆಗಳಿಗೆ ಮಮತೆಯಿಂದ ಕೇಳಿಸುವ ಕಿವಿಯಾಗಿ ಅವರನ್ನು ಸಂತೈಸಲಿದೆ ಹಾಗೂ ಇಂತಹ ಕಷ್ಟಕಾಲದಲ್ಲಿ ಅವರ ಸಮಸ್ಯೆಯನ್ನು ಆಲಿಸಿ ಸ್ಪಂದಿಸುವ ಸ್ವರಗಳಿಂದ ಅವರ ಅರ್ಧದಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಅಂತಹ ಕೆಲಸವನ್ನು ಸಕ್ಷಮ ಮಾಡಲಿದೆಯೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಯೂಥ್ ಫಾರ್ ಸೇವಾ ಸಂಘಟನೆಯ ಸಂಸ್ಥಾಪಕರೂ ಹಾಗೂ ಮಾರ್ಗದರ್ಶಕರಾದ ವೆಂಕಟೇಶ್ ಮೂರ್ತಿಯವರು ಕೋವಿಡ್ ಸಮಯದಲ್ಲಿ ದಿವ್ಯಾಂಗರಿಗೆ ಬೇಕಾದ ವಿಶೇಷ ಸಾಧನಗಳ ಬಗ್ಗೆ ಗಮನಹರಿಸಿ ಅಂತಹ ತಾಂತ್ರಿಕ ಸಾಧನಗಳನ್ನು ತಯಾರಿಸಲು ತಂತ್ರಜ್ಞಾನದ ಅವಶ್ಯಕತೆ ಹಾಗೂ ಎಲ್ಲ ಕಟ್ಟಡಗಳು ದಿವ್ಯಾಂಗ ಸ್ನೇಹಿಯಾಗಿರಬೇಕೆಂದು ಆಶಯ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಸಕ್ಷಮದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಡಾ. ಸುಕುಮಾರ್ ರವರು ಕೋವಿಡ್ ಮೂರನೆಯ ಅಲೆಯ ಸಿದ್ದತೆಯ ಭಾಗವಾಗಿ ಸಕ್ಷಮ ಇಂತಹ ಯೋಜನೆಯನ್ನು ದಿವ್ಯಾಂಗರ ಅರೋಗ್ಯ ರಕ್ಷಣೆ ಹಾಗು ಅವರ ನೆರವಿಗಾಗಿ ರಾಷ್ಟ್ರವ್ಯಾಪಿಯಾಗಿ ಕಾರ್ಯಗತಗೊಳಿಸಿದೆ ಎಂದು ಸ್ಕ್ಯಾನ್ ಯೋಜನೆಯ ಮಹತ್ವವನ್ನು ವಿವರಿಸಿದರು.
ಸಕ್ಷಮ ದಕ್ಷಿಣ ಪ್ರಾಂತದ ಅಧ್ಯಕ್ಷರಾದ ಡಾ. ಸುಧೀರ್ ಪೈ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸ್ಕ್ಯಾನ್ ನಂತಹ ದಿವ್ಯಾಂಗ ಸೇವಾ ಯೋಜನೆಯನ್ನು ಕಾರ್ಯಗತಗೊಳಿಸಲು ಸಮಾಜಕ್ಕಾಗಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಲು ಸಿದ್ಧರಿರುವ ಸ್ವಯಂಸೇವಕರ ತಂಡದ ಅವಶ್ಯಕತೆಯನ್ನು ಹೇಳುತ್ತಾ ಸಕ್ಷಮದ ಯುವ ಕಾರ್ಯಕರ್ತರನ್ನು ಪ್ರೋತ್ಸಾಹಿಸಿದರು.
ಇದೇ ಕಾರ್ಯಕ್ರಮದಲ್ಲಿ ಕಲಾ ಸಕ್ಷಮ ಯೋಜನೆಯಡಿಯಲ್ಲಿ ವಿನೋದ್ ಪ್ರಕಾಶರಿಂದ ರಚನೆಯಾದ ಹಾಗೂ ಶೃಂಗೇರಿಯ ಸಂಸ್ಕೃತ ಪಂಡಿತರಾದ ಡಾ. ನಾರಾಯಣ ರಾಯ್ಕರ್ ರಿಂದ ಸಂಗೀತ ಸಂಯೋಜನೆಯಾದ 3 ಹಾಡುಗಳನ್ನು ಬಿಡುಗಡೆಗೊಳಿಸಲಾಯಿತು.
ಸಕ್ಷಮ ಬೆಂಗಳೂರು ತಂಡದ ದೃಷ್ಟಿಬಾಧಿತ ಪ್ರಕೋಷ್ಠದ ಪ್ರಮುಖರಾದ ಕು. ಕವಿತಾ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮವನ್ನು ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿಗಳಾದ ಡಾ. ಹರಿಕೃಷ್ಣ ರೈ ನಿರೂಪಣೆ ಮಾಡಿದರು, ರಾಜ್ಯ ಕಾರ್ಯದರ್ಶಿಗಳಾದ ವಸಂತ್ ಮಾಧವರವರು ಸ್ವಾಗತಿಸಿದರು ಹಾಗೂ ಪ್ರಾಂತ ಸಹ ಖಜಾಂಚಿಗಳಾದ ರಮೇಶ್ ಪ್ರಭು ವಂದಿಸಿದರು. ಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
إرسال تعليق